ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಸಲ್‌ರಾಕ್‌ನಲ್ಲಿ ಅನಧಿಕೃತ ರಸ್ತೆ ಕಾಮಗಾರಿ

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕಾಮಗಾರಿಯಿಂದ ವನ್ಯಜೀವಿಗಳಿಗೆ ಕುತ್ತು
Last Updated 10 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ವ್ಯಾಪ್ತಿಯ ದಾಂಡೇಲಿ ಅಭಯಾರಣ್ಯದ ಕ್ಯಾಸಲ್‌ರಾಕ್ ವನ್ಯಜೀವಿ ವಲಯದ ಕುವೇಶಿ ಬಳಿ ಯಾವುದೇ ಅನುಮತಿಯಿಲ್ಲದೆ ಜೆಸಿಬಿ ಬಳಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಈ ಅನಧಿಕೃತ ಅಭಿವೃದ್ಧಿಯಿಂದ ವನ್ಯಜೀವಿಗಳಿಗೆ ಅಪಾಯ ಉಂಟಾಗಲಿದೆ ಎಂದು ವನ್ಯಜೀವಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಯಾಸಲ್‌ರಾಕ್ ವಲಯದ ಕುನಿಗಿನಿ ಕ್ರಾಸ್‌ನಿಂದ ಕುವೇಶಿಯನ್ನು ಸಂಪರ್ಕಿಸುವ 8 ಕಿ.ಮೀ ರಸ್ತೆಯನ್ನು ಜಲ್ಲಿಕಲ್ಲು ಹಾಕಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ 2018ರ ಏಪ್ರಿಲ್‌ನಲ್ಲಿ ‘ಪ್ರಜಾವಾಣಿ’ ಸಚಿತ್ರ ವರದಿ ಪ್ರಕಟಿಸಿತ್ತು. ಬಳಿಕ ಕಾಮಗಾರಿ ಸ್ಥಗಿತಗೊಂಡಿತ್ತು. ರಸ್ತೆ ಕಾಮಗಾರಿಯನ್ನು ಸದ್ದಿಲ್ಲದೆ ಮತ್ತೆ ಆರಂಭಿಸಲಾಗಿದೆ.

ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಸಂರಕ್ಷಿತ ಪ್ರದೇಶಗಳಲ್ಲಿ ರಸ್ತೆಗಳ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಅಭಯಾರಣ್ಯಗಳಲ್ಲಿ ಹಾಗೂ ರಾಷ್ಟ್ರೀಯ ಉದ್ಯಾನಗಳಲ್ಲಿ ಹೊಸ ರಸ್ತೆ ನಿರ್ಮಿಸುವಂತಿಲ್ಲ. ಹಳೆಯ ಮಣ್ಣಿನ ರಸ್ತೆಯನ್ನು ಅಭಿವೃದ್ಧಿಪಡಿಸುವುದಕ್ಕೂ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಸಲ್ಲಿಸಬೇಕು. ಈ ರಸ್ತೆ ಕಾಮಗಾರಿ ವೇಳೆ ಷರತ್ತನ್ನು ಉಲ್ಲಂಘಿಸಲಾಗಿದೆ.

‘ವಿವಾದಾತ್ಮಕ ಕ್ಯಾನೋಪಿ ವಾಕ್ ಸ್ಥಳವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಕ್ಯಾನೋಪಿ ವಾಕ್‌ಗೆ ಬರುವ ಪ್ರವಾಸಿಗರಿಗೆ ಅನುಕೂಲಕ್ಕಾಗಿಯೇ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವನ್ಯಜೀವಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಯಾರಣ್ಯದ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆಯೇ ಕ್ಯಾನೋಪಿ ವಾಕ್ ಕಾಮಗಾರಿ ನಡೆಸುವುದಕ್ಕೂ ವನ್ಯಜೀವಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳು, ‘ಕ್ಯಾಸಲ್‌ರಾಕ್– ಕುವೇಶಿ– ದೂಧ್ ಸಾಗರ ಜಲಪಾತದ ದಾರಿಯಲ್ಲಿ ಚಾರಣ ಕೈಗೊಳ್ಳುವ ಕುರಿತು ಕಾಳಿ ಹುಲಿ ಸಂರಕ್ಷಣಾ ಯೋಜನೆಯಲ್ಲೇ ಉಲ್ಲೇಖವಾಗಿದೆ. ಕ್ಯಾನೋಪಿ ವಾಕ್ ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಇದೊಂದು ಪರಿಸರ ಪ್ರವಾಸೋದ್ಯಮ ಚಟುವಟಿಕೆ’ ಎಂದು ಸಮರ್ಥಿಸಿಕೊಂಡಿದ್ದವು. ಆದರೆ ನಂತರ ಅರಣ್ಯ ಇಲಾಖೆ ಈ ಯೋಜನೆಯ ನಿರ್ವಹಣೆಯನ್ನು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್‌ಗೆ ವಹಿಸಿತ್ತು. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಈ ಯೋಜನೆಗೆ ಘಟನೋತ್ತರ ಅನುಮತಿ ಕೋರಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 33ಎ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು ಎನ್ನುವುದನ್ನು ಸ್ಮರಿಸಬಹುದು.

ವಾಣಿಜ್ಯ ಉದ್ದೇಶವಿರದ ಕಾಮಗಾರಿಗಳನ್ನು ಸಂರಕ್ಷಿತ ಪ್ರದೇಶದ ವ್ಯಾಪ್ತಿಯೊಳಗೆ ಕೈಗೊಳ್ಳಬಹುದು. ಇವುಗಳ ಹೊರತಾಗಿ ಬೇರಾವುದೇ ಚಟುವಟಿಕೆ ಕೈಗೊಳ್ಳಬೇಕೆಂದರೂ ಆ ಬಗ್ಗೆ ಈ ಕಾಮಗಾರಿ ನಿರ್ವಹಣಾ ಯೋಜನೆ ಅಥವಾ ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖವಾಗಿರಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.

‘ಕ್ಯಾನೋಪಿ ವಾಕ್ ಕಾಮಗಾರಿ ಬಗ್ಗೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖವೇ ಇಲ್ಲ. ಕೇವಲ ಈ ಚಾರಣ ಮಾರ್ಗದ ಉಲ್ಲೇಖವಿದೆ ಎಂಬ ಮಾತ್ರಕ್ಕೆ ಅರಣ್ಯ ಇಲಾಖೆ ಮನಸೋ ಇಚ್ಛೆ ಕಾಮಗಾರಿ ಕೈಗೊಳ್ಳುವಂತಿಲ್ಲ. ಇದೊಂದು ವಾಣಿಜ್ಯ ಉದ್ದೇಶದ ಪ್ರವಾಸೋದ್ಯಮ ಚಟುವಟಿಕೆ. ಇದರ ಹೆಸರಿನಲ್ಲಿ ರಸ್ತೆ ಕಾಮಗಾರಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 33ಎ ಅಡಿಯಲ್ಲಿ ಮುಖ್ಯ ವನ್ಯಜೀವಿ ಪರಿಪಾಲಕರು ಅನುಮತಿ ನೀಡಬೇಕೆಂದರೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಕಡ್ಡಾಯ’ ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತರು.

**

ಜೀವವೈವಿಧ್ಯದ ಮೇಲೆ ಕರಾಳ ಛಾಯೆ

‘ಗೋವಾ ಗಡಿಭಾಗದಲ್ಲಿರುವ ಕ್ಯಾಸಲ್‌ರಾಕ್ ಪ್ರದೇಶವು ರಾಷ್ಟ್ರೀಯ ಹೆದ್ದಾರಿ–4ಎಗೆ ಹೊಂದಿಕೊಂಡಿದೆ. ಇಲ್ಲಿ ಹಲವಾರು ರೆಸಾರ್ಟ್‌ಗಳು ಹಾಗೂ ಹೋಂ ಸ್ಟೇಗಳು ಈಗಾಗಲೇ ತಲೆ ಎತ್ತಿದ್ದು, ಜೀವವೈವಿಧ್ಯದ ಮೇಲೆ ಪ್ರವಾಸೋದ್ಯಮದ ಕರಾಳ ಛಾಯೆ ಆವರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಅರಣ್ಯ ಇಲಾಖೆಯೇ ಪ್ರವಾಸೋದ್ಯಮ ಹೆಚ್ಚಿಸುವ ಚಟುವಟಿಕೆಗೆ ಉತ್ತೇಜನ ನೀಡಿದರೆ ಹೇಗೆ’ ಎಂಬುದು ವನ್ಯಜೀವಿ ಕಾರ್ಯಕರ್ತರ ಪ್ರಶ್ನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT