ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಕುಣಿಯತೊಡಗಿದೆ ಕುರುಡು ಕಾಂಚಾಣ...

ಮತ ಖರೀದಿಗೆ ಸಿದ್ಧವಾಗಿದೆ ನಾಯಕ ಗಢಣ: ಹೊಳೆಯಾಗಿ ಹರಿಯಲಿದೆ ಮದ್ಯ, ಮಾದಕವಸ್ತು, ಹಣ
Last Updated 30 ಮಾರ್ಚ್ 2019, 20:20 IST
ಅಕ್ಷರ ಗಾತ್ರ

ಈ ಲೋಕಸಭಾ ಚುನಾವಣೆ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಚುನಾವಣೆ. ಬಹುಶಃ, ಜಗತ್ತಿನಲ್ಲಿಯೇ ಅತ್ಯಂತ ದುಬಾರಿಯೂ ಆಗಬಹುದು ಎಂದು ಹೇಳಲಾಗುತ್ತಿದೆ. ಸ್ವಯಂ ಸೇವಕರಿಗೆ ನೀಡುವ ಹಣ, ಪ್ರಚಾರಕ್ಕಾಗಿ ತಾರೆಯರನ್ನು ಬಳಸುವುದಕ್ಕೆ ಆಗುವ ವೆಚ್ಚ, ನಾಯಕರ ಸಂಚಾರಕ್ಕೆ ಹೆಲಿಕಾಪ್ಟರ್‌, ವಿಮಾನ ಬಳಕೆಯ ಶುಲ್ಕ, ಪ್ರಚಾರ ಪರಿಕರಗಳಿಗಾಗಿ ತಗಲುವ ಖರ್ಚು ಇದರಲ್ಲಿ ಸೇರಿದೆ.

ಅದೆಲ್ಲಕ್ಕಿಂತಲೂ ಹೆಚ್ಚು ಖರ್ಚು ಬರುವ ಬಾಬತ್ತು ಎಂದರೆ ಮತದಾರರಿಗೆ ನೀಡುವ ‘ಉಡುಗೊರೆಗಳು’. ಇದರಲ್ಲಿ ನೇರವಾಗಿ ಹಂಚುವ ಹಣ, ಮದ್ಯ–ಮಾದಕ ಪದಾರ್ಥ ಪೂರೈಕೆ, ರ್‍ಯಾಲಿಗಳಿಗೆ ಅವರನ್ನು ಕರೆತರಲು ಆಗುವ ಸಾರಿಗೆ ವೆಚ್ಚ, ಬಂದವರಿಗೆ ಊಟೋಪಚಾರದ ಖರ್ಚು ಸೇರಿದೆ. ‘ಡಮ್ಮಿ’ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು, ಪಕ್ಷದ ಅಭ್ಯರ್ಥಿಗೆ ತೊಡಕಾಗಬಹುದಾದ ‘ಡಮ್ಮಿ’ ಅಭ್ಯರ್ಥಿಯನ್ನು ಖರೀದಿಸಲು ಕೂಡ ಭಾರಿ ಹಣ ವ್ಯಯವಾಗುತ್ತದೆ. ಚುನಾವಣೆ ಪ್ರಚಾರ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವಿವಿಧ ವರ್ಗಗಳ ಜನರ ಜತೆ ದೇಶದ ವಿವಿಧೆಡೆ ಇರುವ ನಮ್ಮ ವರದಿಗಾರರು ಮಾತುಕತೆ ನಡೆಸಿ ‘ಹೇಗೆ ಮತ್ತು ಎಷ್ಟು ಹಣ ಖರ್ಚಾಗುತ್ತದೆ’ ಎಂಬುದರ ಸ್ಥೂಲ ಚಿತ್ರಣವೊಂದನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ

ಆಂಧ್ರಪ್ರದೇಶ

ಆಂಧ್ರಪ್ರದೇಶದಲ್ಲಿನ ರಾಜಕೀಯ ಎಷ್ಟು ವರ್ಣರಂಜಿತವೋ ಅಷ್ಟೇ ‍ಪ‍್ರಬಲ ಪೈಪೋಟಿಯಿಂದಲೂ ಕೂಡಿದೆ. ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ನಡೆಯುತ್ತಿರುವ ಈ ಚುನಾವಣೆ ಬಹುಕೋನ ಸ್ಪರ್ಧೆಯಿಂದ ಕೂಡಿದೆ. ಪ್ರತಿಷ್ಠೆಯಾಗಿ ಸ್ವೀಕರಿಸಿರುವ ರಾಜಕೀಯ ಪಕ್ಷಗಳು ವಿವಿಧ ತಂತ್ರಗಳಿಗೆ ಮೊರೆ ಹೋಗಿವೆ. ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮತ್ತು ವಿರೋಧ ಪಕ್ಷದ ನಾಯಕ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಈ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಎಲ್ಲ ಅಸ್ತ್ರಗಳನ್ನು ಬಳಸುತ್ತಿದ್ದಾರೆ.

ನಗದು ಮತ್ತು ಮದ್ಯ ವಿತರಿಸಿ ಮತದಾರರನ್ನು ಓಲೈಸುವ ಪ್ರಕರಣಗಳು ಸಾಮಾನ್ಯವಾಗುತ್ತಿವೆ. ಒಂದೊಂದು ಕ್ಷೇತ್ರಕ್ಕೆ ಬೇಕಾದ ಹಣವನ್ನು ಆಯಾ ಕ್ಷೇತ್ರದಲ್ಲಿಯೇ ಸಂಗ್ರಹಿಸಿ ಇಡಲಾಗಿದೆ ಎನ್ನಲಾಗಿದೆ. ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೆ ₹500 ನಿಗದಿಪಡಿಸಲಾಗಿದೆ. ಜತೆಗೆ, ಉಚಿತ ಆಹಾರದ ಪೊಟ್ಟಣ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಪ್ರಮುಖ ರಾಜಕೀಯ ಪಕ್ಷಗಳು ಇಡೀ ರಾಜ್ಯದಲ್ಲಿ ₹2,000 ಕೋಟಿಯಿಂದ 2,500 ಕೋಟಿ ವೆಚ್ಚ ಮಾಡಬಹುದು ಎಂದು ಅಂದಾಜಿಸಲಾಗಿದೆ. ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿ ಅಭ್ಯರ್ಥಿ ₹50 ಕೋಟಿ ವೆಚ್ಚ ಮಾಡಬಹುದು ಎಂಬುದು ಒಂದು ಲೆಕ್ಕಾಚಾರ.

l ಅಭ್ಯರ್ಥಿ ಮಾಡುವ ವೆಚ್ಚದ ಮೊತ್ತ: ₹75 ಕೋಟಿ

l ಪಕ್ಷ ಮಾಡುವ ವೆಚ್ಚದ ಮೊತ್ತ: ₹25 ಕೋಟಿ

ಬಿಹಾರ...

ಚುನಾವಣೆ ಬಂದರೆ ಬಿಹಾರದಲ್ಲಿ ಮದ್ಯದ ಹೊಳೆ ಹರಿಯುವುದು ಬಹಳ ಕಾಲದಿಂದಲೂ ಇದ್ದ ಪರಿಪಾಟ. ಆದರೆ, ಈ ಬಾರಿ ಅದಕ್ಕೆ ಕಡಿವಾಣ ಬೀಳಬಹುದು ಎನ್ನಲಾಗಿದೆ. 2016ರಲ್ಲಿ ಮದ್ಯ ನಿಷೇಧ ಮಾಡಿರುವುದು ಇದಕ್ಕೆ ಕಾರಣ. ಮತದಾರರಿಗೆ ಮದ್ಯ ಕೊಟ್ಟೇ ಆಮಿಷ ಒಡ್ಡಬೇಕು ಎಂದು ಬಯಸುವ ಅಭ್ಯರ್ಥಿಗಳ ಮುಂದೆ ಈ ಬಾರಿ ಎರಡು ಸವಾಲುಗಳಿವೆ. ಮೊದಲನೆಯದಾಗಿ, ಚುನಾವಣೆಯಲ್ಲಿ ಮದ್ಯ ಹಂಚುವುದು ನೀತಿ ಸಂಹಿತೆಯ ಉಲ್ಲಂಘನೆ. ಇನ್ನೊಂದು, ಮದ್ಯ ಪೂರೈಕೆಗೆ ಬಿಹಾರದಲ್ಲಿ ಕಟ್ಟುನಿಟ್ಟಿನ ನಿಷೇಧ ಇದೆ. ಇವೆರಡನ್ನೂ ಮೀರಿ ಮದ್ಯ ಸರಬರಾಜು ಆಗುವುದೇ ಎಂಬ ಪ್ರಶ್ನೆ ಇದೆ.

ಈ ಬಾರಿ ಅಭ್ಯರ್ಥಿಗಳು ಲೋಕಸಭಾ ಕ್ಷೇತ್ರದಲ್ಲಿ ಸುಮಾರು ₹10 ಕೋಟಿ ವೆಚ್ಚ ಮಾಡುವ ಸಾಧ್ಯತೆ ಇದೆ. ಜತೆಗೆ, ಪಕ್ಷದಿಂದಲೂ ಪ್ರಚಾರಕ್ಕೆ ವೆಚ್ಚವಾಗಲಿದೆ.

l ಅಭ್ಯರ್ಥಿಗಳ ವೆಚ್ಚದ ಮೊತ್ತ: ₹20 ಕೋಟಿ

l ಪಕ್ಷಗಳು ವೆಚ್ಚ ಮಾಡಬಹುದಾದ ಮೊತ್ತ: ₹5 ಕೋಟಿ

ಛತ್ತೀಸಗಡ...

ಛತ್ತೀಸಗಡದಲ್ಲಿ ಅಕ್ಕಿ ಗಿರಣಿ ಮತ್ತು ಗಣಿ ಮಾಲೀಕರು ಹಾಗೂ ಬೀಡಿ ಕಟ್ಟಲು ಬಳಸುವ ಎಲೆ ವ್ಯಾಪಾರಿಗಳು ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತಾರೆ. ಜತೆಗೆ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಬೆಂಬಲವಾಗಿ ಅಭ್ಯರ್ಥಿಗಳಿಗೆ ನಿಲ್ಲುತ್ತಾರೆ. ಪ್ರಚಾರದ ವೆಚ್ಚ ನೀಗಿಸಲು ಈ ಅಧಿಕಾರಿಗಳು ನೆರವಾಗುತ್ತಾರೆ. ದಕ್ಷಿಣ ಛತ್ತೀಸಗಡದಲ್ಲಿ ನಕ್ಸಲರು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡುತ್ತಾರೆ. ಈ ಮೊತ್ತವೇ ಕೋಟ್ಯಂತರ ರೂಪಾಯಿ.

ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲೂ ಸರಾಸರಿ ₹10 ಕೋಟಿ ವೆಚ್ಚ ಮಾಡಲಾಗುತ್ತದೆ. ರಾಜಧಾನಿ ರಾಯಪುರದಲ್ಲಿ ಅತಿ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ. ಹಿಂದುಳಿದ ಕ್ಷೇತ್ರಗಳಾದ ಸರ್‍ಗುಜಾ, ಬಸ್ತಾರ್‌, ಕಾಂಕೇರ್‌ ಕ್ಷೇತ್ರಗಳಲ್ಲಿ ಕಡಿಮೆ ಖರ್ಚಾಗಲಿದೆ. ಒಟ್ಟು 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ₹110 ಕೋಟಿ ವೆಚ್ಚ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

l ಅಭ್ಯರ್ಥಿಗಳ ವೆಚ್ಚದ ಮೊತ್ತ: ₹8 ಕೋಟಿ

l ಪಕ್ಷಗಳು ವೆಚ್ಚ ಮಾಡಬಹುದಾದ ಮೊತ್ತ: ₹2 ಕೋಟಿ

ಗೋವಾ...

ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾಗಿರುವ ಚಿಕ್ಕ ರಾಜ್ಯ ಗೋವಾದಲ್ಲಿ ಚುನಾವಣೆಯು ಆಸಕ್ತದಾಯಕ. ಗೋವಾದಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿವೆ. ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಚಿಕ್ಕ ಸಭೆಗಳು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿ ಸೇರಿ ಸುಮಾರು ₹30ರಿಂದ 35 ಕೋಟಿ ವೆಚ್ಚ ಮಾಡಬಹುದು. ಹೀಗಾಗಿ, ಇಡೀ ರಾಜ್ಯದಲ್ಲಿ ₹70 ಕೋಟಿಗೂ ಅಧಿಕ ವೆಚ್ಚ ಆಗಬಹುದು.

l ಅಭ್ಯರ್ಥಿಗಳ ವೆಚ್ಚದ ಮೊತ್ತ: ₹25 ಕೋಟಿ

l ಪಕ್ಷಗಳ ವೆಚ್ಚದ ಮೊತ್ತ: ₹5 ಕೋಟಿ

ಗುಜರಾತ್‌...

ಎರಡು ದಶಕಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿದೆ. ಮತಗಟ್ಟೆ ಮಟ್ಟದ ಕಾರ್ಯಕರ್ತರ ಮೇಲೆಯೇ ಈ ಎರಡು ಪಕ್ಷಗಳು ಹೆಚ್ಚು ವೆಚ್ಚ ಮಾಡುತ್ತಿವೆ. ಮತದಾರರಿಗೆ ನಗದು ಹಣ ನೀಡುವುದು ಸಾಮಾನ್ಯವಾಗಿದೆ. ಅಂದಾಜಿನ ಪ್ರಕಾರ ನಗರ ಪ್ರದೇಶ ಹೊಂದಿರುವ ಕ್ಷೇತ್ರಗಳಲ್ಲಿ ₹10 ಕೋಟಿ ಹಾಗೂ ಗ್ರಾಮೀಣ ಪ್ರದೇಶದ ಕ್ಷೇತ್ರಗಳಲ್ಲಿ ₹6 ಕೋಟಿ ವೆಚ್ಚವಾಗಬಹುದು. ರಾಜ್ಯದ 6 ಕ್ಷೇತ್ರಗಳು ನಗರ ಕೇಂದ್ರಿತ ಪ್ರದೇಶದ ವ್ಯಾಪ್ತಿಯಲ್ಲಿದ್ದು, ₹120 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಉಳಿದ ಕ್ಷೇತ್ರಗಳಲ್ಲಿ ₹240 ಕೋಟಿ ವೆಚ್ಚವಾಗಬಹುದು. ಇದರಿಂದಾಗಿ, ಈ ಬಾರಿಯ ಚುನಾವಣೆಯಲ್ಲಿ ₹360 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಮೊತ್ತದ ಶೇಕಡ 80ರಷ್ಟು ಭಾಗವನ್ನು ಅಭ್ಯರ್ಥಿಗಳೇ ಭರಿಸುವುದು ಇಲ್ಲಿನ ವಿಶೇಷ.

l ಅಭ್ಯರ್ಥಿಗಳ ವೆಚ್ಚದ ಮೊತ್ತ: ₹22 ಕೋಟಿ

l ಪಕ್ಷಗಳು ವೆಚ್ಚ ಮಾಡುವ ಮೊತ್ತ: ₹3 ಕೋಟಿ

ಹರಿಯಾಣ...

10 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಹರಿಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇತರ ಪಕ್ಷಗಳಾದ ಐಎನ್‌ಎಲ್‌ಡಿ, ಜನನಾಯಕ ಜನತಾ ಪಕ್ಷ ಮತ್ತು ಎಎಪಿ ಅಲ್ಪಮಟ್ಟಿಗೆ ಸವಾಲೊಡ್ಡಬಹುದು. ಇಲ್ಲಿ ಸಾಂಪ್ರದಾಯಿಕ ಪ್ರಚಾರಕ್ಕೆ ಅಭ್ಯರ್ಥಿಗಳು ಮೊರೆ ಹೋಗುವುದು ಕಡಿಮೆ. ಅಭ್ಯರ್ಥಿಗಳು ಮತದಾರರಿಗೆ ಅಗತ್ಯವಿರುವ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಾರೆ. ನಗದು, ಮದ್ಯ ವಿತರಿಸುವುದು ಸಾಮಾನ್ಯವಾಗಿದೆ.

ಪ್ರತಿ ಕ್ಷೇತ್ರದಲ್ಲೂ ₹10 ಕೋಟಿಯಿಂದ ₹15 ಕೋಟಿ ವೆಚ್ಚ ಮಾಡುವುದು ಸಾಮಾನ್ಯವಾಗಿದೆ. ಈ ವೆಚ್ಚ ಪ್ರಮಾಣ ಆಯಾ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು ಪ್ರತಿ ಕ್ಷೇತ್ರದಲ್ಲಿ ₹20 ಕೋಟಿಯಿಂದ ₹25 ಕೋಟಿ ವೆಚ್ಚ ಮಾಡಬಹುದು. ಪಕ್ಷಗಳ ವೆಚ್ಚವು ಪ್ರತ್ಯೇಕ. ಒಟ್ಟಾರೆಯಾಗಿ ರಾಜ್ಯದಲ್ಲಿ 10 ಕ್ಷೇತ್ರಗಳಲ್ಲಿ ₹250 ಕೋಟಿ ವೆಚ್ಚ ಮಾಡಬಹುದು.

l ಅಭ್ಯರ್ಥಿಗಳ ವೆಚ್ಚದ ಮೊತ್ತ: ₹15 ಕೋಟಿ

l ಪಕ್ಷಗಳು ವೆಚ್ಚ ಮಾಡಬಹುದಾದ ಮೊತ್ತ: ₹5 ಕೋಟಿ

ಜಮ್ಮು ಮತ್ತು ಕಾಶ್ಮೀರ...

ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯನ್ನು ಈ ಬಾರಿ ಘೋಷಿಸದ ಕೇಂದ್ರ ಚುನಾವಣಾ ಆಯೋಗದ ಮೇಲೆ ಕಣಿವೆಯ ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಸಮಾಧಾನವಿದೆ. ಹೀಗಾಗಿ ರಾಜಕೀಯ ನಾಯಕರು ಹಾಗೂ ಮತದಾರರಲ್ಲಿ ಲೋಕಸಭಾ ಚುನಾವಣೆಗೆ ಉತ್ಸಾಹವೇನೂ ಕಂಡುಬರುತ್ತಿಲ್ಲ. ನಿರಂತರ ಗಲಭೆಗಳಿಂದಾಗಿ ಪಕ್ಷಗಳು ರ‍್ಯಾಲಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕಾರಣವಾಗಿ ಹಿಂದಿನ ಚುನಾವಣೆಗಳಲ್ಲಿ ಖರ್ಚು ಮಾಡಿದಷ್ಟು ಹಣವನ್ನು ಈ ಬಾರಿ ಖರ್ಚು ಮಾಡುವ ಸಾಧ್ಯತೆ ಕಡಿಮೆ.

ಪ್ರಮುಖ ಪಕ್ಷಗಳಾದ ಪಿಡಿಪಿ, ಎನ್‌ಸಿ, ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರತಿ ಅಭ್ಯರ್ಥಿಯು ₹2ರಿಂದ ₹5 ಕೋಟಿ ಖರ್ಚು ಮಾಡಬಹುದು. ಈ ನಾಲ್ಕೂ ಪಕ್ಷಗಳಿಂದ ಪ್ರತಿ ಕ್ಷೇತ್ರಕ್ಕೆ ₹12ರಿಂದ 24 ಕೋಟಿ ವ್ಯಯವಾಗಲಿದೆ ಎನ್ನಲಾಗಿದೆ. ಒಂದು ಸ್ಥಾನ ಗೆಲ್ಲಲು ಸರಾಸರಿ ₹20 ಕೋಟಿ ಎಂದಿಟ್ಟುಕೊಂಡರೂ ರಾಜ್ಯದ ಆರು ಸ್ಥಾನಗಳನ್ನು ಗೆಲ್ಲಲು ಸುಮಾರು ₹120 ಕೋಟಿ ಖರ್ಚು ಮಾಡಲಾಗುತ್ತಿದೆ.

l ಪ್ರತೀ ಅಭ್ಯರ್ಥಿಯ ವೆಚ್ಚ: ₹5 ಕೋಟಿ

l ಪ್ರತೀ ಕ್ಷೇತ್ರದ ಸರಾಸರಿ ವೆಚ್ಚ: ₹20 ಕೋಟಿ

ಜಾರ್ಖಂಡ್...

ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿ ಗರಿಷ್ಠ ₹70 ಲಕ್ಷ ಖರ್ಚು ಮಾಡಬಹುದು ಎಂದು ಚುನಾವಣಾ ಆಯೋಗ ನಿಗದಿಪಡಿಸಿದ್ದರೂ, ಬಿಜೆಪಿ ಆಡಳಿತವಿರುವ ಜಾರ್ಖಂಡ್‌ನಲ್ಲಿ ವಾಸ್ತವವಾಗಿ ಖರ್ಚು ಮಾಡಲಾಗುವ ಹಣದ ಪ್ರಮಾಣ ದೊಡ್ಡ ಮಟ್ಟದಲ್ಲಿದೆ. ಹೇರಳ ಖನಿಜ ಸಂಪನ್ಮೂಲ, ಬೃಹತ್ ಉದ್ದಿಮೆಗಳ ಹೊರತಾಗಿಯೂ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರನ್ನೂ ಒಳಗೊಂಡಂತೆ, ರಾಜ್ಯದ ಜನಸಂಖ್ಯೆಯ ಬಹುಪಾಲು ಜನರು ಬಡವರು. ಹಣ ಹಾಗೂ ಮದ್ಯದ ರೂಪದಲ್ಲಿ ಅವರನ್ನು ಸೆಳೆಯಲು ರಾಜಕೀಯ ಪಕ್ಷಗಳು ಯತ್ನಿಸುತ್ತಿರುವುದು ನಿರಾಕರಿಸಲಾಗದ ಸತ್ಯ.

ಅಕ್ಕಿಯಿಂದ ಸ್ಥಳೀಯವಾಗಿ ತಯಾರಿಸುವ ಬಿಯರ್ ‘ಹಾದಿಯಾ’ವನ್ನು ಇಷ್ಟಪಡುವ ಇಲ್ಲಿನ ಸ್ಥಳೀಯರು, ಮತದಾನದ ಮುನ್ನಾದಿನ ವಿತರಿಸುವ ವಿದೇಶಿ ಮದ್ಯ, (ಐಎಂಎಫ್‌ಎಲ್), ಚಿಕನ್, ಹಣಕ್ಕಾಗಿ ಕಾಯುತ್ತಾರೆ ಎನ್ನುತ್ತಾರೆ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಮುಖ ರಾಜಕೀಯ ಪಕ್ಷದ ಮುಖಂಡ. ಅಂದಾಜಿನ ಪ್ರಕಾರ ಪ್ರತಿ ಅಭ್ಯರ್ಥಿ ₹20ರಿಂದ ₹30 ಕೋಟಿ ವ್ಯಯಿಸುತ್ತಾರೆ.

l ಪ್ರತೀ ಅಭ್ಯರ್ಥಿಯ ಖರ್ಚು ₹25 ಕೋಟಿ

ಕರ್ನಾಟಕ...

ಕರ್ನಾಟಕದಲ್ಲಿ ಕಾಂಗ್ರೆಸ್–ಜೆಡಿಎಸ್ ಒಂದಾಗಿದ್ದು, ಬಿಜೆಪಿ ವಿರುದ್ಧ ನೇರ ಹೋರಾಟಕ್ಕೆ ಇಳಿದಿವೆ. ನಗದು ಹಂಚಿಕೆ ಅಲ್ಲದೆ, ಮದ್ಯ, ಸಾರ್ವಜನಿಕ ಸಭೆ ಆಯೋಜನೆ, ಪ್ರಚಾರ ಸಲಕರಣೆ, ವಾಹನಗಳ ಸೌಲಭ್ಯ ಮೊದಲಾದವಕ್ಕೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ₹10 ಸಾವಿರದಿಂದ ₹30 ಸಾವಿರ, ಪ್ರತಿ ಕ್ಷೇತ್ರಕ್ಕೆ ₹10ರಿಂದ ₹15 ಕೋಟಿ ಖರ್ಚು ಮಾಡುತ್ತಿವೆ. ಪ್ರತಿ ಕ್ಷೇತ್ರಕ್ಕೆ ಪ್ರಮುಖ ಇಬ್ಬರು ಅಭ್ಯರ್ಥಿಗಳಿಂದ ₹30 ಕೋಟಿ ಎಂದು ಲೆಕ್ಕ ಹಾಕಿದರೆ, ರಾಜ್ಯದಲ್ಲಿ ಒಟ್ಟು ₹840 ಕೋಟಿ ಖರ್ಚಾಗಲಿದೆ. ಇನ್ನು ಇಬ್ಬರು ಅಭ್ಯರ್ಥಿಗಳ ಮೇಲೆ ರಾಜಕೀಯ ಪಕ್ಷಗಳು ತಲಾ ₹10 ಕೋಟಿ ವಿನಿಯೋಗಿಸಿದರೆ, ಇದೇ ₹560 ಕೋಟಿ ಆಗುತ್ತದೆ. ಒಟ್ಟಾರೆ ರಾಜ್ಯದಲ್ಲಿ ಖರ್ಚಾಗುವ ಹಣ ಸರಿಸುಮಾರು ₹1,400 ಕೋಟಿ ಎಂದು ಅಂದಾಜಿಸಲಾಗಿದೆ.

l ಪ್ರಮುಖ ಇಬ್ಬರು ಅಭ್ಯರ್ಥಿಗಳ ವೆಚ್ಚ: ₹30 ಕೋಟಿ

l ಪ್ರತೀ ಕ್ಷೇತ್ರಕ್ಕೆ ರಾಜಕೀಯ ಪಕ್ಷಗಳು ಮಾಡುವ ವೆಚ್ಚ (ಇಬ್ಬರಿಗೆ): 20 ಕೋಟಿ

ಕೇರಳ...

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಸಿಪಿಎಂ ನೇತೃತ್ವದ ಎಲ್‌ಡಿಎಫ್ ನಡುವೆ ಈ ಹಿಂದಿನ ಚುನಾವಣೆಗಳಲ್ಲಿ ನೇರ ಹೋರಾಟ ನಡೆದಿತ್ತು. ಇದೀಗ ಬಿಜೆಪಿಯೂ ಪ್ರವರ್ಧಮಾನಕ್ಕೆ ಬಂದಿದ್ದು, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶಬರಿಮಲೆ ವಿಷಯದ ಲಾಭ ಪಡೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್‌ ಯತ್ನಿಸುತ್ತಿವೆ. ಎಲ್ಲ ಪಕ್ಷಗಳಿಗೆ ಹೋಲಿಸಿದರೆ, ಖರ್ಚಿನ ವಿಚಾರದಲ್ಲಿ ಕಾಂಗ್ರೆಸ್ ಮುಂದಿದೆ. ದೂರದ ಕುಗ್ರಾಮಗಳನ್ನು ಹೊರತುಪಡಿಸಿದರೆ, ನೇರವಾಗಿ ಹಣ ಹಂಚಿಕೆಯು ಇಲ್ಲಿ ಪ್ರಚಲಿತದಲ್ಲಿಲ್ಲ. ಪ್ರಚಾರ ಸಭೆಗಳಿಗೆ ಜನರನ್ನು ಸೇರಿಸಲು ಸ್ಥಳೀಯ ಮುಖಂಡರಿಗೆ ಅಭ್ಯರ್ಥಿಗಳು ಹಣ ನೀಡುತ್ತಾರೆ. ಮತದಾನದ ದಿನ ಸಮೀಪಿಸಿದಾಗ ಮದ್ಯ ಪೂರೈಕೆಯೂ ಆಗುತ್ತದೆ. ಎರಡು ಮೈತ್ರಿಕೂಟಗಳು ಹಾಗೂ ಬಿಜೆಪಿಯಿಂದ ಪ್ರತಿ ಕ್ಷೇತ್ರಕ್ಕೆ ₹20 ಕೋಟಿ ವ್ಯಯವಾಗಬಹುದು. 20 ಕ್ಷೇತ್ರಗಳನ್ನು ಲೆಕ್ಕಹಾಕಿದರೆ, 400 ಕೋಟಿ ವೆಚ್ಚ ತಗಲುತ್ತದೆ. ಪಕ್ಷಗಳಿಂದ ಸುಮಾರು ₹100 ಕೋಟಿ ಖರ್ಚಾಗಬಹುದು.

l ಕ್ಷೇತ್ರಕ್ಕೆ ಅಭ್ಯರ್ಥಿ ಮಾಡುವ ಖರ್ಚು: ₹20 ಕೋಟಿ

l ಕ್ಷೇತ್ರಕ್ಕೆ ಪಕ್ಷಗಳು ಮಾಡಲಿರುವ ಖರ್ಚು: ₹5 ಕೋಟಿ

ಮಧ್ಯಪ್ರದೇಶ...

ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿ ಇದೆ. ಉಳಿದ ಪಕ್ಷಗಳು ನಗಣ್ಯ.ರಾಜ್ಯದ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ, ಉಳಿದ ಕ್ಷೇತ್ರಗಳಲ್ಲಿ ಚುನಾವಣಾ ವೆಚ್ಚ ಕಡಿಮೆ. ರಾಜ್ಯದ ವಾಣಿಜ್ಯ ನಗರಿ ಇಂದೋರ್‌ನಲ್ಲಿ ಎರಡೂ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ₹ 100 ಕೋಟಿ ವೆಚ್ಚ ಮಾಡಬಹುದು ಎಂದು ಅಂದಾಜಿಸಲಾಗಿದೆ.

l ₹ 25 ಕೋಟಿ ಪ್ರತಿ ಕ್ಷೇತ್ರದಲ್ಲಿ 2ಅಭ್ಯರ್ಥಿಗಳ ವೆಚ್ಚ

l ₹ 5 ಕೋಟಿ ಪ್ರತಿ ಕ್ಷೇತ್ರಕ್ಕೆ ಎರಡೂ ಪಕ್ಷಗಳ ವೆಚ್ಚ

ಒಡಿಶಾ...

ರಾಜ್ಯದಲ್ಲಿ ಈ ಬಾರಿ ಬಿಜೆಡಿ, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತ್ರಿಕೋನ ಸ್ಪರ್ಧೆ ಇದೆ. ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತಿದೆ. ಇಲ್ಲಿ ಮತದಾರರಿಗೆ ಆಮಿಷ ಒಡ್ಡಲು ಮಾಡುವ ವೆಚ್ಚಕ್ಕಿಂತ ಅಭ್ಯರ್ಥಿಗಳು ಪ್ರಚಾರ ಕಾರ್ಯಕ್ರಮಗಳಿಗೆ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ರ‍್ಯಾಲಿ, ಸಾರ್ವಜನಿಕ ಸಭೆ, ಬ್ಯಾನರ್ ಮತ್ತು ಹೋರ್ಡಿಂಗ್‌ಗಳಿಗೆ ಹೆಚ್ಚು ವೆಚ್ಚ ಮಾಡಲಾಗುತ್ತದೆ. ರಾಜ್ಯದ ಕೆಲವು ಭಾಗದಲ್ಲಿ ಮಾತ್ರ ಮತದಾರರಿಗೆ ನಗದು ಮತ್ತು ಉಡುಗೊರೆಗಳನ್ನು ನೀಡಲಾಗುತ್ತಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮತದಾರರಿಗೆ ಆಮಿಷ ಒಡ್ಡುವ ಪದ್ಧತಿ ಇಲ್ಲ.

l ₹ 10 ಕೋಟಿ ಪ್ರತಿ ಕ್ಷೇತ್ರದಲ್ಲಿ 3 ಅಭ್ಯರ್ಥಿಳ ವೆಚ್ಚ

l ₹ 5 ಕೋಟಿ ಪ್ರತಿ ಕ್ಷೇತ್ರಕ್ಕೆ 3 ಪಕ್ಷಗಳಿಂದ ಆಗುವ ವೆಚ್ಚ

l ₹ 15 ಕೋಟಿ ಪ್ರತಿ ಕ್ಷೇತ್ರದಲ್ಲಿ ಆಗುವ ಒಟ್ಟು ವೆಚ್ಚ

ರಾಜಸ್ಥಾನ...

ರಾಜಸ್ಥಾನದಲ್ಲಿ ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದಿದ್ದರೂ, ಲೋಕಸಭಾ ಚುನಾವಣೆಗೆ ಉತ್ಸಾಹದ ಕೊರತೆ ಇಲ್ಲ. ಈ ರಾಜ್ಯದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನರನ್ನು ಕರೆತರಲು ಭಾರಿ ವೆಚ್ಚ ಬರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಪ್ರತಿ ಅಭ್ಯರ್ಥಿ ಇಲ್ಲಿ ಕನಿಷ್ಠ ₹ 30 ಕೋಟಿ ವೆಚ್ಚ ಮಾಡಬೇಕಾಗಬಹುದು. ಒಂದು ಕ್ಷೇತ್ರದಲ್ಲಿ ಕನಿಷ್ಠ ಇಬ್ಬರು ಅಭ್ಯರ್ಥಿಗಳೆಂದರೂ ಒಟ್ಟು ವೆಚ್ಚ ₹ 60 ಕೋಟಿಯಾಗುತ್ತದೆ.

ಕ್ಷೇತ್ರವೊಂದರ ಅಭ್ಯರ್ಥಿ ಮಾಡುವ ವೆಚ್ಚ: ₹ 40ಕೋಟಿ

ಪ್ರತಿ ಅಭ್ಯರ್ಥಿಗೆ ಪ‍ಕ್ಷಗಳು ಮಾಡುವ ವೆಚ್ಚ: ₹ 20 ಕೋಟಿ

ತಮಿಳುನಾಡು...

ರಾಜ್ಯದಲ್ಲಿ ದಿಗ್ಗಜ ನಾಯಕರಾದ ಜೆ. ಜಯಲಲಿತಾ ಮತ್ತು ಎಂ. ಕರುಣಾನಿಧಿ ಅವರ ನಾಯಕತ್ವವಿಲ್ಲದೆ ನಡೆಯುತ್ತಿರುವ ಚುನಾವಣೆ ಇದು. ಮತದಾರರಿಗೆ ನಗದು ಹಂಚುವುದರ ಜೊತೆಗೆ ರ್‍ಯಾಲಿಗಳಿಗೆ ಜನರನ್ನು ಸೇರಿಸಲು, ಕಾರ್ಯಕರ್ತರು ಹಾಗೂ ಜನರಿಗೆ ಉಡುಗೊರೆಗಳನ್ನು ಹಂಚಲು ಪ್ರಮುಖ ಪಕ್ಷಗಳು ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲಿವೆ

ಪ್ರತಿ ಕ್ಷೇತ್ರಕ್ಕೆ ಅಭ್ಯರ್ಥಿ ಕನಿಷ್ಠ ₹ 30 ಕೋಟಿ ವೆಚ್ಚ ಮಾಡಬೇಕಾಗಬಹುದು. ಒಂದು ಕ್ಷೇತ್ರದಲ್ಲಿ ಕನಿಷ್ಠ ಇಬ್ಬರು ಅಭ್ಯರ್ಥಿಗಳಿದ್ದು, ತಲಾ ₹ 30ಕೋಟಿಯಂತೆ ವೆಚ್ಚ ಮಾಡಿದರೆ 39 ಕ್ಷೇತ್ರಗಳಿಗೆ ಆಗುವ ಒಟ್ಟು ವೆಚ್ಚ ₹ 2,340 ಕೋಟಿ.

l ಕ್ಷೇತ್ರವೊಂದ ಅಭ್ಯರ್ಥಿ ಮಾಡುವ ವೆಚ್ಚ: ₹ 50ಕೋಟಿ

l ಪ್ರತಿ ಅಭ್ಯರ್ಥಿಗೆ ಪ‍ಕ್ಷ ಮಾಡುವ ವೆಚ್ಚ: ₹ 10 ಕೋಟಿ

ತೆಲಂಗಾಣ...

ರಾಜ್ಯದಲ್ಲಿ ಈಚೆಗೆ ನಡೆದ ಎಲ್ಲ ಚುನಾವಣೆಗಳಲ್ಲೂ ಟಿಆರ್‌ಎಸ್‌ ದಿಗ್ವಿಜಯ ಸಾಧಿಸಿದ್ದರಿಂದ ವಿರೋಧ ಪಕ್ಷಗಳು ಇಲ್ಲಿ ಅಳೆದು ತೂಗಿ ವೆಚ್ಚ ಮಾಡುತ್ತಿವೆ.

₹ 2000ದ ಒಂದು ನೋಟು, ಒಂದು ಬಿರಿಯಾನಿ ಪ್ಯಾಕೆಟ್‌ ಹಾಗೂ ಒಂದು ಮದ್ಯದ ಬಾಟಲು– ಇದು ರಾಜ್ಯದಲ್ಲಿ ಪ್ರತಿ ಮತಕ್ಕೆ ತಗಲುವ ಸಾಮಾನ್ಯ ವೆಚ್ಚ ಎನ್ನಲಾಗುತ್ತಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಒಬ್ಬ ಅಭ್ಯರ್ಥಿ ಕನಿಷ್ಠ ₹ 50 ಕೋಟಿ ವೆಚ್ಚ ಮಾಡಬೇಕಾದ ಸ್ಥಿತಿ ಇದೆ. ರ್‍ಯಾಲಿಗಳಿಗೆ ಜನರನ್ನು ಸೇರಿಸಬೇಕೆಂದರೆ ಪ್ರತಿ ವ್ಯಕ್ತಿಗೆ ದಿನಕ್ಕೆ ಕನಿಷ್ಠ ₹ 500 ನಗದು, ಮೂರು ಹೊತ್ತಿನ ಊಟ ಮತ್ತು ಮದ್ಯ ಕೊಡಬೇಕು. ಆದ್ದರಿಂದ ಇಲ್ಲಿ ಪ್ರತಿ ಅಭ್ಯರ್ಥಿ ಕನಿಷ್ಠ ₹ 75 ಕೋಟಿ ಮತ್ತು ಪ್ರತಿ ಅಭ್ಯರ್ಥಿಗೆ ಪಕ್ಷದಿಂದ ₹25 ಕೋಟಿ ವೆಚ್ಚ ಆಗಬಹುದು.

l ಕ್ಷೇತ್ರದ ಅಭ್ಯರ್ಥಿ ಮಾಡುವ ವೆಚ್ಚ: ₹ 75ಕೋಟಿ

l ಪ್ರತಿ ಅಭ್ಯರ್ಥಿಗೆ ಪ‍ಕ್ಷ ಮಾಡುವ ವೆಚ್ಚ: ₹ 25 ಕೋಟಿ

ಉತ್ತರ ಪ್ರದೇಶ...

ಒಂದು ರಾಜಕೀಯ ಪಕ್ಷದ ಭವಿಷ್ಯವನ್ನು ರೂಪಿಸಬಲ್ಲಂಥ ಶಕ್ತಿ ಈ ರಾಜ್ಯಕ್ಕೆ ಇರುವುದರಿಂದ ಪಕ್ಷಗಳು ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲ್ಲು ಇನ್ನಿಲ್ಲದ ಶ್ರಮ ವಹಿಸುತ್ತವೆ. ಪ್ರಚಾರಕ್ಕಾಗಿ ವಾಹನಗಳನ್ನು ಬಾಡಿಗೆಗೆ ಪಡೆಯುವುದು, ಅವುಗಳಿಗೆ ಇಂಧನ, ಕಾರ್ಯಕರ್ತರಿಗೆ ವೇತನ, ರ್‍ಯಾಲಿಗಳ ಆಯೋಜನೆ, ಪಕ್ಷದ ಬೆಂಬಲಿಗರಿಗೆ ಊಟ– ತಿಂಡಿಯ ವ್ಯವಸ್ಥೆ ಹೀಗೆ ಪ್ರತಿ ಕ್ಷೇತ್ರಕ್ಕೆ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾಡುವ ವೆಚ್ಚವೂ ದೊಡ್ಡದಾಗಿರುತ್ತದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮಾಡಿರುವ ಒಟ್ಟು ವೆಚ್ಚ ₹ 5,500ಕೋಟಿ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

ಈ ಬಾರಿ ಲೋಕಸಭಾ ಚುನಾವಣೆಗೆ ಪ್ರತಿ ಅಭ್ಯರ್ಥಿ ಇಲ್ಲಿ ಕನಿಷ್ಠ ₹55 ಕೋಟಿ ವೆಚ್ಚ ಮಾಡುವುದು ಅನಿವಾರ್ಯ ಆಗಬಹುದು. ಎಲ್ಲ ಪಕ್ಷಗಳೂ ಇಲ್ಲಿ ತಮ್ಮ ಅಭ್ಯರ್ಥಿಯ ಮೇಲೆ ಸುಮಾರು ₹ 5 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಒಟ್ಟಾರೆ 80 ಕ್ಷೇತ್ರಗಳಿಗೆ ಸುಮಾರು ₹ 4,800 ಕೋಟಿ ವೆಚ್ಚ ವಾಗುತ್ತದೆ.

l ಕ್ಷೇತ್ರವೊಂದರ ಅಭ್ಯರ್ಥಿಯ ವೆಚ್ಚ: ₹ 55ಕೋಟಿ

l ಪ್ರತಿ ಅಭ್ಯರ್ಥಿಗೆ ಪ‍ಕ್ಷಗಳು ಮಾಡುವ ವೆಚ್ಚ: ₹ 5 ಕೋಟಿ

ಉತ್ತರಾಖಂಡ...

ಉತ್ತರಾಖಂಡದಲ್ಲಿ 5 ಲೋಕಸಭಾ ಕ್ಷೇತ್ರಗಳಿವೆ. ದೇಶದ ಉಳಿದ ಲೋಕಸಭಾ ಕ್ಷೇತ್ರಗಳಂತೆ ಇಲ್ಲಿಯೂ ಮತದಾರರನ್ನು ಓಲೈಸಲು ಅಭ್ಯರ್ಥಿಗಳು ಹಣದ ಹೊಳೆ ಹರಿಸುವಲ್ಲಿ ಹಿಂದೆ ಬಿದ್ದಿಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ ಚುನಾವಣೆ ಸಂದರ್ಭದಲ್ಲಿ ಉತ್ತರಾಖಂಡ ‘ಮದ್ಯ’ದ ಹೊಳೆಯಲ್ಲಿ ತುಸು ಹೆಚ್ಚೇ ಮಿಂದೇಳುತ್ತದೆ!

ಪಕ್ಷವೊಂದರ ಅಭ್ಯರ್ಥಿ ಸರಾಸರಿ ₹ 4–5 ಕೋಟಿ ವೆಚ್ಚ ಮಾಡುತ್ತಾನೆ. ಈ ವೆಚ್ಚದ ಬಹುಪಾಲು ಮದ್ಯಕ್ಕೇ ಮೀಸಲು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!

l ಪ್ರತಿ ಅಭ್ಯರ್ಥಿ ಮಾಡಬಹುದಾದ ವೆಚ್ಚ: ₹ 8 ಕೋಟಿ

l ಪಕ್ಷಗಳು ಮಾಡಬಹುದಾದ ವೆಚ್ಚ: ₹ 2 ಕೋಟಿ

ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳದಲ್ಲಿ ಹೈವೋಲ್ಟೇಜ್‌ ಚುನಾವಣೆ ನಡೆಯಲಿದೆ ಎಂದೇ ಹೇಳಲಾಗುತ್ತಿದೆ. ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ನಡುವೆ ಮೈತ್ರಿ ಕುದುರಿದರೆ, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಖಚಿತ.

‘ವೋಟಿಗಾಗಿ ನೋಟು’ ಎಂಬುದು ಅಷ್ಟಾಗಿ ಇಲ್ಲಿ ಕಂಡು ಬರುವುದಿಲ್ಲ. ಆದರೆ, ಮತದಾರರ ಮನ ಗೆಲ್ಲುವ ಸಲುವಾಗಿ ಅಬ್ಬರದ ಪ್ರಚಾರ, ಸಾರಿಗೆ ವೆಚ್ಚ ಹಾಗೂ ಇತರ ಚಟುವಟಿಕೆಗಳಿಗೆ ಪಕ್ಷಗಳು ಭಾರಿ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಖರ್ಚಾಗುವ ಹಣದ ಮೊತ್ತ ಸಹ ಪಕ್ಷಗಳನ್ನೇ ಆಧರಿಸಿದೆ. ಎಡಪಕ್ಷಗಳು ಮಾಡುವ ವೆಚ್ಚ ಕಡಿಮೆ.

l ಪ್ರತಿ ಅಭ್ಯರ್ಥಿ ಮಾಡಬಹುದಾದ ವೆಚ್ಚ: ₹ 6 ಕೋಟಿ

l ಪಕ್ಷಗಳು ಮಾಡಬಹುದಾದ ವೆಚ್ಚ: ₹ 2 ಕೋಟಿ

ದೆಹಲಿ...

ದೆಹಲಿಯಲ್ಲಿರುವ 7 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆ ಕುತೂಹಲ ಹೆಚ್ಚಿಸಿದೆ. ಇಲ್ಲಿ ಹಣ ಹಂಚಿಕೆ ವ್ಯಾಪಕವಾಗಿ ನಡೆಯಲಿಕ್ಕಿಲ್ಲ. ಆದರೆ, ನಿರ್ದಿಷ್ಟ ಪ್ರದೇಶಗಳು, ಉದಾಹರಣೆಗೆ ಕೊಳೆಗೇರಿಗಳಂತಹ ಪ್ರದೇಶಗಳಲ್ಲಿನ ಮುಖಂಡರಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಮದ್ಯದ ಹಂಚಿಕೆ ತುಸು ಹೆಚ್ಚೇ ಇರಲಿದೆ. ಪ್ರಮುಖ ಪಕ್ಷವೊಂದರ ಅಭ್ಯರ್ಥಿ ಇಲ್ಲಿ ಸರಾಸರಿ ₹ 15 ಕೋಟಿ ಖರ್ಚು ಮಾಡಬೇಕಾಗುತ್ತದೆ. ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಈ ಮೊತ್ತ ಇನ್ನೂ ಅಧಿಕವಾಗಬಹುದು. ಅದೇ ರೀತಿ, ಚಾಂದಿನಿಚೌಕ್‌ ಕ್ಷೇತ್ರದಲ್ಲಿ ಆಗುವ ವೆಚ್ಚ ಬಹಳ ಕಡಿಮೆ. ಆಪ್‌ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಡದಿದ್ದರೆ ವೆಚ್ಚ ಹೆಚ್ಚಾಗುವುದು ಖಚಿತ.

l ಪ್ರತಿ ಅಭ್ಯರ್ಥಿ ಮಾಡಬಹುದಾದ ವೆಚ್ಚ: ₹ 20 ಕೋಟಿ

l ಪಕ್ಷಗಳು ಮಾಡಬಹುದಾದ ವೆಚ್ಚ: ₹ 5 ಕೋಟಿ

l ಒಂದು ಕ್ಷೇತ್ರದಲ್ಲಿ ಆಗುವ ವೆಚ್ಚ: ₹ 25 ಕೋಟಿ

ಈಶಾನ್ಯ ರಾಜ್ಯಗಳು...

ಈಶಾನ್ಯ ಭಾರತವು ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತ್ರಿಪುರಾ ರಾಜ್ಯಗಳನ್ನು ಒಳಗೊಂಡಿದೆ.

ದೇಶದ ಉಳಿದ ರಾಜ್ಯಗಳಂತೆ ಈಶಾನ್ಯ ರಾಜ್ಯಗಳಲ್ಲಿ ಪಕ್ಷಗಳು ಹಣವನ್ನು ನೀರಿನಂತೆ ಖರ್ಚು ಮಾಡುವುದಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿಯೂ ಮತದಾರರಿಗೆ ಹಣದ ಆಮಿಷ ಒಡ್ಡುವ ಪರಿಪಾಠ ಬೆಳೆದಿದೆ. ಎಂಟು ರಾಜ್ಯಗಳು ಸೇರಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ 14 ಕ್ಷೇತ್ರಗಳು ಅಸ್ಸಾಂನಲ್ಲಿವೆ. ಅಸ್ಸಾಂನಲ್ಲಿ ಚಹಾ ತೋಟಗಳಲ್ಲಿ ದುಡಿಯುವವರ ಮತಗಳು ನಿರ್ಣಾಯಕ. ಹೀಗಾಗಿ ಅಭ್ಯರ್ಥಿಗಳು ಹಾಗೂ ಪಕ್ಷಗಳು ಈ ಕಾರ್ಮಿಕರಿಗೆ ಮದ್ಯ ಹಂಚಲು ಬೇಕಾದ ವೆಚ್ಚದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಈ ಸಮಸ್ಯೆ ಮಿಜೋರಾಂನಲ್ಲಿ ಇಲ್ಲ. ಇಲ್ಲಿ ನಾಗರಿಕ ಸಂಘಟನೆಗಳು ಹಾಗೂ ಎನ್‌ಜಿಒಗಳು ಮತದಾರರಿಗೆ ಹಣ, ಹೆಂಡ ಹಂಚುವುದರ ಮೇಲೆ ಹದ್ದಿನ ಕಣ್ಣಿಟ್ಟಿರುತ್ತವೆ. ಉಳಿದ ರಾಜ್ಯಗಳಲ್ಲಿ ಕೆಲವು ಬಂಡುಕೋರ ಗುಂಪುಗಳು ಸಕ್ರಿಯವಾಗಿದ್ದು, ತೋಳ್ಬಲದ್ದೇ ಕಾರುಬಾರು.

l ಪ್ರತಿ ಅಭ್ಯರ್ಥಿ ಮಾಡಬಹುದಾದ ವೆಚ್ಚ: ₹ 8 ಕೋಟಿ

l ಪಕ್ಷಗಳು ಮಾಡಬಹುದಾದ ವೆಚ್ಚ: ₹ 2 ಕೋಟಿ

l ಎಲ್ಲ ಅಭ್ಯರ್ಥಿಗಳ ಒಂದು ಕ್ಷೇತ್ರದಲ್ಲಿ ಆಗುವ ವೆಚ್ಚ: ₹ 10 ಕೋಟಿ

l 25 ಕ್ಷೇತ್ರಗಳಲ್ಲಿ ಆಗುವ ವೆಚ್ಚ: ₹ 250 ಕೋಟಿ

ಕೇಂದ್ರಾಡಳಿತ ಪ್ರದೇಶಗಳು...

ಚಂಡಿಗಡ, ಪುದುಚೇರಿ, ದಮನ್‌ ಮತ್ತು ದಿಯು, ದಾದ್ರಾ ಮತ್ತು ನಗರ್‌ ಹವೇಲಿ, ಲಕ್ಷದ್ವೀಪ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಕೇಂದ್ರಾಡಳಿತ ಪ್ರದೇಶಗಳಾಗಿವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ಇವುಗಳ ಲೋಕಸಭಾ ಕ್ಷೇತ್ರಗಳಲ್ಲಿ ಹಣ ಹಾಗೂ ಮದ್ಯ ಹಂಚಿಕೆ ಅವ್ಯಾಹತವಾಗಿರುತ್ತದೆ. ಚಂಡಿಗಡ ಮತ್ತು ಪುದುಚೇರಿಯಲ್ಲಿ ಭಾರಿ ಹಣಾಹಣಿ ಇರಲಿದೆ. ಲಕ್ಷದ್ವೀಪದ ವ್ಯಾಪ್ತಿಯಲ್ಲಿರುವ 10 ದ್ವೀಪಗಳಲ್ಲಿ ಮತದಾರರನ್ನು ತಲುಪುವುದೇ ಪಕ್ಷಗಳಿಗೆ ಭಾರಿ ವೆಚ್ಚದಾಯಕವಾಗಿದೆ. ಕರಾವಳಿ ಹೊಂದಿರುವ ಕ್ಷೇತ್ರಗಳ ಸಮಸ್ಯೆ ಬೇರೆಯವು.

l ಎಲ್ಲ ಅಭ್ಯರ್ಥಿಗಳು ಮಾಡಬಹುದಾದ ವೆಚ್ಚ: ₹ 12 ಕೋಟಿ

l ಪಕ್ಷಗಳು ಮಾಡಬಹುದಾದ ವೆಚ್ಚ: ₹ 6 ಕೋಟಿ

l 6 ಕ್ಷೇತ್ರಗಳಲ್ಲಿ ಆಗುವ ವೆಚ್ಚ: ₹ 18 ಕೋಟಿ

ಮಹಾರಾಷ್ಟ್ರ...

ಮಹಾರಾಷ್ಟ್ರದಲ್ಲಿ ಚುನಾವಣೆಗೆ ಇಳಿಯುವುದು ದುಬಾರಿ ಬಾಬತ್ತು. ಪ್ರತಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಹತ್ತಾರು ಟ್ಯಾಕ್ಸಿಗಳು, ಬಲಪ್ರದರ್ಶನಕ್ಕೆ ಹತ್ತಾರು ಎಸ್‌ಯುವಿಗಳು, ಎದುರಾಳಿಗಳ ಮತಗಳನ್ನು ವಿಭಜಿಸಲು ‘ಡಮ್ಮಿ’ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು, ಪ್ರಚಾರದಲ್ಲಿ ಸಿನಿಮಾ ತಾರೆಯರು–ಗಣ್ಯರನ್ನು ಬಳಸುವುದು ಇಲ್ಲಿ ಮಾಮೂಲು. ಇವೆಲ್ಲವುಗಳ ವೆಚ್ಚವೂ ತೀರಾ ಹೆಚ್ಚು. ಕೆಲವು ಕ್ಷೇತ್ರಗಳಲ್ಲಿ ₹ 40 ಕೋಟಿ ವೆಚ್ಚವಾದರೆ, ಕೆಲವು ಕ್ಷೇತ್ರಗಳಲ್ಲಿ ಈ ವೆಚ್ಚ ₹ 80 ಕೋಟಿ ದಾಟುತ್ತದೆ. ಚುನಾವಣೆಗಿಂತ ವರ್ಷದ ಮೊದಲೇ ಗಣೇಶ ಮಂಡಲಗಳು ಮತ್ತು ನವರಾತ್ರಿ ಮಂಡಲಗಳಿಗೆ ನೆರವು ಮತ್ತು ಭೇಟಿ ನೀಡುವುದರ ಮೂಲಕ ಪ್ರಚಾರ ಆರಂಭವಾಗಿರುತ್ತದೆ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ಪ್ರಬಲ ಸ್ಪರ್ಧೆ. ಈ ರಾಜ್ಯದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. ಬಿಜೆಪಿ 2014ರಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಜಯ ಸಾಧಿಸಿತ್ತು. ಇತರ ರಾಜ್ಯಗಳಿಗೆ ಹೋಲಿಸಿದರೆ ಹಿಮಾಚಲ ಪ್ರದೇಶದಲ್ಲಿ ಅಭ್ಯರ್ಥಿಗಳು ವೆಚ್ಚ ಮಾಡುವುದು ಕಡಿಮೆ. ಪ್ರತಿ ಕ್ಷೇತ್ರದಲ್ಲಿ ₹3 ಕೋಟಿಯಿಂದ ₹7 ಕೋಟಿಯವರೆಗೆ ಅಭ್ಯರ್ಥಿಗಳು ವೆಚ್ಚ ಮಾಡಬಹುದು. ಇದರಲ್ಲಿ ಮತದಾರರಿಗೆ ಮದ್ಯ ಮತ್ತು ನಗದು ಹಂಚುವುದು ಸೇರಿರುತ್ತದೆ. ಸಂಘ–ಸಂಸ್ಥೆಗಳಿಗೆ ದೊಡ್ಡ ಮೊತ್ತವನ್ನು ನೀಡುವ ಸಂಪದ್ರಾಯವೂ ಇಲ್ಲಿ ಇದೆ. ಮತದಾರರ ಮೇಲೆ ಈ ಸಂಘ–ಸಂಸ್ಥೆಗಳ ಮೂಲಕ ಪ್ರಭಾವ ಬೀರುವ ಪ್ರಯತ್ನ ಇದಾಗಿದೆ. ಪ್ರಮುಖ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಪ್ರತಿ ಕ್ಷೇತ್ರಕ್ಕೆ ₹12 ಕೋಟಿ ವೆಚ್ಚ ಮಾಡುತ್ತಾರೆ.

ಪಂಜಾಬ್

ಈ ಬಾರಿಕಾಂಗ್ರೆಸ್‌, ಎಸ್‌ಎಡಿ–ಬಿಜೆಪಿ, ಎಎಪಿ ಮತ್ತು ಈ ಮೂರೂ ಪಕ್ಷಗಳ ಬಂಡಾಯ ಅಭ್ಯರ್ಥಿಗಳ ಮಧ್ಯೆ ಪ್ರಬಲ ಸ್ಪರ್ಧೆ ಇದೆ. ಮತದಾನದ ಹಿಂದಿನ ದಿನ ಮತದಾರರಿಗೆ ಹಣ ಹಂಚುವುದು ವಾಡಿಕೆ. ಅದಕ್ಕೂ ಮುನ್ನ ಮದ್ಯ, ಮಾದಕವಸ್ತುಗಳು ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸಲು ಭಾರಿ ಪ್ರಮಾಣದಲ್ಲಿ ವೆಚ್ಚ ಮಾಡಲಾಗುತ್ತದೆ. ಪ್ರಬಲ ಪಕ್ಷದ ಅಭ್ಯರ್ಥಿ ₹ 15 ಕೋಟಿ ವೆಚ್ಚ ಮಾಡುತ್ತಾನೆ ಎಂದು ಅಂದಾಜಿಸಲಾಗಿದೆ. 2017ರ ವಿಧಾನಸಭಾ ಚುನಾವಣೆ ವೇಳೆ ₹ 127 ಕೋಟಿ ಮೊತ್ತದ ಮದ್ಯ ಮತ್ತು ಮಾದಕ ವಸ್ತು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಹಂಚಿಕೆಯಾದ ಹಣ ಮತ್ತು ಉಡುಗೊರೆಗಳ ಮೊತ್ತದ ಲೆಕ್ಕವಿಲ್ಲ. ಈ ಬಾರಿಯೂ ವಿಪರೀತ ಪ್ರಮಾಣದಲ್ಲಿ ಹಣ ಹರಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT