ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಸೇವಾ ಭದ್ರತೆಗೆ ಸುಗ್ರೀವಾಜ್ಞೆ

1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ರಕ್ಷಣೆ
Last Updated 28 ಮೇ 2019, 2:27 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್ ತೀರ್ಪಿನಿಂದ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ 1998ನೇ ಸಾಲಿನ 28 ಗೆಜೆಟೆಡ್ ಅಧಿಕಾರಿಗಳಿಗೆ ಸೇವಾ ಭದ್ರತೆ ಕಲ್ಪಿಸಲು ಹಾಗೂ ಹಿಂಬಡ್ತಿ ಆತಂಕ ಎದುರಿಸುತ್ತಿದ್ದ ಅಧಿಕಾರಿಗಳಿಗೆ ರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ‘20 ವರ್ಷ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನು ಈ ಹಂತದಲ್ಲಿ ಹುದ್ದೆಯಿಂದ ತೆಗೆಯುವುದು ಸರಿಯಲ್ಲ ಎಂಬ ಕಾರಣಕ್ಕೆ ಸೇವಾ ಭದ್ರತೆ ನೀಡಲು ತೀರ್ಮಾನಿಸಲಾಗಿದೆ. ಒಂದು ಬಾರಿಗೆ ಮಾತ್ರ ಈ ನಿಯಮ ಜಾರಿಯಲ್ಲಿ ಇರಲಿದೆ’ ಎಂದರು.

ಕೆಪಿಎಸ್‌ಸಿ ಪ್ರಕಟಿಸಿದ 1998ನೇ ಸಾಲಿನ ಪರಿಷ್ಕೃತ ಆಯ್ಕೆ ಪ್ರಕಾರ ಹುದ್ದೆ ಕಳೆದುಕೊಳ್ಳುವ ಅಧಿಕಾರಿಗಳ ಬದಲಿಗೆ 28 ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಬೇಕಿದೆ. ಹೊಸದಾಗಿ ನೇಮಕಗೊಳ್ಳುವವರಿಗೆ ನೇಮಕಗೊಳ್ಳಬೇಕಾದ ಅವಧಿಯಿಂದ ಈವರೆಗಿನ ವೇತನ, ಬಡ್ತಿ ಜೊತೆ ಹುದ್ದೆ ನೀಡಲಾಗುವುದು. (ಈ ಪೈಕಿ ಒಬ್ಬರು ನಿಧನರಾಗಿದ್ದು, ಮತ್ತೊಬ್ಬರು ನಿವೃತ್ತಿ ವಯಸ್ಸು ದಾಟಿದ್ದಾರೆ). ಅಲ್ಲದೆ, ಈ ಸಾಲಿನಲ್ಲಿ ನೇಮಕಗೊಂಡಿದ್ದ 140 ಅಧಿಕಾರಿಗಳು ವಿವಿಧ ಇಲಾಖೆಗಳಿಗೆ ಸ್ಥಾನಪಲ್ಲಟಗೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘ಕೋರ್ಟ್ ಆದೇಶದ ಅನ್ವಯವೇ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ, ನೇಮಕಾತಿ ಪ್ರಾಧಿಕಾರದ ನ್ಯೂನತೆಗಳಿಂದಾಗಿ ಅಭ್ಯರ್ಥಿಗಳು ಹುದ್ದೆ ಕಳೆದುಕೊಳ್ಳುವ ಮತ್ತು ಹಿಂಬಡ್ತಿಯ ಆತಂಕ ಎದುರಿಸುತ್ತಿದ್ದಾರೆ. ಅಭ್ಯರ್ಥಿಗಳು ಯಾವುದೇ ತಪ್ಪು ಮಾಡದೇ ಇರುವುದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ’ ಎಂದು ಅವರು ಸಮರ್ಥನೆ ನೀಡಿದರು.

‘ನೇಮಕಗೊಂಡ ಅಭ್ಯರ್ಥಿಗಳ ಕುರಿತು ತನ್ನ ತೀರ್ಪಿನಲ್ಲಿ ಹೈಕೋರ್ಟ್‌ ಏನೂ ಹೇಳಿಲ್ಲ. ಆದರೆ, ಮುಂದಿನ ದಿನಗ
ಳಲ್ಲಿ ತನಿಖೆ ನಡೆದು, ಅಭ್ಯರ್ಥಿಗಳು ತಪ್ಪು ಮಾಡಿರುವುದು ಸಾಬೀತಾದರೆಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.

453 ಹುದ್ದೆ ಭರ್ತಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 2ನೇ ದರ್ಜೆ ಕಾರ್ಯದರ್ಶಿ 358 ಹುದ್ದೆಗಳು ಹಾಗೂ ದ್ವಿತೀಯ ದರ್ಜೆ ಸಹಾಯಕರು 95 ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

₹ 377 ಕೋಟಿಗೆ ಒಪ್ಪಿಗೆ: ರಾಜ್ಯದ15 ಕಡೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣ ಮಾಡಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ‘ಕ್ರೈಸ್‌’ ಸಂಸ್ಥೆಗೆ ₹377 ಕೋಟಿ ನೀಡಲು ಒಪ್ಪಿಗೆ ಕೊಡಲಾಗಿದೆ.

ರಾಯಚೂರಿಗೆ ಪ್ರತ್ಯೇಕ ವಿ.ವಿ
ಗುಲಬರ್ಗಾ ವಿಶ್ವವಿದ್ಯಾಲಯವನ್ನು ವಿಭಜಿಸಿ ಪ್ರತ್ಯೇಕವಾಗಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಯಾದಗಿರಿ ಜಿಲ್ಲೆ ಸಹ ಹೊಸ ವಿ.ವಿ ವ್ಯಾಪ್ತಿಗೆ ಬರಲಿದೆ.

ನೂತನ ವಿ.ವಿ ಆರಂಭಿಸುವ ಸಂಬಂಧ ಸುಗ್ರೀವಾಜ್ಞೆ ಜಾರಿ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜನರ ಸಾಕಷ್ಟು ವರ್ಷಗಳ ಬೇಡಿಕೆಗೆ ಸ್ಪಂದಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಐಎಎಸ್‌ ಅಧಿಕಾರಿಗಳಿಗೆ ಹಿಂಬಡ್ತಿಯಿಂದ ರಕ್ಷಣೆ
ಹೈಕೋರ್ಟ್‌ ತೀರ್ಪಿನಿಂದ ಏಳು ಐಎಎಸ್‌ ಅಧಿಕಾರಿಗಳು ಹಿಂಬಡ್ತಿಯ ಆತಂಕ ಎದುರಿಸುತ್ತಿದ್ದರು.

ಹೈಕೋರ್ಟ್‌ ತೀರ್ಪು ಪಾಲನೆ ಆಗಿಲ್ಲ ಎಂದು ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಜೂನ್‌ 10ರಂದು ನಡೆಯಲಿದೆ. ಆದರೆ, ಈ ಏಳೂ ಅಧಿಕಾರಿಗಳು ಕೆಪಿಎಸ್‌ಸಿ ಪ್ರಕಟಿಸಿದ ಪರಿಷ್ಕೃತ ಪಟ್ಟಿಗೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ (ಸಿಎಟಿ) ಈಗಾಗಲೇ ತಡೆ ಆದೇಶ ತಂದಿದ್ದಾರೆ. ಸುಗ್ರೀವಾಜ್ಞೆ ಜಾರಿಯಾದರೆ ಈ ಅಧಿಕಾರಿಗಳು ಹಿಂಬಡ್ತಿಗೆ ಒಳಗಾಗದಂತೆ ಕಾನೂನಿನ ರಕ್ಷಣೆ ಪಡೆಯಲಿದ್ದಾರೆ.

ಅಷ್ಟೇ ಅಲ್ಲ, ಒಂದೊಮ್ಮೆ ಹಿಂಬಡ್ತಿಗೊಂಡಿದ್ದರೆ, ಐಎಎಸ್‌ಗೆ ಬಡ್ತಿ ಪಡೆಯಲು ಕಾಯುತ್ತಿದ್ದ ಅಷ್ಟೇ ಸಂಖ್ಯೆಯ ಅಧಿಕಾರಿಗಳಿಗೂ ಮುಂಬಡ್ತಿ ಪಡೆಯವ ಅವಕಾಶವನ್ನೂ ಈ ಸುಗ್ರೀವಾಜ್ಞೆ ಕಲ್ಪಿಸಲಿದೆ.

ಸಂಪುಟ ಸಭೆ ಪ್ರಮುಖ ನಿರ್ಣಯಗಳು
* ಜಿಂದಾಲ್‌ಗೆ 3,667 ಎಕರೆ ಜಮೀನು ಮಾರಾಟ ಅನುಮೋದನೆ
* ₹ 91 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಯ ಟೆಂಡರ್‌ಗೆ ಒಪ್ಪಿಗೆ
* ಗುಲಬರ್ಗಾ ವಿ.ವಿ ಪ್ರತ್ಯೇಕಿಸಿ ರಾಯಚೂರು ವಿ.ವಿ ಸ್ಥಾಪನೆಗೆ ಸುಗ್ರೀವಾಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT