ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮೈಲ್‌ ಪ್ಲೀಸ್...‌ ಬದಲಿಗೆ ತರಕಾರಿ... ತರಕಾರಿ...

ಲಾಕ್‌ಡೌನ್‌ ಪರಿಣಾಮ: ಹಸಿವು ನೀಗಿಸಿಕೊಳ್ಳಲು ವೃತ್ತಿ ಬದಲಾವಣೆ
Last Updated 30 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಮದುವೆ, ಜನ್ಮದಿನಾಚರಣೆ, ನಿಶ್ಚಿತಾರ್ಥ, ಗೇಹ ಪ್ರವೇಶ... ಹೀಗೆ ನಾನಾ ಶುಭ ಸಮಾರಂಭಗಳಲ್ಲಿ ‘ಸ್ಮೈಲ್‌ ಪ್ಲೀಸ್‌’ ಎನ್ನುತ್ತಿದ್ದವರ ಬಾಯಿಯಲ್ಲಿ, ಇದೀಗ ತರಕಾರಿ... ತರಕಾರಿ.. ಎನ್ನುವ ಜೋರು ಧ್ವನಿ ಕೇಳಿಬರುತ್ತಿದೆ.

ಹೌದು, ಲಾಕ್‌ಡೌನ್‌ನಿಂದ ಕೊಡಗು ಜಿಲ್ಲೆಯ 300ಕ್ಕೂ ಹೆಚ್ಚು ಮಂದಿ ಛಾಯಾಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದು ಬಹುತೇಕರು ತರಕಾತಿ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಸಭೆ, ದೇವಸ್ಥಾನಗಳ ವಾರ್ಷಿಕೋತ್ಸವ, ಸುಗ್ಗಿ, ಜಾತ್ರೆ, ಮದುವೆ, ಕ್ರೀಡಾಕೂಟದ ಉದ್ಘಾಟನೆಗಳಿಗೆ ಬಂದು ಸಮಾರಂಭದ ದೃಶ್ಯಾವಳಿ ಸೆರೆ ಹಿಡಿದು, ಮತ್ತೆ ಮತ್ತೆ ಕಾರ್ಯಕ್ರಮ ನೆನಪಿಸುತ್ತಿದ್ದ ಫೋಟೊಗ್ರಾಪರ್ಸ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಆಗಿದ್ದು ಕಳೆದ ಎರಡು ತಿಂಗಳಿಂದಲೂ ಅವರೆಲ್ಲೂ ಸ್ಟುಡಿಯೊ ಬಂದ್ ಮಾಡಿ ಮನೆ ಸೇರಿದ್ದಾರೆ. ಕೆಲವರು ಹಸಿವು ನೀಗಿಸಿಕೊಳ್ಳಲು ಹಾಗೂ ಬದುಕು ನಡೆಸಲು ವೃತ್ತಿಯನ್ನೇ ಬದಲಾವಣೆ ಮಾಡಿಕೊಂಡಿದ್ದಾರೆ.
ಹಲವರು ಕುಶಾಲನಗರ ವ್ಯಾಪ್ತಿಯಲ್ಲಿ ತರಕಾರಿ ಹಾಗೂ ಹಣ್ಣುಗಳ ಮಾರಾಟ ಮಾಡುತ್ತಿದ್ದಾರೆ. ಉಳಿದವರು ತಮ್ಮೂರುಗಳಿಗೆ ತೆರಳಿ ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ಲಾಕ್‌ಡೌನ್‌ ತೆರವುಗೊಂಡು, ಆರ್ಥಿಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಮೇಲೆಯೇ ಸ್ಟುಡಿಯೊ ಬಾಗಿಲು ತೆರೆಯುವುದು ಎನ್ನುತ್ತಾರೆ ಛಾಯಾಗ್ರಾಹಕರು.

ಮಾರ್ಚ್‌, ಏಪ್ರಿಲ್‌, ಮೇ ತಿಂಗಳು ಮದುವೆಯ ಸುಗ್ಗಿ ಕಾಲ. ಈ ಮೂರು ತಿಂಗಳು ಹೆಚ್ಚು ಮದುವೆಗಳು ನಡೆಯುತ್ತವೆ. ಹಾಗೆಯೇ ಗೃಹ ಪ್ರವೇಶಕ್ಕೂ ಇದು ಶುಭ ಸಂದರ್ಭ. ಇದೇ ಕಾಲದಲ್ಲಿ ಕೊರೊನಾ ಲಾಕ್‌ಡೌನ್‌ ಆಗಿದ್ದು ಫೋಟೊಗ್ರಾಪರ್ಸ್‌ ವೃತ್ತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಮಾರ್ಚ್ ಹಾಗೂ ಏಪ್ರಿಲ್‌ ನಡೆಯಬೇಕಿದ್ದ ಎಲ್ಲ ಶುಭ ಕಾರ್ಯಗಳೂ ಅಕ್ಟೋಬರ್‌ಗೆ ಮುಂದೂಡಿವೆ. ಇನ್ನು ಮೇ ತಿಂಗಳಲ್ಲೂ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳೂ ಕ್ಷೀಣಿಸಿವೆ.

ಸ್ಟುಡಿಯೊ ಬಾಡಿಗೆ, ಕ್ಯಾಮೆರಾದ ಮೇಲೆ ಸಾಲ:
ಇನ್ನು ಬಹುತೇಕ ಛಾಯಾಗ್ರಾಹಕರು ಬಾಡಿಗೆ ಮಳಿಗೆಯಲ್ಲಿ ಸ್ಟುಡಿಯೊ ನಡೆಸುತ್ತಿದ್ದರು. ಅವರಿಗೆ ಬಾಡಿಗೆ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ಮದುವೆ ಫೋಟೊಗ್ರಫಿಗೆಂದು ಲಕ್ಷಾಂತರ ರೂಪಾಯಿ ವ್ಯಯಿಸಿ ಕ್ರೇನ್, ವಿಡಿಯೊ ಕ್ಯಾಮೆರಾ, ಸ್ಟಿಲ್‌ ಕ್ಯಾಮೆರಾಗಳನ್ನು ಖರೀದಿಸಿದ್ದರು. ಕೆಲಸವಿಲ್ಲದ ಕಾರಣ ಸಾಲ ಪರುಪಾವತಿ ಮಾಡುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಸದ್ಯಕ್ಕೆ ಮೂರು ತಿಂಗಳ ಸಾಲದ ಕಂತು ಮುಂದೂಡಿಕೆಯಾಗಿದೆ. ಆದರೆ, ಬಡ್ಡಿ ಕಥೆ ಗೊತ್ತಿಲ್ಲ. ಆದ್ದರಿಂದ, ನಮ್ಮ ಸಾಲವನ್ನು ಮನ್ನಾ ಮಾಡಬೇಕು ಎಂದು ಹಲವು ಛಾಯಾಗ್ರಾಹಕರು ಒತ್ತಾಯಿಸಿದರು.

ಮಳೆಗಾದಲ್ಲೂ ಇದೇ ವ್ಯಥೆ:
ಜಿಲ್ಲೆಯಲ್ಲಿ ಜೂನ್‌, ಜುಲೈ ಹಾಗೂ ಆಗಸ್ಟ್‌ನಲ್ಲಿ ವಿಪರೀತ ಮಳೆ ಸುರಿಯುತ್ತದೆ. ಆಗ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ಆಗ ಛಾಯಾಗ್ರಾಹಕರಿಗೆ ಬೇಡಿಕೆಯೂ ಇರುವುದಿಲ್ಲ. ಆಗಲೂ ಮನೆಯಲ್ಲೇ ಇರಬೇಕು ಎಂದು ಛಾಯಾಗ್ರಾಹಕರು ಅಳಲು ತೋಡಿಕೊಳ್ಳುತ್ತಾರೆ.

ಹೊರಾಂಗಣ ಛಾಯಾಗ್ರಹಣ:
ಕೊಡಗು ಪ್ರಕೃತಿ ಸೌಂದರ್ಯದ ಮಡಿಲು. ಹೊರಾಂಗಣಕ್ಕೆ ಛಾಯಾಗ್ರಹಣಕ್ಕೆ ಪ್ರಶಸ್ತ ಸ್ಥಳ. ಲಾಕ್‌ಡೌನ್‌ ಆದ ಮೇಲೆ ನವ ಜೊಡಿಗಳು, ಪ್ರೇಮಿಗಳು ಯಾರೂ ಇತ್ತ ಸುಳಿಯುತ್ತಿಲ್ಲ. ಹೊರಾಂಗಣ ಛಾಯಾಗ್ರಹಣ ಮಾಡುತ್ತಿದ್ದವರೂ ತೊಂದರೆಗೆ ಸಿಲುಕಿದ್ದಾರೆ.

ಕಲ್ಲಂಗಡಿ ವ್ಯಾಪಾರದತ್ತ ಚಿತ್ತ
ಕುಶಾಲನಗರ ಭಾಗದಲ್ಲಿ ಬಹುತೇಕ ಛಾಯಾಗ್ರಾಹಕರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಕುಶಾಲನಗರ ಪ್ರಸಿದ್ಧ ಛಾಯಾಗ್ರಾಹಕ ವಿಧಿಯಿಲ್ಲದೇ ಕಲ್ಲಂಗಡಿ ಮಾರಾಟಕ್ಕೆ ಇಳಿದಿದ್ದಾರೆ.

‘ಮನೆ ಬಾಡಿಗೆ ಪಾವತಿ ಮಾಡಲೇಬೇಕು. ನಮಗೆ ಛಾಯಾಗ್ರಹಣ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ಮತ್ತೆ ಎಲ್ಲವೂ ಚೇತರಿಕೆಯಾಗಿ ನಮಗೆಂದು ಆಹ್ವಾನ ಸಿಗುವುದೊ ಎಂಬುದು ತಿಳಿಯುತ್ತಿಲ್ಲ. ಹೀಗಾಗಿಯೇ ಅನಿವಾರ್ಯ ಕಾರಣದಿಂದ ಕಲ್ಲಂಗಡಿ ವ್ಯಾಪಾರಕ್ಕೆ ಇಳಿದಿರುವೆ. ಮನೆ ಮನೆಗೆ ಹಣ್ಣುಗಳನ್ನು ತಲುಪಿಸುತ್ತಿದ್ದೇನೆ. ಅದೇ ಈಗ ಆದಾಯದ ಮೂಲವಾಗಿದೆ’ ಎಂದು ಕೊನಿಕಾ ಕಲರ್‌ ಲ್ಯಾಬ್‌ನ ಮಾಲೀಕ ಕೆ.ಜಿ.ಪ್ರಮೋದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT