ಭಾನುವಾರ, ಅಕ್ಟೋಬರ್ 20, 2019
21 °C
ಶಿಕ್ಷಣ ಇಲಾಖೆ ಪ್ರಗತಿಗೆ ಪ್ರಸ್ತಾಪ

ಹಣವಿದ್ದರೂ ಸೌಕರ್ಯ ಕಲ್ಪಿಸಲು ವಿಫಲ: ಸಿಎಜಿ ವರದಿಯಲ್ಲಿ ಬಹಿರಂಗ

Published:
Updated:

ಬೆಂಗಳೂರು: ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣದ ಗುಣಮಟ್ಟ ಸುಧಾರಿಸುವ ಸಲುವಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ, ಬಳಸಿಕೊಳ್ಳುವಲ್ಲಿ ರಾಜ್ಯ ಶಿಕ್ಷಣ ಇಲಾಖೆ ವಿಫಲವಾಗಿರುವುದು ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಬೆಳಕಿಗೆ ಬಂದಿದೆ.

2016–17ರಲ್ಲಿ ₹601 ಕೋಟಿ ಲಭ್ಯವಿದ್ದರೂ ₹329 ಕೋಟಿ ಬಳಸಿಕೊಳ್ಳಲಾಗಿದೆ. 2017–18ರಲ್ಲಿ ₹607 ಕೋಟಿಯಲ್ಲಿ ₹328 ಕೋಟಿಯಷ್ಟೇ ಖರ್ಚಾಗಿದೆ. ಕಳೆದ 9 ವರ್ಷಗಳಿಂದ ಆರ್ಥಿಕ ನೆರವು ಬರುತ್ತಿದ್ದರೂ ಸಮರ್ಪಕವಾಗಿ ಬಳಕೆಯಾಗಿಲ್ಲ. ಕಂಪ್ಯೂಟರ್ ಶಿಕ್ಷಣ, ಪ್ರಯೋಗಾಲಯ, ಪೀಠೋಪಕರಣಗಳ ಖರೀದಿಗೆ ಈ ಹಣ ಬಳಕೆ ಮಾಡುವ ಬದಲು ಶಾಲಾ ಕಟ್ಟಡಗಳ ನಿರ್ಮಾಣ, ಉನ್ನತೀಕರಣ ಮಾಡಲು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಮಕ್ಕಳು ಶಿಕ್ಷಣದಿಂದ ದೂರ ಉಳಿಯುವುದನ್ನು ತಡೆಯುವ ಸಲುವಾಗಿ ನಿರ್ದಿಷ್ಟ ಅಂತರದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳನ್ನು ತೆರೆಯುವ ಬಗ್ಗೆ ‘ಕರ್ನಾಟಕ ಮುನ್ನೋಟ’ದಲ್ಲಿ ಪ್ರಸ್ತಾಪಿಸಿದ್ದರೂ ಅದು ಸಾಧ್ಯವಾಗಿಲ್ಲ. ರಾಜ್ಯದ 4361 ಪ್ರದೇಶಗಳಲ್ಲಿ ಪ್ರೌಢ ಶಿಕ್ಷಣಕ್ಕೆ ಅವಕಾಶವೇ ಇಲ್ಲವಾಗಿದೆ. ಪದವಿಪೂರ್ವ ಮಂಡಳಿ ವ್ಯಾಪ್ತಿಯಲ್ಲೇ ಪದವಿಪೂರ್ವ ಶಿಕ್ಷಣ ವಿಭಾಗ ಕಾರ್ಯ ನಿರ್ವಹಿಸುತ್ತಿದ್ದು, ಪ್ರತ್ಯೇಕಗೊಳ್ಳದೆ ಈ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಪ್ರೌಢಶಾಲೆಗಳಿಗೆ ಅಗತ್ಯ ಕೊಠಡಿಗಳ ನಿರ್ಮಾಣ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಸೌಕರ್ಯ ಒದಗಿಸುವಲ್ಲೂ ಹಿನ್ನಡೆಯಾಗಿದೆ. 2009–18ರ ಅವಧಿಯಲ್ಲಿ 2,396 ಶಾಲೆಗಳ ಉನ್ನತೀಕರಣ, ಬಲಪಡಿಸುವ ಕೆಲಸ ಆರಂಭವಾಗಿದ್ದರೂ, 1,740 ಶಾಲೆಗಳಲ್ಲಿ ಮಾತ್ರ ಈ ಕೆಲಸ ಪೂರ್ಣಗೊಂಡಿದೆ. 516 ಶಾಲೆಗಳನ್ನು ಬಲಪಡಿಸುವ ಕೆಲಸ ಇನ್ನೂ ಆರಂಭವಾಗಿಲ್ಲ. ಶಾಲೆಗಳಿಂದ ಮಕ್ಕಳು ಹೊರಗುಳಿಯುವ ಪ್ರಮಾಣವೂ ಕಡಿಮೆಯಾಗಿಲ್ಲ. ಶೇ 82ರಷ್ಟು ಮಕ್ಕಳಷ್ಟೇ ಶಾಲೆಗಳಿಗೆ ಬರುತ್ತಿದ್ದು, ಇನ್ನೂ ಶೇ 18ರಷ್ಟು ಮಂದಿ ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಎಲ್ಲ ಮಕ್ಕಳನ್ನೂ ಶಾಲೆಗೆ ಕರೆತರುವ ಕೆಲಸ ಆಗಬೇಕಿದೆ.

ಪರಿಶಿಷ್ಟರಿಗಾಗಿ 755 ಹಾಸ್ಟೆಲ್ ಕಾಮಗಾರಿ ಆರಂಭವಾಗಿದ್ದರೂ, ಅದರಲ್ಲಿ ಅರ್ಧದಷ್ಟೂ ಪೂರ್ಣಗೊಂಡಿಲ್ಲ. ನಿಯಮಗಳನ್ನು ಮೀರಿ ಗುತ್ತಿಗೆದಾರರಿಗೆ ಕಟ್ಟಡ ಕಾಮಗಾರಿ ವಹಿಸಿರುವುದಕ್ಕೆ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. 

ಕೊಠಡಿ, ಪ್ರಯೋಗಾಲಯ ಇಲ್ಲ
ಲೆಕ್ಕಪರಿಶೋಧಕರ ತಂಡ ಪರಿಶೀಲಿಸಿದ 342 ಶಾಲೆಗಳಲ್ಲಿ 22 ಶಾಲೆಗಳಲ್ಲಿ ಸಾಕಷ್ಟು ಕೊಠಡಿಗಳಿಲ್ಲ. 65ರಲ್ಲಿ ವಿಜ್ಞಾನ, ಕಂಪ್ಯೂಟರ್ ಪ್ರಯೋಗಾಲಯಗಳಿಲ್ಲ, 99ರಲ್ಲಿ ಪ್ರತ್ಯೇಕ ಗ್ರಂಥಾಲಯಗಳಿಲ್ಲ, ಶೌಚಾಲಯಗಳ ನಿರ್ವಹಣೆ ಮಾಯವಾಗಿದೆ, 73 ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಮೂಲಸೌಕರ್ಯ ಇಲ್ಲದಿದ್ದರೂ ಅಂತಹ ಶಿಕ್ಷಣ ಸಂಸ್ಥೆಗಳ ನೋಂದಣಿ ನವೀಕರಿಸಲಾಗಿದೆ. 

ಸಮಾಜ ಕಲ್ಯಾಣ: ₹52 ಕೋಟಿ ನಷ್ಟ
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಹಾಸ್ಟೆಲ್ ಕಟ್ಟಡಗಳ ನಿರ್ಮಾಣ ಏಜೆನ್ಸಿಗಳಿಗೆ 2013–18ರ ಅವಧಿಯಲ್ಲಿ ₹743 ಕೋಟಿ ಬಿಡುಗಡೆ ಮಾಡಿದ್ದಾರೆ. ಕಾಮಗಾರಿಗಳಿಗೆ ಹಣ ನೀಡುವಾಗ ಶಾಸನಬದ್ದ ಕಡಿತ ಹಾಗೂ ಹೆಚ್ಚಿನ ಭದ್ರತಾ ಠೇವಣಿ ಸಂಗ್ರಹಿಸದೆ ₹52 ಕೋಟಿ ನಷ್ಟ ಉಂಟುಮಾಡಿದ್ದಾರೆ ಎಂದು ವರದಿಯಲ್ಲಿ ಅಕ್ಷೇಪಿಸಲಾಗಿದೆ.

Post Comments (+)