ಸಂಪುಟ ಸೇರಲು ಪಟ್ಟು

7
ಕಾಂಗ್ರೆಸ್‌ ಪಾಳೆಯದಲ್ಲಿ ವಿಸ್ತರಣೆಗೆ ಹೆಚ್ಚುತ್ತಿದೆ ಒತ್ತಡ

ಸಂಪುಟ ಸೇರಲು ಪಟ್ಟು

Published:
Updated:

ಬೆಂಗಳೂರು: ಬೆಳಗಾವಿಯಲ್ಲಿ ಇದೇ 10ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡಲೇಬೇಕೆಂಬ ಒತ್ತಡ ಕಾಂಗ್ರೆಸ್‌ ಪಾಳೆಯದಲ್ಲಿ ಹೆಚ್ಚುತ್ತಿದೆ.

ನಗರದ ಶಾಂಗ್ರೀಲಾ ಹೋಟೆಲ್‌ನಲ್ಲಿ ಸಭೆ ನಡೆಸಿದ 10ಕ್ಕೂ ಹೆಚ್ಚು ಶಾಸಕರು, ಇದೇ 5ರಂದು ನಡೆಯಲಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಗೂ ಮೊದಲು ಸಂಪುಟ ವಿಸ್ತರಣೆ ಕುರಿತು ತೀರ್ಮಾನಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

‘ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ಮಾಡಿರಲಿಲ್ಲ. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಕೂಡ ಸಿದ್ಧರಿಲ್ಲ’ ಎಂದು ಕೆಲವು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಶಾಸಕರಿಬ್ಬರ ನೇತೃತ್ವದಲ್ಲಿ ಇದೇ 3 ಅಥವಾ 4ರಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಶಾಸಕರು ತೀರ್ಮಾನಿಸಿದ್ದಾರೆ.

ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆ ಮುಂದೂಡಲು ಅವಕಾಶ ನೀಡಬಾರದು. ಖರ್ಗೆ ಜೊತೆ ಸಮಾಲೋಚಿಸಿದ ಬಳಿಕ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್‌ ಪಟೇಲ್‌ ಅವರನ್ನು ಭೇಟಿ ಮಾಡಲು ಮತ್ತು ಬಳಿಕ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಮೇಲೆ ಒತ್ತಡ ಹೇರಲು ಈ ಗುಂಪು ಮುಂದಾಗಿದೆ. 

ತೀವ್ರಗೊಂಡ ಲಾಬಿ: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿದ ಶಾಸಕರು ಲಾಬಿ ತೀವ್ರಗೊಳಿಸಿದ್ದಾರೆ. ರಾಮಲಿಂಗಾರೆಡ್ಡಿ, ಆರ್.ಬಿ. ತಿಮ್ಮಾಪೂರ ಅವರು ದಿನೇಶ್‌ ಜೊತೆ ಚರ್ಚೆ ನಡೆಸಿದ್ದಾರೆ.

ನಾನೇ ಮನವಿ ಮಾಡಿದ್ದೆ: ಸಿಎಂ

‘ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಭಾಗವಹಿಸುತ್ತೇನೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರಿಗೆ ನಾನೇ ಹೇಳಿದ್ದೆ’ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

'ಶಾಸಕರ ಯಾವುದೇ ಸಮಸ್ಯೆಗಳ ಬಗ್ಗೆ ನೇರವಾಗಿ ಚರ್ಚಿಸಲು ಅವಕಾಶ ಕೇಳಿದ್ದೆ. ಯಾವುದೇ ಗೊಂದಲ ಇದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳಲು ಅವಕಾಶವಾಗುತ್ತದೆ ಎಂಬ ಕಾರಣಕ್ಕೆ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !