ಲಂಡನ್ (ಎಎಫ್‌ಪಿ): ಜೂನ್ 14ರಂದು ರಷ್ಯಾದಲ್ಲಿ ಆರಂಭವಾಗುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಖ್ಯಾತ ಪಾಪ್ ಗಾಯಕ ರಾಬಿ ವಿಲಿಯಮ್ಸ್ ಅವರು ರಂಗು ತುಂಬಲಿದ್ದಾರೆ ಎಂದು ಫಿಫಾ ಹೇಳಿದೆ.
‘ಏಂಜೆಲ್ಸ್’ ಹಾಡಿನ ಖ್ಯಾತಿಯ ಇಂಗ್ಲೆಂಡ್‌ನ ರಾಬಿ ಅವರು ರಷ್ಯಾದ ಐದಾ ಗರಿಫುಲ್ಲಿನಾ ಅವರೊಂದಿಗೆ ಸಮಾರಂಭದಲ್ಲಿ ಹಾಡಲಿದ್ದಾರೆ ಎಂದು ಅದು ತಿಳಿಸಿದೆ.
‘ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕು ಎಂಬ ಕನಸು ಈಗ ನನಸಾಗುತ್ತಿರುವುದಕ್ಕೆ ಸಂತಸವಿದೆ. ಅದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ’ ಎಂದು ರಾಬಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆ ರಾಬಿ ಅವರ ‘ಪಾರ್ಟಿ ಲೈಕ್ ಎ ರಷ್ಯನ್’ ಎಂಬ ಹಾಡು ವಿವಾದಕ್ಕೀಡಾಗಿತ್ತು. ಹಾಡಿನ ಸಾಲುಗಳು ರಷ್ಯಾ ಬಗ್ಗೆ ಹಾಗೂ ಅದರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕುರಿತು ಪೂರ್ವಗ್ರಹ ಪೀಡಿತ ನಿಲುವುಗಳನ್ನು ವ್ಯಕ್ತಪಡಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ಬ್ರೆಜಿಲ್‌ನ ಹಿರಿಯ ಫುಟ್‌ಬಾಲ್ ಆಟಗಾರ ರೊನಾಲ್ಡೊ ಅವರು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.