ಕೇಬಲ್‌, ಡಿಟಿಎಚ್‌ ಅವ್ಯವಸ್ಥೆ: ಗ್ರಾಹಕರಿಗೆ ಹೊರೆ

ಸೋಮವಾರ, ಮಾರ್ಚ್ 25, 2019
33 °C
ಟ್ರಾಯ್‌ ನೀತಿ l ತಾಂತ್ರಿಕ ಸಮಸ್ಯೆಯೇ ಗೊಂದಲಕ್ಕೆ ಕಾರಣl ಕೇಬಲ್‌ ಆಪರೇಟರ್‌ಗಳ ಅಳಲು

ಕೇಬಲ್‌, ಡಿಟಿಎಚ್‌ ಅವ್ಯವಸ್ಥೆ: ಗ್ರಾಹಕರಿಗೆ ಹೊರೆ

Published:
Updated:
Prajavani

ಬೆಂಗಳೂರು: ಡಿಟಿಎಚ್‌ ಮತ್ತು ಕೇಬಲ್‌ ಚಾನೆಲ್‌ಗಳಿಗೆ ಸಂಬಂಧಿಸಿದಂತೆ ಟ್ರಾಯ್‌ ರೂಪಿಸಿರುವ ಹೊಸ ದರ ಪಟ್ಟಿ ವ್ಯವಸ್ಥೆಯನ್ನು ಸುಗಮವಾಗಿ ಜಾರಿಗೊಳಿಸಲಾಗದೇ ಎಂಎಸ್‌ಒ ಮತ್ತು ಕೇಬಲ್‌ ಆಪರೇಟರ್‌ಗಳು ಗ್ರಾಹಕರಲ್ಲಿ ಗೊಂದಲ ಹುಟ್ಟು ಹಾಕಿದ್ದಾರೆ.

‘ಈ ಗೊಂದಲಕ್ಕೆ ನಾವು ಕಾರಣರಲ್ಲ. ಸರ್ವರ್‌ನ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ. ಸರ್ವರ್‌ ಲೋಡ್‌ ತೆಗೆದುಕೊಳ್ಳುತ್ತಿಲ್ಲ. ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿಲ್ಲ’ ಎಂದು ಕೇಬಲ್‌ ಮತ್ತು ಡಿಟಿಎಚ್‌ ಆಪರೇಟರ್‌ಗಳು ಹೇಳಿದ್ದಾರೆ.

‘ನಾವು ಕೇಳಿದ ಚಾನೆಲ್‌ಗಳು ಸಿಗುತ್ತಿಲ್ಲ. ಅನವಶ್ಯಕ ಚಾನೆಲ್‌ಗಳನ್ನು ಮಾತ್ರ ನೀಡಲಾಗುತ್ತಿದೆ’ ಎಂಬುದು ಗ್ರಾಹಕರ ದೂರು. ‘ಈಗಿನ ತಾಂತ್ರಿಕ ಸಮಸ್ಯೆ ಪರಿಸ್ಥಿತಿ ನಮ್ಮ ಕೈ ಮೀರಿ ಹೋಗಿದೆ. ಗ್ರಾಹಕರಿಂದ ಆಯ್ಕೆಯ ಚಾನೆಲ್‌ಗಳ ಪಟ್ಟಿಯನ್ನು ಪಡೆದಿದ್ದೇವೆ. ಅವರು ಕೇಳಿದ 25 ಚಾನೆಲ್‌ಗಳನ್ನು ಫೀಡ್‌ ಮಾಡಿದರೆ, ಸರ್ವರ್‌ನಲ್ಲಿ 20 ಚಾನೆಲ್‌ಗಳು ಮಾತ್ರ ಅಪ್‌ಡೇಟ್‌ ಆಗುತ್ತಿದೆ’ ಎಂಬುದು ಕೇಬಲ್‌ ಆಪರೇಟರ್‌ಗಳ ಸಮಜಾಯಿಷಿ.

ಸಮಸ್ಯೆ ಏನು: ಟ್ರಾಯ್‌ ನಿಯಮಾವಳಿ ಪ್ರಕಾರ, ₹ 154 ಕ್ಕೆ ದೂರದರ್ಶನದ 26 ಮತ್ತು ಫ್ರೀಟು ಏರ್‌ (ಉಚಿತ) 74 ಚಾನೆಲ್‌ಗಳನ್ನು (ಬೇಸಿಕ್‌ ಪ್ಯಾಕ್‌)ಪ್ರಸಾರ ಮಾಡಬೇಕು. ಆದರೆ, ಅದನ್ನು ಸಮರ್ಪಕವಾಗಿ ಜಾರಿ ಮಾಡದೇ ಮನಸ್ಸಿಗೆ ಬಂದ ಚಾನೆಲ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಅಲ್ಲದೇ, ಜಾಹೀರಾತು ಪ್ರಸಾರ ಮಾಡುವ ಚಾನೆಲ್‌ಗಳನ್ನೇ ಅಧಿಕ ಸಂಖ್ಯೆಯಲ್ಲಿ ಉಚಿತ ಚಾನಲ್‌ಗಳ ಹೆಸರಿನಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶ.

ಈ ನಿಯಮಾವಳಿ ಜಾರಿಗೆ ಬಂದ ಬಳಿಕ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆಗಳಲ್ಲಿ ಗ್ರಾಹಕರ ಬೇಡಿಕೆಗೆ ಕೇಬಲ್‌ ಆಪರೇಟರ್‌ಗಳು ಸ್ಪಂದಿಸುತ್ತಿಲ್ಲ. ಕೆಲವು ಕಡೆಗಳಲ್ಲಿ ಚಾನೆಲ್‌ಗಳ ಆಯ್ಕೆಗೆ ಆಪರೇಟರ್‌ಗಳು ದರ ಪಟ್ಟಿಯೊಂದನ್ನು ಮನೆ– ಮನೆಗಳಿಗೆ ವಿತರಿಸಿ ಹೋಗಿದ್ದಾರೆ. ಆದರೆ, ಅವುಗಳನ್ನು ಮತ್ತೆ ಸಂಗ್ರಹಿಸುವ ಗೋಜಿಗೆ ಹೋಗಿಲ್ಲ. ಗ್ರಾಹಕರು ದೂರವಾಣಿ ಕರೆ ಮಾಡಿ ತಮ್ಮ ಇಷ್ಟದ ನಿರ್ದಿಷ್ಟ ಚಾನೆಲ್‌ಗಳ ಹೆಸರು ಹೇಳಿ, ಸಂಪರ್ಕ ಪಡೆಯಲು ದುಂಬಾಲು ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರ ಜಾರಿ ತಂದ ನಿಯಮದ ಪ್ರಕಾರ ಗ್ರಾಹಕರ ಆಯ್ಕೆಯ ಚಾನೆಲ್‌ಗಳನ್ನೇ ನೀಡಬೇಕು. ಆದರೆ, ಇದಕ್ಕೆ ಬೆಲೆ ಕೊಡದ ಕೇಬಲ್‌ ಆಪರೇಟರ್‌ಗಳು ತಮಗೆ ಬೇಕಾದಂತೆ ಹೊಸ ಹೊಸ ಪ್ಯಾಕೇಜ್‌ಗಳನ್ನು ಸೃಷ್ಟಿಸಿ ಗ್ರಾಹಕರ ಮುಂದಿಡುತ್ತಿದ್ದಾರೆ. ಕನ್ನಡದ ಗ್ರಾಹಕರಿಗೆ ಅನಗತ್ಯವಾಗಿ ಅನ್ಯ ಭಾಷೆಗಳ ಹತ್ತಾರು ಚಾನೆಲ್‌ಗಳನ್ನು ಹೇರಲಾಗುತ್ತಿದೆ. ಕಡಿಮೆ ಹಣದಲ್ಲಿ ತಮಗೆ ಬೇಕಾದ ಉತ್ತಮ ಚಾನೆಲ್‌ಗಳನ್ನು ಆಯ್ಕೆ ಅವಕಾಶದಿಂದ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ. 

ಚಾನೆಲ್‌ಗಳ ಗುಚ್ಛವನ್ನೂ ಕೇಬಲ್‌ ಆಪರೇಟರ್‌ಗಳು ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸಿದ ಗ್ರಾಹಕರಿಗೆ ಗೊಂದಲ ಮೂಡಿಸುತ್ತಿದ್ದಾರೆ. ಉದಾಹರಣೆಗೆ; ಕಲರ್ಸ್‌ 20 ಚಾನೆಲ್‌ಗಳ ಪ್ಯಾಕೇಜ್‌ಗೆ ₹25 ಇದ್ದರೆ, ಕೇಬಲ್‌ ಆಪರೇಟರ್‌ ಕಲರ್ಸ್‌ನ ಒಂದೊ– ಎರಡೊ ಚಾನೆಲ್‌ಗಳನ್ನು ನೀಡಿ ₹25 ಶುಲ್ಕ ವಸೂಲಿ ಮಾಡುತ್ತಾರೆ. ಉಳಿದ ಚಾನೆಲ್‌ ನೀಡಬೇಕು ಎಂದರೆ ಹೆಚ್ಚುವರಿ ಹಣ ಕೇಳುತ್ತಾರೆ ಎಂಬುದು ಗ್ರಾಹಕರ ದೂರು.

ತಾಂತ್ರಿಕ ಸಮಸ್ಯೆಯೇ ಗೊಂದಲಕ್ಕೆ ಕಾರಣ

‘ಗೊಂದಲಗಳಿಗೆ ತಾಂತ್ರಿಕ ಸಮಸ್ಯೆಯೇ ಕಾರಣ. ತಾಂತ್ರಿಕ ಸಮಸ್ಯೆ ಸರಿಪಡಿಸಲು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇವೆ. ಆದರೂ ಸರಿ ಹೋಗದೇ ನಮಗೇ ತುಂಬ ಸಮಸ್ಯೆ ಆಗಿದೆ’ ಎಂದು ಕರ್ನಾಟಕ ಕೇಬಲ್‌, ಡಿಜಿಟಲ್‌ ಆಪರೇಟರ್‌ ಅಸೋಸಿಯೇಷನ್‌ ಅಧ್ಯಕ್ಷ ಮಲ್ಲರಾಜೇ ಅರಸ್‌ ಹೇಳಿದ್ದಾರೆ.

‘ಸಾಕಷ್ಟು ಚಾನೆಲ್‌ಗಳು ಆ್ಯಕ್ಟಿವೇಟ್‌ ಆಗುತ್ತಿಲ್ಲ. ಹ್ಯಾಂಗ್ ಆಗುತ್ತಿದೆ. ಸರ್ವರ್‌ ಲೋಡ್‌ ತೆಗೆದುಕೊಳ್ಳುತ್ತಿಲ್ಲ. ಸರ್ವರ್ ಮಾರ್ಚ್‌ 21 ರ ವೇಳೆಗೆ ಸರಿ ಹೋಗಬಹುದು ಎಂಬ ಮಾಹಿತಿ ಇದೆ. ಶೇ 80 ರಷ್ಟು ಗ್ರಾಹಕರು ತಮ್ಮ ಇಚ್ಛೆಯ ಚಾನೆಲ್‌ಗಳ ಆ್ಯಕ್ಟಿವೇಟ್‌ ಮಾಡಿಸಿಕೊಂಡರೆ, ಸಮಸ್ಯೆ ಸರಿ ಹೋಗಬಹುದು. ಶೇ 20 ರಷ್ಟು ಗ್ರಾಹಕರು ಮಾತ್ರ ಆ್ಯಕ್ಟಿವೇಟ್‌ಗೆ ಬೇಡಿಕೆ ಸಲ್ಲಿಸಿದ್ದಾರೆ’ ಎಂದರು.

 

ಬರಹ ಇಷ್ಟವಾಯಿತೆ?

 • 24

  Happy
 • 2

  Amused
 • 4

  Sad
 • 2

  Frustrated
 • 13

  Angry

Comments:

0 comments

Write the first review for this !