ಸೋಮವಾರ, ಜೂಲೈ 13, 2020
22 °C
ಸಚಿವ ಸಂಪುಟದಲ್ಲಿ ತೀರ್ಮಾನ * ಕ್ಷೌರಿಕರು, ಚಾಲಕರು ನಿರಾಳ

ಪ್ಯಾಕೇಜ್‌ ಪರಿಹಾರ; ಷರತ್ತುಗಳ ಸಡಿಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ಷೌರಿಕ ವೃತ್ತಿಯಲ್ಲಿರುವವರು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ₹5,000 ಲಾಕ್‌ಡೌನ್‌ ಪ್ಯಾಕೇಜ್‌ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ಷರತ್ತುಗಳನ್ನು ಕೈಬಿಡಲು ಸರ್ಕಾರ ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಕಠಿಣ ಷರತ್ತುಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೆಲವು ಅಗತ್ಯ ದಾಖಲೆ ಇದ್ದರೆ  ಪರಿಹಾರ ನೀಡಬಹುದು. ಒಂದು ವೇಳೆ ಚಾಲಕರು ಮತ್ತು ಕ್ಷೌರಿಕ ವೃತ್ತಿಯಲ್ಲಿರುವವರ ಸಂಖ್ಯೆ ಹೆಚ್ಚಳವಾದರೂ ಎಲ್ಲರಿಗೂ ಪರಿಹಾರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸುದ್ದಿಗಾರರಿಗೆ ತಿಳಿಸಿದರು. 

ಮೆಕ್ಕೆಜೋಳ ಬೆಳೆಯುವ ಎಲ್ಲ ರೈತರಿಗೆ ಮುಂಗಾರು ಮತ್ತು ಹಿಂಗಾರು ಹಂಗಾಮು ಸೇರಿ ₹5,000 ಪರಿಹಾರ ನೀಡಲಾಗುವುದು. ಈ ಹಿಂದೆ ಹಿಂಗಾರಿ ಬೆಳೆಗೆ ಮಾತ್ರ ಎಂದು ಹೇಳಲಾಗಿತ್ತು ಎಂದರು.

ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

* ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಹೋಬಳಿ ಮೋಟ್ಲೂರು ಗ್ರಾಮದ ಸರ್ವೆ ನಂಬರ್ 18 ರಲ್ಲಿ 2 ಎಕರೆ 20 ಗುಂಟೆ ಜಮೀನು ಕವಿ ನಿಸಾರ್ ಅಹಮದ್‌ ಕುಟುಂಬಕ್ಕೆ ಸೇರಿದ ನಿಸಾರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಎಜುಕೇಷನಲ್‌ ಟ್ರಸ್ಟ್‌ಗೆ ಮಂಜೂರು

* ವಿಧಾನಪರಿಷತ್‌ನ 5 ಸ್ಥಾನಗಳಿಗೆ ನಾಮಕರಣ ಮಾಡುವ ಅಧಿಕಾರ ಮುಖ್ಯಮಂತ್ರಿ ಹೆಗಲಿಗೆ

* ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕೊಳವೂರು ಗ್ರಾಮ ಸನ್ನಿಕಾಯಿ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ₹19.95 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ 

* ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ ಒಂದು ಲಕ್ಷ ಬಹು ಮಹಡಿ ವಸತಿ ಯೋಜನೆ ಪ್ಯಾಕೇಜ್ 6, 9ಎ ಮತ್ತು 9 ಬಿ ಗಳಲ್ಲಿ ಬರುವ 15,113 ಬಹುಮಹಡಿ ಮನೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲು ಗುತ್ತಿಗೆದಾರರ ಜತೆ ಮಾಡಿಕೊಂಡ ಕರಾರಿಗೆ ಅನುಮೋದನೆ

* ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೂತನವಾಗಿ ಜಿಲ್ಲಾ ಔಷಧದ ಉಗ್ರಾಣಗಳನ್ನು₹ 18.80 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ

* ಕುಷ್ಠರೋಗಿಗಳನ್ನು ‘ಸಾಂಕ್ರಾಮಿಕ’ ರೋಗಿಗಳು ಎಂದು ಕರೆಯಬೇಕು. ಇದಕ್ಕಾಗಿ ಕಾಯ್ದೆಗೆ ತಿದ್ದುಪಡಿ. ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ತಿದ್ದುಪಡಿ

ಪಿಎಸ್‌ಐ ನೇಮಕಾತಿ ವಯೋಮಿತಿ ಹೆಚ್ಚಳ

ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ನೇಮಕಾತಿಯ ಗರಿಷ್ಠ ವಯೋಮಿತಿ ಹೆಚ್ಚಿಸಲು  ಸರ್ಕಾರ ನಿರ್ಧರಿಸಿದೆ.

ಸಾಮಾನ್ಯ ವರ್ಗಕ್ಕೆ 28 ವರ್ಷದಿಂದ 30 ಕ್ಕೆ, ಪರಿಶಿಷ್ಟ ಜಾತಿ/ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಇದ್ದ 30 ವರ್ಷದ ವಯೋಮಿತಿಯನ್ನು 32 ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಒಂದು ಅವಧಿಯ ನೇಮಕಾತಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.

ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಈಗಾಗಲೇ  ಅಧಿಸೂಚನೆ ಹೊರಡಿಸಿರುವ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೂ ಇದು ಅನ್ವಯವಾಗಲಿದೆ.  ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ವಯೋಮಿತಿ ಹೆಚ್ಚಿಸುವಂತೆ ಒತ್ತಾಯ ಮಾಡಿದ್ದರು. 2015ರಿಂದಲೂ ಈಡೇರದೇ ಇದ್ದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು