ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತವರಿಗೆ ಸಚಿವಗಿರಿಯಿಲ್ಲ ಎಂಬ ಮಾಧುಸ್ವಾಮಿ ನಿಲುವು ವೈಯಕ್ತಿಕ: ಆರ್‌. ಅಶೋಕ

ಸಂಪುಟ ವಿಸ್ತರಣೆ: ಆರ್‌.ಅಶೋಕ ಅಭಿಮತ
Last Updated 27 ಜನವರಿ 2020, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸಚಿವ ಸಂಪುಟ ವಿಸ್ತರಣೆಯಂತೂ ನಿಶ್ಚಿತ. ಸೋತವರಿಗೆ ಸ್ಥಾನವಿಲ್ಲ, ಹಿರಿಯರು ತ್ಯಾಗ ಮಾಡಬೇಕು ಎಂಬ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ನಿಲುವು ವೈಯಕ್ತಿಕ’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

‘ಸಂಪುಟ ಪುನರ್‌ರಚನೆ ಇಲ್ಲ,ವಿಸ್ತರಣೆ ಆಗುವುದಂತೂ ನಿಶ್ಚಿತ. ಶೀಘ್ರ ಅದು ಕೈಗೂಡಲಿದೆ. ಸರ್ಕಾರ ರಚನೆಗೆ ಕಾರಣಕರ್ತರಾದವರಿಗೆ ಸಚಿವ ಸ್ಥಾನ ನೀಡಲೇಬೇಕಾಗುತ್ತದೆ. ಅದನ್ನು ಮಾಡಲಾಗುತ್ತದೆ. ಉಳಿದಂತೆ ಯಾರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂಬುದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟದ್ದು’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರವೇ ಹೇಳುವುದಾದರೆ ಸೋತವರಿಗೆ ಸಚಿವ ಸ್ಥಾನ ನೀಡಲು ಬರುವುದಿಲ್ಲ, ಅವರು ಯಾವುದೇ ಒಂದು ಸದನಕ್ಕೆ ಆಯ್ಕೆಯಾದ ಮೇಲಷ್ಟೇ ಸಂಪುಟಕ್ಕೆ ಸೇರಿಸಿಕೊಳ್ಳಬಹುದಷ್ಟೇ. ಹೀಗಾಗಿ ಸದ್ಯ ಅವರಿಗೆ ಸ್ಥಾನ ನೀಡುವ ಪ್ರಶ್ನೆಯೇ ಇಲ್ಲ. ಸೋತವರಿಗೆ ಏನು ಹೇಳಬೇಕು ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸುತ್ತಾರೆ’ ಎಂದು ಅಶೋಕ ವಿವರಿಸಿದರು.

ಸಿದ್ದರಾಮಯ್ಯಗೆ ಟೀಕೆ: ‘ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ‘ಫ್ರೀ ಕಾಶ್ಮೀರ’ ಘೋಷಣೆ ಕೂಗಿದವರನ್ನು ಬೆಂಬಲಿಸಿದವರು. ಕೆಎಫ್‌ಡಿ, ಎಸ್‌ಡಿಪಿಐಗಳನ್ನು ಈ ಹಿಂದೆ ಬೆಂಬಲಿಸಿ ಅವಮಾನಗೊಂಡಿರುವ ಅವರು ಭಾರತ ಪರ ಇದ್ದಾರೋ, ಪಾಕ್ ಪರ ಇದ್ದಾರೋ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಅಶೋಕ ಹೇಳಿದರು.

‘ಸಂವಿಧಾನ ತೆಗೆದುಹಾಕಲು ಆರ್‌ಎಸ್‌ಎಸ್ ಸಂಚು ನಡೆಸಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೊದಲು ಕಾಂಗ್ರೆಸ್ ಉಳಿಸಿಕೊಳ್ಳಲು ಅವರು ಕರೆ ಕೊಡಲಿ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ಮಾಡಲು ಅವರಿಗೆ ಯೋಗ್ಯತೆ ಇಲ್ಲ. ತುರ್ತು ಪರಿಸ್ಥಿತಿ ಸಮಯದಲ್ಲಿ ಭೂಗತರಾಗಿ ಹೋರಾಡಿ ಮತ್ತೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಆರ್‌ಎಸ್‌ಎಸ್‌ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ’ ಎಂದು ಕುಟುಕಿದರು.

ಕಪಾಲಿಬೆಟ್ಟ: ಕಪಾಲಿಬೆಟ್ಟದಲ್ಲಿ ಯಾವುದೇ ಅನುಮತಿ ಇಲ್ಲದೆ ಮೋರಿ, ರಸ್ತೆ, ಕಟ್ಟಡ ಕಟ್ಟುವ ಪ್ರಯತ್ನ ನಡೆದಿದೆ. ಈಗ ಕೇಳಿದರೆ ಯಾರಿಂದಲೂ ಸರಿಯಾದ ಉತ್ತರವೇ ಇಲ್ಲ.ತರಾತುರಿಯಲ್ಲಿ ಯಾವುದನ್ನೂ ತೀರ್ಮಾನಿಸುವುದಿಲ್ಲ’ ಎಂದರು.

***

ಬಿಜೆಪಿ ಸೇರಿದ ಶಾಸಕರು ಅತಂತ್ರರಾಗಿಲ್ಲ, ಕಾಂಗ್ರೆಸ್‌ನಲ್ಲಿ ಅತಂತ್ರರಾಗಿರುವುದು ಸಿದ್ದರಾಮಯ್ಯನವರೇ. ಅದಕ್ಕಾಗಿಯೇ ವಕೀಲ ವೃತ್ತಿ ಮಾಡಲು ಅರ್ಜಿ ಹಾಕಿದ್ದಾರೆ

– ಆರ್‌.ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT