ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ನೀರಾವರಿ ಯೋಜನೆಗಳಲ್ಲಿ ಅಕ್ರಮ

₹35.87ಕೋಟಿಯಿಂದ ₹86.47 ಕೋಟಿಗೆ ಹೆಚ್ಚಿದ ಕಾಮಗಾರಿ ವೆಚ್ಚ: ಸಿಎಜಿ ವರದಿಯಲ್ಲಿ ಪತ್ತೆ
Last Updated 12 ಜನವರಿ 2019, 19:26 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಅನುದಾನದ ಅಡಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ನೀರಾವರಿ ಯೋಜನೆಗಳಲ್ಲಿ ಸಾಕಷ್ಟು ಅಕ್ರಮಗಳಾಗಿವೆ ಎಂದು ಮಹಾಲೇಖಪಾಲ (ಸಿಎಜಿ) ವರದಿ ಪತ್ತೆ ಮಾಡಿದೆ.

ಕಳೆದ ವಾರ ಮುಗಿದ ಚಳಿಗಾಲದ ಅಧಿವೇಶನದಲ್ಲಿ ಸಿಎಜಿ ಈ ವರದಿ ಮಂಡಿಸಿದ್ದು, ಹಲವು ಯೋಜನೆಗಳಲ್ಲಿ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಅಕ್ರಮ ನೆರವು ಒದಗಿಸಿದೆ ಎನ್ನುವುದೂ ಇದರಿಂದ ತಿಳಿದುಬಂದಿದೆ.

ಕ್ಷಿಪ್ರ ನೀರಾವರಿ ಸೌಲಭ್ಯ ಯೋಜನೆ (ಎಐಬಿಪಿ) ಅಡಿಯಲ್ಲಿ ಕೇಂದ್ರ ಸರ್ಕಾರ 2008ರಿಂದ 2017ರ ಅವಧಿಗೆ ಕರ್ನಾಟಕದಭಾರಿ, ಮಧ್ಯಮ ಹಾಗೂ ಸಣ್ಣ ನೀರಾವರಿ ಯೋಜನೆಗಳಿಗೆ ಒಟ್ಟು ₹25 ಸಾವಿರ ಕೋಟಿ ನೆರವು ನೀಡಿದ್ದು, ಇವುಗಳಿಗೆ ಸಂಬಂಧಿಸಿ ಸಿಎಜಿ ತನಿಖೆ ನಡೆಸಿದೆ.

ತುಂಗಾ ಮೇಲ್ದಂಡೆ ಯೋಜನೆಯಲ್ಲಿ 2014ರ ಜೂನ್ 6ರಿಂದ 2014ರ ಜುಲೈ 23ರವರೆಗೆ ಐದು ಬಾರಿ ನಕಲಿ ಸಹಿ ಮಾಡಿ ಚೆಕ್‌ ಮೂಲಕ ₹98 ಲಕ್ಷಪಡೆಯಲಾಗಿದೆ. 2016 ಡಿಸೆಂಬರ್ ತನಕ ಇದರಲ್ಲಿ ₹ 51 ಲಕ್ಷ ವಸೂಲು ಮಾಡಲಾಗಿದೆ. ಉಳಿದ ₹47 ಲಕ್ಷ ಇನ್ನೂ ವಸೂಲಾಗಿಲ್ಲ. ಇದೇ ಯೋಜನೆಯಲ್ಲಿಭೂಮಿ ಸ್ವಾಧೀನ ಎಂದು₹32 ಲಕ್ಷ ಪರಿಹಾರ ಬಿಡುಗಡೆಯಾಗಬೇಕಿತ್ತು. ಆದರೆ ವಂಚನೆ ಎಸಗಿ ₹2.63 ಕೋಟಿ ಪರಿಹಾರ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಯೋಜನೆ ಪೂರ್ಣಗೊಳಿಸುವಲ್ಲಿ ವಿಳಂಬವಾಗಿದ್ದಕ್ಕೆ ₹6.47 ಕೋಟಿ ದಂಡ ವಿಧಿಸುವುದಕ್ಕೆ ಬದಲಾಗಿ ರಾಜ್ಯ ಸರ್ಕಾರ ಕೇವಲ ₹59 ಲಕ್ಷ ದಂಡ ವಿಧಿಸಿದೆ.

ಹಾವೇರಿ ಜಿಲ್ಲೆಯ ಗುಡ್ಡದ ಮಲ್ಲಾಪುರ ಏತನೀರಾವರಿ ಯೋಜನೆಗೆ ಸಂಬಂಧಿಸಿ, ₹35.87 ಕೋಟಿ ವೆಚ್ಚದ ಕಾಮಗಾರಿಯನ್ನು ಮೊದಲಿಗೆ ಒಬ್ಬ ಗುತ್ತಿಗೆದಾರನಿಗೆ ನೀಡಲಾಗಿತ್ತು. ಆದರೆ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವ ಕಾರಣದಿಂದ ಮತ್ತೊಬ್ಬ ಗುತ್ತಿಗೆದಾರನಿಗೆ ₹86.47 ಕೋಟಿಗೆ ಈಕಾಮಗಾರಿ ನೀಡಲಾಯಿತು.

ಆದರೆ ನಷ್ಟ ಹಾಗೂಜಾತಿ ಕಾರಣ ನೀಡಿ, ಮೊದಲ ಗುತ್ತಿಗೆದಾರನಿಂದ ಹೆಚ್ಚುವರಿ ವೆಚ್ಚ ₹50.6 ಕೋಟಿ ವಸೂಲು ಮಾಡಿಲ್ಲ. ಇದರಿಂದಾಗಿ ಆ ಗುತ್ತಿಗೆದಾರ ₹50 ಕೋಟಿ ಅಕ್ರಮವಾಗಿ ಪಡೆದಂತಾಗಿದೆ.

ವಿಳಂಬದಿಂದ ಹೆಚ್ಚು ಹಣ ವೆಚ್ಚ: ಹಲವು ಯೋಜನೆಗಳ ಅನುಷ್ಠಾನ ವಿಳಂಬವಾಗಿದ್ದರಿಂದ, ಮೂಲ ಅಂದಾಜು ವೆಚ್ಚಕ್ಕಿಂತಹೆಚ್ಚುವರಿ ಹಣ ಖರ್ಚಾಗಿದೆ. ಬೆಳಗಾವಿ ಜಿಲ್ಲೆಯ ಶ್ರೀರಾಮೇಶ್ವರ ಯೋಜನೆಯಲ್ಲಿ ₹126.43 ಕೋಟಿ ಹಾಗೂ ಉಡುಪಿಯ ವಾರಾಹಿ ಯೋಜನೆಯಲ್ಲಿ ₹143.02 ಕೋಟಿ ಹೆಚ್ಚುವರಿ ಖರ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಕ್ರಮವಾಗಿ ₹187.19 ಕೋಟಿ ಬಿಡುಗಡೆ

ರಾಜ್ಯ ಜಲಸಂಪನ್ಮೂಲ ಇಲಾಖೆ ನಿಯಮದ ಅನುಸಾರ,ಯೋಜನೆ ಪೂರ್ಣಗೊಳ್ಳುವ ಮೊದಲು, ಅಂದಾಜು ವೆಚ್ಚದ ಶೇ 25 ಮೊತ್ತವನ್ನು ಮಾತ್ರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಬೇಕು. ಆದರೆ,ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯಲ್ಲಿ, ಪೂರ್ಣಗೊಳ್ಳುವ ಮೊದಲೇ ಶೇ 90ರಷ್ಟು ಹಣ ಬಿಡುಗಡೆ ಮಾಡಲಾಗಿದೆ.ಅಂದರೆ ಗುತ್ತಿಗೆದಾರರಿಗೆ ಅಕ್ರಮವಾಗಿ ₹187.19 ಕೋಟಿ ಪಾವತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT