ಬುಧವಾರ, ಅಕ್ಟೋಬರ್ 23, 2019
25 °C

ಅಧಿಕಾರಿಗಳ ವೈಯಕ್ತಿಕ ಖಾತೆಗಳಲ್ಲಿ ಹಣ: ಸಿಎಜಿ ವರದಿ

Published:
Updated:

ಬೆಂಗಳೂರು: ವಿವಿಧ ಇಲಾಖೆ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಠೇವಣಿ ಇಟ್ಟುಕೊಂಡಿದ್ದಾರೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಆಕ್ಷೇಪಿಸಲಾಗಿದೆ.

ಅಧಿಕಾರಿಗಳು ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಹಣವನ್ನು ಉಳಿಸಿಕೊಂಡಿದ್ದು, ಇದರಿಂದಾಗಿ ವೆಚ್ಚ ಹೊಂದಾಣಿಕೆಯಾಗುತ್ತಿಲ್ಲ. ನಿಷ್ಕ್ರಿಯಗೊಂಡಿರುವ ವೈಯಕ್ತಿಕ ಖಾತೆಗಳಲ್ಲಿ ₹4,75,03,927 ಹಣ ಇದೆ. ಒಟ್ಟು ವೆಚ್ಚದ ಶೇ 20ರಷ್ಟು ಹಣ ಇಂತಹ ಖಾತೆಗಳಲ್ಲಿ ಇದ್ದು, ಈ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾದಿಲ್ವಾರು ಬಿಲ್ಲುಗಳ ಸಲ್ಲಿಕೆ ಸಹ ದೀರ್ಘಕಾಲದಿಂದ ಬಾಳಿ ಉಳಿದಿದ್ದು, ಅಗತ್ಯ ಕ್ರಮಕೈಗೊಂಡು ಪರಿಹರಿಸಬೇಕು ಎಂದು ವರದಿಯಲ್ಲಿ ಸಲಹೆ ಮಾಡಲಾಗಿದೆ.

13 ಪ್ರಕರಣಗಳಲ್ಲಿ ಪೂರಕ ಅಂದಾಜು ರೂಪಿಸಿ ವಿವಿಧ ಯೋಜನೆಗಳಿಗೆ ₹171.53 ಕೋಟಿ ನೀಡಲಾಗಿದ್ದು, ಇಷ್ಟು ಹಣ ನೀಡುವ ಅಗತ್ಯ ಇರಲಿಲ್ಲ. ಈ ರೀತಿ ಪೂರಕ ಅಂದಾಜಿನಿಂದ ಹಣ ಪಡೆದುಕೊಂಡು ಅಗತ್ಯಕ್ಕಿಂತ ಹೆಚ್ಚು ವೆಚ್ಚಮಾಡಿರುವುದು ಕಂಡುಬರುತ್ತದೆ. 17 ಪ್ರಕರಣಗಳಲ್ಲಿ ಆರ್ಥಿಕ ವರ್ಷದ ಕೊನೆಯ ಎರಡು ದಿನಗಳ ಕೆಲಸದ ದಿನಗಳಲ್ಲಿ ₹2,246 ಕೋಟಿ ವೆಚ್ಚ ಮಾಡಲಾಗಿದೆ. ಇಂತಹ ವೆಚ್ಚಗಳಿಗೆ ನಿಯಂತ್ರಣ ಅಗತ್ಯವಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ವೆಚ್ಚ ಸುಧಾರಣಾ ಆಯೋಗದ ಶಿಫಾರಸಿನಂತೆ ಬಳಕೆದಾರರ ಕರ ಪರಿಷ್ಕರಣೆಯ ಮೂಲಕ ತೆರಿಗೆಯೇತರ ಆದಾಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದೆ. ಹುಲಿ ಸಂರಕ್ಷಣೆ ಪ್ರತಿಷ್ಠಾನಕ್ಕೆ ಸಂಬಂಧಿಸಿದ ಬಳಕೆದಾರರ ಕರ ₹46.75 ಕೋಟಿ, ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಗೆ ಸಂಗ್ರಹಿಸಿದ ವಂತಿಗೆ ₹909.96 ಕೋಟಿಯನ್ನು ರಾಜ್ಯ ಸಂಚಿತ ನಿಧಿಗೆ ಜಮೆ ಮಾಡಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 

ಶುಭಾಶಯ ಹೇಳಲು ₹22 ಲಕ್ಷ!
ಬೆಂಗಳೂರು: ಶುಭಾಶಯ ಹೇಳಲು ₹22.47 ಲಕ್ಷ ಖರ್ಚು ಮಾಡಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಹಬ್ಬದ ಸಮಯದಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಶುಭಾಶಯ, ಸಂದೇಶಗಳನ್ನು ನೀಡಲು ಅಭಿವೃದ್ಧಿಗೆ ನೀಡಬೇಕಿದ್ದ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ.

ಭಾರತದ ಮಹಾಲೇಖಪಾಲರು (ಸಿಐಜಿ) ಸಿದ್ಧಪಡಿಸಿರುವ ಪಂಚಾಯತ್ ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಾರ್ಷಿಕ ಪರಿಶೀಲನಾ ವರದಿಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದೆ. ಸಂದೇಶಗಳನ್ನು ಪ್ರಕಟಿಸಿದ ದಿನಾಂಕಗಳನ್ನು ನಮೂದಿಸದೆ, ಮಾಧ್ಯಮಗಳಲ್ಲಿ ಪ್ರಕಟವಾದ ಸಂದೇಶದ ಗಾತ್ರ, ಅಳತೆಯ ವಿವರಗಳು ಇಲ್ಲದ ವೋಚರ್‌ಗಳನ್ನು ಪಡೆದು ಬಿಲ್ ಪಾವತಿ ಮಾಡಲಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)