ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.9 ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

₹311 ಕೋಟಿ ಬಿಡುಗಡೆಗೆ ಸಚಿವ ಸಂಪುಟದಲ್ಲಿ ನಿರ್ಧಾರ
Last Updated 14 ಜೂನ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಹಾಗೂ ಮಾನ್ಯತೆ ಪಡೆದ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದೇ ಶೈಕ್ಷಣಿಕ ವರ್ಷದಿಂದ ಲ್ಯಾಪ್‌ಟಾಪ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, ‘ಈ ಯೋಜನೆಯಡಿ 1,09,916 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಸಿಗಲಿದೆ. ಇದಕ್ಕಾಗಿ ₹ 311 ಕೋಟಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಯಿತು’ ಎಂದು ಹೇಳಿದರು.

ಲ್ಯಾಪ್‌ಟಾಪ್‌ ಪೂರೈಕೆಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ವಿತರಣೆ ಮಾಡಲಾಗುವುದು. ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ನೀಡುವುದಿಲ್ಲ. ಸರ್ಕಾರ ನೀಡಿದ ಲ್ಯಾಪ್‌ಟಾಪ್‌ ಮೂರು ವರ್ಷವೂ ಬಳಕೆ ಆಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದೂ ಅವರು ಸ್ಪಷ್ಟಪಡಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ ನೀಡಲಾಗುತ್ತಿತ್ತು. ಇತರೆ ಸಮುದಾಯದ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ನೀಡಬೇಕು ಎಂಬ ಬೇಡಿಕೆ ಬಂದಿತ್ತು. ಎರಡು ವರ್ಷಗಳ ಹಿಂದೆ ಕೈಗೊಂಡಿದ್ದ ನಿರ್ಣಯವನ್ನು ಈಗ ಕಾರ್ಯಗತಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಜಿಂದಾಲ್‌ಗೆ ಭೂಮಿ: ಪರಿಶೀಲನೆಗೆ ಉಪಸಮಿತಿ
ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಿಕೊಡುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಸಚಿವ ಸಂಪುಟ ಸಭೆಯ ತೀರ್ಮಾನದ ಮರು ಪರಿಶೀಲನೆಗೆ ಸಂಪುಟ ಉಪಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.

ಜಮೀನು ಮಾರಾಟದಿಂದ ಆಗುವ ಸಾಧಕ– ಬಾಧಕಗಳ ಬಗ್ಗೆ ಉಪಸಮಿತಿ ಪರಾಮರ್ಶೆ ನಡೆಸಿ, ವರದಿ ಸಲ್ಲಿಸಲಿದೆ. ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ವಿವಾದದ ಕಾರಣ ತಾವು ಸಮಿತಿಯಲ್ಲಿ ಇರುವುದಿಲ್ಲ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು. ಸಮಿತಿಯ ಅಧ್ಯಕ್ಷ, ಸದಸ್ಯರ ನೇಮಕದ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರಿಗೇ ವಹಿಸಲಾಗಿದೆ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ದೇವಸ್ಥಾನ ಸಿಬ್ಬಂದಿ ವೇತನ ಹೆಚ್ಚಳ
ಮುಜರಾಯಿ ಇಲಾಖೆ ಅಧೀನದಲ್ಲಿರುವ 34,558 ದೇವಸ್ಥಾನಗಳ ಸುಮಾರು 3,500 ಅರ್ಚಕರು ಮತ್ತು ಇತರ ಸಿಬ್ಬಂದಿ ವೇತನ ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಪರಿಷ್ಕರಣೆಯಾದ ಬಳಿಕ ಆಗುವ ವೆಚ್ಚ ದೇವಸ್ಥಾನಗಳ ಆದಾಯದ ಶೇ 30 ರ ಮಿತಿಗೆ ಒಳಪಟ್ಟಿರಬೇಕು ಎಂಬ ನಿಯಮ ವಿಧಿಸಲಾಗಿದೆ. ಅರ್ಚಕರಲ್ಲದೆ ‘ಸಿ’ ಮತ್ತು ‘ಡಿ’ ದರ್ಜೆ ಸಿಬ್ಬಂದಿ ಇದ್ದು, ಅವರು ಸರ್ಕಾರಿ ನೌಕರರಲ್ಲ. ಅವರ ವೇತನ ಅತ್ಯಂತ ಕಡಿಮೆ ಇದ್ದುದರಿಂದ ಪರಿಷ್ಕರಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಈಗ ₹6000– ₹13,000 ವೇತನ ಪಡೆಯುತ್ತಿರುವವರು ಪರಿಷ್ಕೃತಗೊಂಡಾಗ ₹11,600– ₹24,600 ಪಡೆಯಲಿದ್ದಾರೆ. ಅದೇ ರೀತಿ ‘ಬಿ’ ದರ್ಜೆ ದೇವಸ್ಥಾನಗಳಲ್ಲಿ ₹5,500– ₹12,200 ಪಡೆಯುತ್ತಿರುವವರು ₹7,275– ₹17,250 ಪಡೆಯಲಿದ್ದಾರೆ ಎಂದರು.

*
ಜಿಂದಾಲ್‌ಗೆ ಭೂಮಿ ಮಾರಾಟದ ವಿಷಯವನ್ನು ಉಪ ಸಮಿತಿಗೆ ವಹಿಸಿರುವ ಹಿಂದೆ ಹುನ್ನಾರ ಹಾಗೂ ಜನರಿಗೆ ವಂಚಿಸುವ ತಂತ್ರ ಅಡಗಿದೆ.
-ಬಿ.ಎಸ್‌. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT