ಗುರುವಾರ , ನವೆಂಬರ್ 14, 2019
22 °C
‘ಐಎಂಎ ಸಮೂಹ’ ಕಂಪನಿ ವಿರುದ್ಧದ ವಂಚನೆ ಪ್ರಕರಣ

‘ಐಎಂಎ’ ಕಂಪನಿ ವಿರುದ್ಧದ ವಂಚನೆ ಪ್ರಕರಣ | ಬಂಧಿತ ಡಿ.ಸಿಯಿಂದ ₹2.50 ಕೋಟಿ ಜಪ್ತಿ

Published:
Updated:
Prajavani

ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ವಿರುದ್ಧದ ವಂಚನೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಅವರಿಂದ ₹ 2.50 ಕೋಟಿ ನಗದು ಜಪ್ತಿ ಮಾಡಲಾಗಿದೆ.

‘ಕಂಪನಿಯ ಮಾಲೀಕ ಮನ್ಸೂರ್ ಖಾನ್ ಅವರಿಂದ ₹ 1.50 ಕೋಟಿ ಲಂಚ ಪಡೆದಿದ್ದ ವಿಜಯ್‌ಶಂಕರ್, ಆ ಹಣದಲ್ಲೇ ನಿವೇಶನ ಹಾಗೂ ಫ್ಲ್ಯಾಟ್ ಖರೀದಿಸಲು ಯೋಚಿಸಿದ್ದರು. ಬಿಲ್ಡರ್ ಒಬ್ಬರಿಗೆ ಹಣವನ್ನೂ ವರ್ಗಾವಣೆ ಮಾಡಿದ್ದರು ಎಂಬ ಸಂಗತಿ ವಿಚಾರಣೆಯಿಂದ ಗೊತ್ತಾಗಿತ್ತು’ ಎಂದು ಎಸ್ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಲ್ಡರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ಬಳಿ ಹಣ ಇರುವುದಾಗಿ ಒಪ್ಪಿಕೊಂಡ. ಆತನಿಂದಲೇ ಇದೀಗ ಹಣವನ್ನು ಜಪ್ತಿ ಮಾಡಲಾಗಿದೆ’ ಎಂದರು.

‘ಜಿಲ್ಲಾಧಿಕಾರಿ ವಿಜಯಶಂಕರ್, ಮತ್ತೊಂದು ವ್ಯವಹಾರದಲ್ಲಿ ವ್ಯಕ್ತಿಯೊಬ್ಬರಿಂದ ₹ 1 ಕೋಟಿ ಲಂಚ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆ ಹಣವನ್ನೂ ಇದೀಗ ಜಪ್ತಿ ಮಾಡಲಾಗಿದೆ. ಈ ಸಂಬಂಧ ವಿಶೇಷ ವರದಿಯೊಂದನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನೀಡಿ ಪ್ರಕರಣವನ್ನು ವರ್ಗಾಯಿಸಲಿದ್ದೇವೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

₹ 1.5 ಕೋಟಿ ಹಿಂತಿರುಗಿಸಿದ ‘ಅದೋನಿ’

‘ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ‘ಐಎಂಎ ಸಮೂಹ’ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಮುಂಗಡವಾಗಿ ಪಡೆದಿದ್ದ ₹ 1.5 ಕೋಟಿ ಹಣವನ್ನು ‘ಅದೋನಿ’ ಕಂಪನಿಯು ಎಸ್‌ಐಟಿಗೆ ಹಿಂತಿರುಗಿಸಿದೆ.

‘ಮೇಲ್ಸೇತುವೆ, ಸ್ಕೈವಾಕ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಕಡೆಯಿಂದ ಐಎಂಎ ಸಮೂಹ ಸಂಸ್ಥೆಯು ಗುತ್ತಿಗೆ ಪಡೆದಿತ್ತು. ಕಾಮಗಾರಿ ಕೈಗೊಳ್ಳಲು ‘ಅದೋನಿ’ ಕಂಪನಿ ಜೊತೆ ಕರಾರು ಸಹ ಮಾಡಿಕೊಂಡಿತ್ತು. ಆ ವಿಷಯ ಗೊತ್ತಾಗಿ ಅದೋನಿ ಕಂಪನಿ ಪ್ರತಿನಿಧಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಹಣ ಪಡೆದುಕೊಂಡಿದ್ದನ್ನು ಒಪ್ಪಿಕೊಂಡ ಕಂಪನಿಯ ಪ್ರತಿನಿಧಿಗಳು, ಡಿ.ಡಿ ರೂಪದಲ್ಲಿ ಹಣವನ್ನು ಹಿಂತಿರುಗಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ರೌಡಿ ಸೇರಿ ಇಬ್ಬರ ಬಂಧನ

ನಗರದ ರಿಚ್ಮಂಡ್ ರಸ್ತೆಯಲ್ಲಿರುವ ‘ಐಎಂಎ ಸಮೂಹ’ ಕಂಪನಿ ಒಡೆತನದ ಅಪಾರ್ಟ್‌ಮೆಂಟ್‌ನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅತಿಕ್ರಮಣ ಪ್ರವೇಶ ಮಾಡಿದ್ದ ಆರೋಪದಡಿ ರೌಡಿ ಮುನೀರ್‌ ಅಲಿಯಾಸ್ ಗನ್‌ ಮುನೀರ್ (50) ಹಾಗೂ ಆತನ ಸಹಚರ ಬ್ರಿಗೇಡ್ ಬಾಬುನನ್ನು (45) ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

‘ತಾವು ಸೃಷ್ಟಿಸಿದ್ದ ನಕಲಿ ದಾಖಲೆಗಳನ್ನೇ ಅಸಲಿ ಎಂದು ತೋರಿಸಿದ್ದ ಆರೋಪಿಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಸಮುಚ್ಚಯ ತಮ್ಮದೆಂದು ಹೇಳಿಕೊಳ್ಳುತ್ತಿದ್ದರು. ಅಪಾರ್ಟ್‌ಮೆಂಟ್‌ ಜಪ್ತಿ ಮಾಡಲು ಹೋದಾಗ ಅಡ್ಡಿಪಡಿಸಿದ್ದ ಆರೋಪಿಗಳು, ತಮ್ಮ ಬಳಿಯ ದಾಖಲೆ ತೋರಿಸಿ ವಾಪಸ್ ಹೋಗುವಂತೆ ಹೇಳಿದ್ದರು. ಆ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ತಿಳಿಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಆರೋಪಿ ಮುನೀರ್‌, ಬಸವನಗುಡಿ ಹಾಗೂ ತಿಲಕ್‌ನಗರ ಠಾಣೆ ರೌಡಿಶೀಟರ್. ಆರೋಪಿಗಳ ವಿರುದ್ಧ ಅಶೋಕನಗರ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)