ಜಾತಿ ಸಮೀಕ್ಷೆ; ‘ದೋಸ್ತಿ’ ತಕರಾರು?

7
ವರದಿ ಸ್ವೀಕರಿಸಲು ಸಿದ್ದರಾಮಯ್ಯ ಸಿದ್ಧ ; ಎಚ್‌.ಡಿ. ಕುಮಾರಸ್ವಾಮಿ ‘ಮೌನ’

ಜಾತಿ ಸಮೀಕ್ಷೆ; ‘ದೋಸ್ತಿ’ ತಕರಾರು?

Published:
Updated:

ಬೆಂಗಳೂರು: ರಾಜ್ಯದಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡುವಂಥ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಸಿದ್ಧವಾಗಿದ್ದು, ಸರ್ಕಾರಕ್ಕೆ ಸಲ್ಲಿಕೆಯಾಗಬೇಕಿದೆ. ಆದರೆ, ಈ ವಿಷಯದಲ್ಲೂ ‘ದೋಸ್ತಿ’ ಸರ್ಕಾರದಲ್ಲಿ ಭಿನ್ನಮತ ಮೂಡುವ ಲಕ್ಷಣಗಳು ಕಾಣಿಸಿವೆ.

ತಮ್ಮ ಆಡಳಿತಾವಧಿಯಲ್ಲಿ ನಡೆಸಿದ ಸಮೀಕ್ಷೆಯ ವರದಿ ಸ್ವೀಕರಿಸಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಸಿದ್ಧರಿದ್ದರೂ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೌನ ವಹಿಸಿದ್ದಾರೆ. ವರದಿ ಸ್ವೀಕರಿಸಿದರೆ, ಅದನ್ನು ಬಹಿರಂಗ‍ಪಡಿಸುವಂತೆ ಒತ್ತಡ ಉಂಟಾಗಬಹುದೆಂಬ ಕಾರಣಕ್ಕೆ ಕುಮಾರಸ್ವಾಮಿ ಹಿಂದೆಸರಿದಿದ್ದಾರೆ ಎನ್ನಲಾಗಿದೆ.

ತಿಂಗಳ ಹಿಂದೆಯೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ‘ವರದಿ ಸಿದ್ಧವಾಗಿದ್ದು, ಮುದ್ರಣಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಮುದ್ರಿತ ಪ್ರತಿಗಳು ಕೈಸೇರಲಿವೆ. ಸಲ್ಲಿಸಲು ಸಮಯಾವಕಾಶ ನೀಡಬೇಕು’ ಎಂದು ಪತ್ರ ನೀಡಿದೆ. ಆದರೆ, ವರದಿ ಸ್ವೀಕರಿಸಲು ಮುಖ್ಯಮಂತ್ರಿ ಉತ್ಸಾಹ ತೋರಿಸಿಲ್ಲ' ಎಂದು ಆಯೋಗದ ಮೂಲಗಳು ತಿಳಿಸಿವೆ.

ಈ ಮಧ್ಯೆ, ವರದಿಗೆ ಸಂಬಂಧಿಸಿದಂತೆ ಆಯೋಗದ ಸಭೆ ನಡೆಸಲು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಮುಂದಾಗಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಸಚಿವರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, ಸಭೆ ನಡೆಸದಂತೆ ತಾಕೀತು ಮಾಡಿದ್ದಾರೆ ಎಂದೂ ಗೊತ್ತಾಗಿದೆ.

ಈ ಬೆಳವಣಿಗೆಗಳ ನಡುವೆ, ಆಯೋಗದ ಸದಸ್ಯರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ವರದಿ ಸ್ವೀಕರಿಸುವ ಸಂಬಂಧ ಸಮನ್ವಯ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಆಯೋಗದ ಸದಸ್ಯರಿಗೆ ಅವರು ಭರವಸೆ ನೀಡಿದ್ದಾರೆ. 

ವರದಿಯಲ್ಲಿ ಏನಿದೆ?: ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಎಲ್ಲ ಜಾತಿಗಳ ಅಂಕಿಅಂಶವನ್ನು ಸಂಗ್ರಹಿಸಲಾಗಿದ್ದು, ಜಾತಿ ವರ್ಗೀಕರಣವನ್ನು ಪುನರ್‌ ರಚಿಸಬೇಕಾದ ಅಗತ್ಯದ ಪ್ರಸ್ತಾವವಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಮಾತ್ರ ಶೇ 84ರಷ್ಟು ಸಮೀಕ್ಷೆ ನಡೆದಿದೆ. ಉಳಿದಂತೆ ರಾಜ್ಯದ ಸಮಗ್ರ ಚಿತ್ರಣವಿದೆ. ವಿಧಾನಸಭೆ ಕ್ಷೇತ್ರವಾರು ಜಾತಿ ಲೆಕ್ಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯಮಿಕ ವಲಯದಲ್ಲಿರುವ ಜಾತಿ ಅಂಕಿಅಂಶಗಳಿವೆ. 30 ಸಂಪುಟಗಳಲ್ಲಿ ವರದಿ ಸಿದ್ಧಪಡಿಸಲಾಗಿದೆ.

ಸಮೀಕ್ಷೆಯಲ್ಲಿ 1,351 ಜಾತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿತ್ತು. ಆದರೆ, ಹೆಚ್ಚುವರಿಯಾಗಿ 510 ಜಾತಿಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಿಂದ ವಲಸೆ ಬಂದು ರಾಜ್ಯದಲ್ಲಿ 60–70 ವರ್ಷಗಳಿಂದ ನೆಲೆಸಿದವರು ತಮ್ಮ ಜಾತಿ ನಮೂದಿಸಿದ್ದಾರೆ. ಈ ಜಾತಿಗಳು ಕೇವಲ 10 ಜನರಿಂದ 200ರಷ್ಟು ಜನಸಂಖ್ಯೆ ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ಜಾತಿ ವರ್ಗೀಕರಣವನ್ನು ಪುನರ್‌ ರಚಿಸುವ ಮೂಲಕ ಅರ್ಹ ಜಾತಿಗಳಿಗೆ ನ್ಯಾಯ ಒದಗಿಸಬೇಕಾಗಿದೆ. ಈ ಕಾರಣಕ್ಕೆ ಕೆಲವು ಜಾತಿಗಳ ಸ್ಥಾನಪಲ್ಲಟ ಆಗಲಿದೆ. ಹೊಸತಾಗಿ ಗುರುತಿಸಿದ ಜಾತಿಗಳನ್ನು ಸೇರಿಸಲಾಗಿದೆ. ಈ ರೀತಿಯ ವರ್ಗೀಕರಣದಿಂದ ಪ್ರತಿ ವರ್ಗಕ್ಕೆ ಈಗ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣದಲ್ಲೂ ವ್ಯತ್ಯಾಸ ಆಗಲಿದೆ. ರಾಜ್ಯದಲ್ಲಿರುವ ಹಲವು ಜಾತಿಗಳು 60–70 ವರ್ಷಗಳಿಂದ ಮೀಸಲಾತಿ ವಂಚಿತವಾಗಿವೆ. ಈ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಾರ ಮೀಸಲಾತಿ ಪ್ರಮಾಣ ಶೇ 50 ಮೀರಬಾರದು. ಆದರೆ, ಸಂವಿಧಾನ ತಿದ್ದುಪಡಿ ಮೂಲಕ ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 69ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲೂ ಜನಸಂಖ್ಯೆ ಆಧಾರದಲ್ಲಿ ಹಾಲಿ ಮೀಸಲಾತಿ ಪ್ರಮಾಣವನ್ನು ಶೇ 50ರಿಂದ (ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟ ವರ್ಗಕ್ಕೆ ಶೇ 3) ಶೇ 70ಕ್ಕೆ ಹೆಚ್ಚಿಸಬೇಕಾದ ಬಗ್ಗೆ ಮತ್ತು ಅದಕ್ಕೆ ಪೂರಕ ಅಂಕಿಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಳವಾದರೆ ಪರಿಶಿಷ್ಟ ವರ್ಗಕ್ಕೆ ನಿಗದಿಪಡಿಸಿದ ಮೀಸಲಾತಿಯನ್ನೂ ಹೆಚ್ಚಿಸಬೇಕಾಗುತ್ತದೆ’ ಎಂದೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮೊದಲ ಸ್ಥಾನದಲ್ಲಿ ದಲಿತರು
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಕಾರ ಜನಸಂಖ್ಯೆಯಲ್ಲಿ ರಾಜ್ಯದಲ್ಲಿ ದಲಿತರು ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಮುಸ್ಲಿಮರು, ಲಿಂಗಾಯತರು, ಒಕ್ಕಲಿಗ, ಕುರುಬ, ಮರಾಠ, ಈಡಿಗ ಸಮುದಾಯದವರಿದ್ದಾರೆ ಎಂದು ಗೊತ್ತಾಗಿದೆ.

*
ವರದಿ ಸಿದ್ಧಗೊಂಡಿರುವುದಾಗಿ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ. ಆಯೋಗದ ಸಭೆ ನಾನೇ ನಡೆಸುತ್ತೇನೆ ಎಂದು ಸಿ.ಎಂ ಹೇಳಿದ್ದಾರೆ. ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತೇವೆ.
-ಪುಟ್ಟರಂಗಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

*
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತ ತಲುಪಿದೆ. ಈ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದು, ಸೂಚನೆಗಾಗಿ ಕಾಯುತ್ತಿದ್ದೇವೆ.
ಎಚ್‌. ಕಾಂತರಾಜ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !