ಮಂಗಳವಾರ, ಅಕ್ಟೋಬರ್ 15, 2019
26 °C
ಹಿಮಂತ್‌ಸಿಂಗ್‌ ಕಾ ಸೀಡೆ ಕಂಪನಿಗೆ ₹315 ಕೋಟಿ ರಿಯಾಯಿತಿ: ಸಿಎಜಿ

ಸಿದ್ದರಾಮಯ್ಯ ಅವಧಿಯ ಜವಳಿ ನೀತಿ ವಿಫಲ

Published:
Updated:

ಬೆಂಗಳೂರು: ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ‘ಜವಳಿ ನೀತಿ 2013–18’ ಉದ್ದೇಶ ಸಾಧಿಸುವಲ್ಲಿ ವಿಫಲವಾಗಿದೆ ಎಂದು ಭಾರತದ ಮಹಾ ಲೆಕ್ಕ ಪರಿಶೋಧಕರ ವರದಿ (ಸಿಎಜಿ) ಹೇಳಿದೆ.

2018ರ ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವಲಯದ ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿ
ಯೂರಪ್ಪ ಗುರುವಾರ ಮಂಡಿಸಿದರು.

ಜವಳಿ ವಲಯದ ಅಭಿವೃದ್ಧಿಗಾಗಿ ನೀತಿ ರೂಪಿಸಲಾಗಿತ್ತು. ಆದರೆ, ಉದ್ದೇಶಿತ ಗುರಿ ಸಾಧನೆಗೆ ಬೇಕಾದ ಸಮಗ್ರ ದತ್ತಾಂಶ ಹಾಗೂ ಯೋಜನೆಯೇ ಇಲ್ಲದೇ ನೀತಿ ರೂಪಿಸಲಾಗಿತ್ತು. ₹10 ಸಾವಿರ ಕೋಟಿ ಹೂಡಿಕೆ ಹಾಗೂ 5 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ಪ್ರತಿಪಾದಿಸಲಾಗಿತ್ತು. ಆದರೆ, ಹೂಡಿಕೆಯಲ್ಲಿ ಶೇ 37ರಷ್ಟು ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಶೇ 24ರಷ್ಟು ಮಾತ್ರ ಸಾಧನೆಯಾಗಿದೆ. 

ಸಹಕಾರ ಕ್ಷೇತ್ರದಲ್ಲಿ ಕೈಮಗ್ಗ ಹಾಗೂ ನೂಲಿನ ಗಿರಣಿಗಳ ಪುನರಾರಂಭದ ಆಶಯಗಳೂ ಈಡೇರಲಿಲ್ಲ. ಹೂಡಿಕೆದಾರರ ಖಾತ್ರಿಯಿಲ್ಲದೇ  ಸಮಗ್ರ ಜವಳಿ ಪಾರ್ಕ್‌ ನಿರ್ಮಿಸುವ ಯೋಜನೆ ರೂಪಿಸಿದ್ದರಿಂದಾಗಿ ಅವು ಕೂಡ ತಲೆ ಎತ್ತಲಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಬಳಿ ಬೈನರಿ ಆಪರಲ್ ಪಾರ್ಕ್‌, ಕಲಬುರ್ಗಿ ಟೆಕ್ಸ್‌ಟೈಲ್ ಪಾರ್ಕ್‌, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆ ಕುಡುತಿನಿಯಲ್ಲಿ ಜವಳಿ ಪಾರ್ಕ್‌ಗಳು ಪೂರ್ಣ ಪ್ರಮಾಣದಲ್ಲಿ ತಲೆ ಎತ್ತಲಿಲ್ಲ. ಕಲಬುರ್ಗಿಯಲ್ಲಂತೂ ಭೂಮಿ ಮಟ್ಟ ಮಾಡುವಿಕೆ ಬಿಟ್ಟರೆ ಬೇರೇನೂ ಆಗಲಿಲ್ಲ. ಆದರೆ, ನೀಡಲು ಉದ್ದೇಶಿಸಿದ್ದ ರಿಯಾಯಿತಿಯನ್ನು ಮಾತ್ರ ಸರ್ಕಾರ ನೀಡಿತು ಎಂದು ವರದಿ ಆಕ್ಷೇಪಿಸಿದೆ.

ಹಿಮತ್‌ಸಿಂಗ್‌ಕಾಗೆ ₹315 ಕೋಟಿ: ಜವಳಿ ಉದ್ಯಮ ಸ್ಥಾಪಿಸಲು ವಿಶೇಷ ಪ್ಯಾಕೇಜ್ ರೂಪಿಸಲಾಗಿತ್ತು. 2015ರಲ್ಲಿ ಹಾಸನದಲ್ಲಿ ಶೇ 100 ರಷ್ಟು ರಫ್ತು ಉದ್ದೇಶದ 3 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ಅನುಷ್ಠಾನ ಮಾಡುವುದಾಗಿ ಹಿಮತ್ ಸಿಂಗ್‌ ಕಾ ಸೀಡೆ ಪ್ರೈವೇಟ್ ಲಿಮಿಟೆಡ್‌ ಮುಂದೆ ಬಂದಿತ್ತು. ₹1325 ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿ ಹೇಳಿತ್ತು. ಸರ್ಕಾರದ ನಿಯಮಾನುಸಾರ ₹116.25 ಕೋಟಿ ಪ್ರೋತ್ಸಾಹ ಧನ ನೀಡಬೇಕಾಗಿತ್ತು. ಅದರ ಬದಲು ₹430 ಕೋಟಿ ರಿಯಾಯಿತಿಯ ಪ್ಯಾಕೇಜ್‌ನ್ನು ಸರ್ಕಾರ ಮಂಜೂರು ಮಾಡಿತು. ಆದರೆ,ಈ ಕಂಪನಿಯು ಇಷ್ಟು ದೊಡ್ಡ ಮೊತ್ತದ ರಿಯಾಯಿತಿ ಪಡೆಯಲು ಅರ್ಹಘಟಕವೇ ಆಗಿರಲಿಲ್ಲ ಎಂದು ವರದಿ ತಕರಾರು ಎತ್ತಿದೆ.

ಶಿವಮೊಗ್ಗದ ಶಾಹಿ ಎಕ್ಸ್‌ ಪೋರ್ಟ್ಸ್‌ ಹಾಗೂ ದೊಡ್ಡ ಬಳ್ಳಾಪುರದ ಸ್ಕಾಟ್ಸ್‌ ಗಾರ್ಮೆಂಟ್ಸ್‌ಗಳು ಕೂಡ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಷರತ್ತನ್ನು ಪೂರೈಸಲು ವಿಫಲವಾಗಿದ್ದವು. ಆಗ ₹17.18 ಕೋಟಿ ರಿಯಾಯಿತಿಯನ್ನು ಸರ್ಕಾರ ಕಡಿತ ಮಾಡಿತು. ಆದರೆ, ರಾಜ್ಯದ ಬೇರೆ ಕಡೆ 75 ಸಾವಿರ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಹೇಳಿದ್ದರಿಂದಾಗಿ ನಿಯಮಬಾಹಿರವಾಗಿ ಷರತ್ತು ಬದಲಿಸಿರಿಯಾಯಿತಿ ನೀಡಲಾಯಿತು.

‘ಇ–ಮಾರ್ಕೆಟ್‌’ ನಿಯಮಬಾಹಿರ ವಸೂಲಿ

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಲ್ಲಿ ಪಾರದರ್ಶಕತೆ ಹಾಗೂ ರೈತಾನುಕೂಲ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಇ–ಮಾರ್ಕೆಟ್‌ ‍ಪದ್ಧತಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಹಾಗೂ ಸೌಲಭ್ಯಗಳೇ ಇಲ್ಲದೇ ನಿಯಮಬಾಹಿರವಾಗಿ ವಸೂಲಿ ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಏಕೀಕೃತ ಮಾರುಕಟ್ಟೆ ಹಾಗೂ ಇ–ಹರಾಜು ವೇದಿಕೆಯು 32 ಎಪಿಎಂಸಿಗಳಲ್ಲಿ ಮಾತ್ರ ಲಭ್ಯವಿದೆ. ಆದರೆ, ಕೃಷಿ ಉತ್ಪನ್ನಗಳ ಗ್ರೇಡಿಂಗ್‌ ವ್ಯವಸ್ಥೆ ಎಲ್ಲ ಕಡೆಯೂ ಲಭ್ಯವಿಲ್ಲ. ರೈತರ ಖಾತೆಗೆ ನೇರ ಹಣ ಪಾವತಿ ವ್ಯವಸ್ಥೆ ಕೂಡ ಸಮರ್ಪಕವಾಗಿ ಜಾರಿಯಾಗಿಲ್ಲ. ಸೌಲಭ್ಯ ಇಲ್ಲದೇ ಇದ್ದರೂ ಮಾರಾಟವಾದ ಉತ್ಪನ್ನಗಳ ಮೌಲ್ಯದ ಮೇಲೆ ವ್ಯವಹಾರ ಶುಲ್ಕ ಸಂಗ್ರಹಿಸುವ  ರಾಷ್ಟ್ರೀಯ ಇ–ಮಾರ್ಕೆಟ್ ಸರ್ವೀಸಸ್‌ ಪ್ರೈ ಲಿಮಿಟೆಡ್‌ಗೆ ₹63.95 ಕೋಟಿ ಅನುಚಿತ ಲಾಭವಾಯಿತು ಎಂದು ವರದಿ ಹೇಳಿದೆ.

ಇ–ಹರಾಜಿನ ಮೂಲಕ ಎಪಿಎಂಸಿಗಳಿಗೆ ಆಗುವ ಆವಕವು ಐದು ವರ್ಷಗಳ ಅವಧಿಯಲ್ಲಿ ಅಲ್ಪ ಏರಿಕೆಯಾಗಿದೆ. ಹೊರಗಿನ ಮಾರುಕಟ್ಟೆಯ ಪ್ರಭಾವವೇ ಜಾಸ್ತಿಯಿದೆ. ಕೆಲವೊಮ್ಮೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಇ–ಹರಾಜಿನಲ್ಲಿ ಮಾರಾಟವಾಗಿದೆ ಎಂದೂ ವರದಿ ವಿವರಿಸಿದೆ.

Post Comments (+)