ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆತ್ಮಸಾಕ್ಷಿಯೇ ಸೆನ್ಸಾರ್ ಮಂಡಳಿ’

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

* ಚಿತ್ರೋತ್ಸವದ ನಿಮ್ಮ ಅನುಭವ...
ನನಗೆ ಬಹಳ ಸಂತೋಷವಾಗಿದೆ. ನನ್ನ ‘ಯು ಗೋ ಟು ಮೈ ಹೆಡ್‌’ ಚಿತ್ರ ಪ್ರದರ್ಶನವಾಗಿದೆ. ಸಿನಿರಸಿಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂತರರಾಷ್ಟ್ರೀಯ ಹಬ್ಬಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ಚಿತ್ರಜಗತ್ತಿನ ಒಳಹೊರಗುಗಳನ್ನು ಅರಿಯಲು ಈ ಉತ್ಸವ ನನಗೆ ಸಹಕಾರಿಯಾಗಿದೆ. ಸಾಕಷ್ಟು ಭಾರತೀಯ ಚಿತ್ರಗಳ ವೀಕ್ಷಣೆಗೂ ವೇದಿಕೆಯಾಗಿದೆ. ಜೊತೆಗೆ ಜಗತ್ತಿನ ಮೇರು ನಿರ್ದೇಶಕರ ಭೇಟಿಯ ಅಪೂರ್ವ ಅವಕಾಶ ದೊರೆತಿದೆ.

* ನಿಮ್ಮ ಪ್ರಕಾರ ಭಾರತೀಯ ಚಿತ್ರಗಳು ಹಾಗೂ ಫ್ರೆಂಚ್‌ ಚಿತ್ರಗಳ ನಡುವಿನ ವ್ಯತ್ಯಾಸಗಳೇನು?
ನಾನು ಸಾಕಷ್ಟು ಭಾರತೀಯ, ಅದರಲ್ಲೂ ಪ್ರಮುಖವಾಗಿ ಬಾಲಿವುಡ್‌ ಚಿತ್ರಗಳ‌ನ್ನು ನೋಡಿದ್ದೇನೆ. ಅಮಿತಾಭ್‌ ಬಚ್ಚನ್‌ ಇಷ್ಟವಾಗುತ್ತಾರೆ. ನಾನು ಸಿನಿಮಾ ಕುರಿತು ಅಧ್ಯಯನ ಮಾಡುವಾಗ ನಮ್ಮ ಗುರು ಸತ್ಯಜಿತ್‌ ರೇ ಅವರ ಸಿನಿಮಾಗಳನ್ನು ತೋರಿಸುತ್ತಿದ್ದರು. ಭಾರತೀಯ ಸಿನಿಮಾಗಳಿಗೂ ವಿಶ್ವದ ಇತರ ಚಿತ್ರಗಳಿಗೂ ಅಂಥ ವ್ಯತ್ಯಾಸಗಳಿವೆ ಎಂದು ನನಗನಿಸಿಲ್ಲ. ಫ್ರಾನ್ಸ್‌ನ ಚಿತ್ರಗಳು ಅಲ್ಲಿನ ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟರೆ, ಭಾರತೀಯ ಚಿತ್ರಗಳು ಇಲ್ಲಿನ ಸಂಸ್ಕೃತಿ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳನ್ನು ಬಿಂಬಿಸುತ್ತವೆ.  ಬಾಲಿವುಡ್‌ನ ಮುಖ್ಯವಾಹಿನಿಯ ಚಿತ್ರಗಳಲ್ಲಿ ಹಾಡು, ನೃತ್ಯ ಮನೊರಂಜನಾ ಅಂಶಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

* ಫ್ರಾನ್ಸ್‌ನ ಚಿತ್ರೋದ್ಯಮ ಯಾವ ನಿಟ್ಟಿನಲ್ಲಿ ಅಭಿವೃದ್ಧಿಯಾಗುತ್ತಿದೆ?
ಯುರೋಪಿನ ಸಿನಿಜಗತ್ತಿಗೆ ಫ್ರಾನ್ಸ್‌ ಚಿತ್ರಗಳ ಕೊಡುಗೆ ಸಾಕಷ್ಟಿದೆ. ಇತ್ತೀಚೆಗೆ ಹೆಚ್ಚು ಹಣ ಹೂಡಿಕೆಯಾಗುತ್ತಿದೆ. ₹40 ಕೋಟಿಗೂ ಹೆಚ್ಚು ಹಣವನ್ನು ಚಿತ್ರಗಳಿಗೆ ವಿನಿಯೋಗಿಸಲಾಗುತ್ತಿದೆ. ಆರ್ಥಿಕವಾಗಿ, ತಾಂತ್ರಿಕವಾಗಿ ಒಂದು ಉದ್ಯಮವಾಗಿ ಬೆಳವಣಿಗೆಯಾಗುತ್ತಿದೆ. ಹಾಲಿವುಡ್‌ ಚಿತ್ರಗಳಿಗೆ ಎಲ್ಲ ರೀತಿಯಲ್ಲೂ ಸ್ಪರ್ಧೆ ನೀಡುವಲ್ಲಿ ಫ್ರಾನ್ಸ್ ಚಿತ್ರಗಳು ಸಮರ್ಥವಾಗಿವೆ.

* ಯಾವ ಪರಿಕಲ್ಪನೆಯ ಚಿತ್ರಗಳನ್ನು ನಿರ್ದೇಶಿಸುವಲ್ಲಿ ನಿಮಗೆ ಹೆಚ್ಚು ಆಸಕ್ತಿ?
ಒಬ್ಬ ನಿರ್ದೇಶಕನಾಗಿ ಎಲ್ಲ ಬಗೆಯ ವಿಷಯಗಳ ಮೇಲೆ ಸಮಾನ ಆಸಕ್ತಿ ಇದೆ. ಒಂದೇ ಪರಿಕಲ್ಪನೆಗೆ ಸೀಮಿತವಾಗಿರಲು ಇಚ್ಚಿಸುವುದಿಲ್ಲ. ಆಯಾ ಸಮಯ, ಸಂದರ್ಭಗಳಿಗೆ ಹೊಂದಿಕೆಯಾಗುವ ಕಥೆಗಳನ್ನು ಆಯ್ಕೆಮಾಡಿಕೊಳ್ಳುತ್ತೇನೆ. ರಾಜಕೀಯ ತಲ್ಲಣಗಳ ಸಂದರ್ಭಗಳಲ್ಲಿ ರಾಜಕೀಯ ವಿಷಯವಾದರೆ, ಸಾಂಸ್ಕೃತಿಕ, ಧಾರ್ಮಿಕ, ವರ್ಗ ಸಂಘರ್ಷ ಪ್ರಸ್ತುತವಾಗಿರುವಾಗ ಅದರ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಅದು ಒಬ್ಬ ನಿರ್ದೇಶಕನಿಗಿರುವ ನೈತಿಕ ಜವಾಬ್ದಾರಿಯೂ ಹೌದು.

* ಚಲನಚಿತ್ರಗಳಿಗೆ ಸೆನ್ಸಾರ್ ಶಿಪ್‌ (ಪ್ರಮಾಣೀಕರಣ) ಎಷ್ಟು ಅಗತ್ಯ‌?
ಪ್ರತಿ ನಿರ್ದೇಶಕನ ಆತ್ಮಸಾಕ್ಷಿಯೇ ನಿಜವಾದ ಸೆನ್ಸಾರ್ ಮಂಡಳಿ. ಅದರ ಹೊರತಾಗಿಯೂ ಪ್ರತಿ ರಾಷ್ಟ್ರ ತಮ್ಮದೇ ಆದ ಬಾಹ್ಯ ನಿರ್ಬಂಧಗಳನ್ನು ರೂಪಿಸಿಕೊಂಡಿದೆ. ಸೆನ್ಸಾರ್ ಮಂಡಳಿ ಪ್ರದರ್ಶನಕ್ಕೆ ಒಪ್ಪಿಗೆ ಕೊಟ್ಟ ಚಿತ್ರಗಳನ್ನೂ ಸಾರ್ವಜನಿಕರು ನಿರ್ಭಂದಿಸುವುದು ಚಿತ್ರದ ವಿರುದ್ಧ ಪ್ರತಿಭಟಿಸುವುದು ತಪ್ಪು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನು ಚಿತ್ರಗಳಿಗೆ ಗ್ರೇಡ್‌ ನೀಡುವ ಸಂಪ್ರದಾಯ ಇದ್ದಾಗ ದೃಶ್ಯಗಳಿಗೆ ಕತ್ತರಿ ಹಾಕುವುದು ಸಮಂಜಸವಲ್ಲ. ಎಲ್ಲ ದೃಶ್ಯಗಳನ್ನೊಳಗೊಂಡಂತೆ ಚಿತ್ರಕ್ಕೆ ಯಾವ ಗ್ರೇಡ್‌ ನೀಡಬಹುದು ಎಂಬುದನ್ನಷ್ಟೇ ಸೆನ್ಸಾರ್ ಮಂಡಳಿ ನಿರ್ಧರಿಸಬೇಕು.

* ಚಿತ್ರಗಳಿಗೆ ಸಾಮಾಜಿಕ ವಿರೋಧದ ಬಗ್ಗೆ ನಿಮ್ಮ ಅಭಿಪ್ರಾಯ
ಈ ಪ್ರಕ್ರಿಯೆ ಯಾವುದೇ ಒಂದು ದೇಶಕ್ಕೆ ಸೀಮಿತವಾದುದಲ್ಲ. ಎಲ್ಲ ಕಾಲಕ್ಕೂ, ಎಲ್ಲ ದೇಶದಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ಯದ ಹರಣ ಇದ್ದೇ ಇದೆ. ನಾನು ‘ರೇ ಮುಲರ್ಸ್‌’ ಸಾಕ್ಷ್ಯಚಿತ್ರ ನಿರ್ಮಿಸಿದಾಗ ಸಾಕಷ್ಟು ವಿವಾದವಾಯಿತು. ನಂತರ ಒಪ್ಪಿಕೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮೆಚ್ಚುಗೆ ವ್ಯಕ್ತವಾಯಿತು. ಚಿತ್ರವನ್ನು ವೀಕ್ಷಿಸದೇ ಪೂರ್ವಗ್ರಹ ಪೀಡಿತರಾಗಿ ವಿರೋಧಿಸುವುದು ಕೆಟ್ಟ ಸಂಪ್ರದಾಯ. ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ಜಗತ್ತಿನೆಲ್ಲೆಡೆ ತೀವ್ರಗತಿಯಲ್ಲಿ ಬೆಳೆಯುತ್ತಿರುವುದು ಅಪಾಯಕಾರಿ.

* ಜಾಗತಿಕವಾಗಿ ಚಲನಚಿತ್ರಗಳು ಎಷ್ಟು ಪ್ರಸ್ತುತ?
ದೃಶ್ಯಮಾಧ್ಯಮವಾಗಿ ಚಲನಚಿತ್ರಗಳ ಪ್ರಭಾವ ಅಮೋಘ. ಆದರೆ ಯಾವುದೇ ಸಮಾಜವನ್ನು ಬದಲಾಯಿಸುವ ಶಕ್ತಿ ಸಿನಿಮಾಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ಜಗತ್ತನ್ನು ನೋಡುವ ಕಿಟಕಿಯಾಗಿ, ಸಂಸ್ಕೃತಿಯನ್ನು ಅರಿಯುವ ಮಾಧ್ಯಮವಾಗಿ ಪ್ರಾಮುಖ್ಯತೆ ಪಡೆದಿವೆಯಷ್ಟೇ.

* ಫ್ರೆಂಚ್‌ನ ನ್ಯೂ ವೇವ್ (ಹೊಸ ಅಲೆ) ಚಿತ್ರಗಳ ಪ್ರಭಾವ ಈಗಿನ ಫ್ರೆಂಚ್‌ ಚಿತ್ರೋದ್ಯಮದ ಮೇಲೆ ಹೇಗಿದೆ?
ಸದ್ಯಕ್ಕಂತೂ ನ್ಯೂ ವೇವ್ ಪ್ರಭಾವ ಗೌಣವಾಗಿದೆ. 1958 ರ 1960 ರಲ್ಲಿ ‘ಜಾನ್ ಲೂಕ್ ಗೊಡಾರ್ಡ್‌’ ಅವರಂತಹ ಯುವ ಮನಸುಗಳು ಸೇರಿ ಸಿನಿಮಾದ ಮುಖೇನ ಒಂದು ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದರು. ಆ ಸಂದರ್ಭದ ಯುವ ಜನರನ್ನು ಕಾಡುತ್ತಿದ್ದ ಒಂಟಿತನ, ಏನು ಮಾಡಬೇಕು ಎಂದು ತೋಚದ ಮನಸ್ಥಿತಿ, ರಾಜಕೀಯ ತಲ್ಲಣಗಳು ‘ಬ್ರೆತ್‌ಲೆಸ್‌’ ನಂತಹ ಅದ್ಬುತ ಚಿತ್ರಗಳ ಮೂಲಕ ಬಿಂಬಿತವಾದವು. ಆದರೆ ಈ ಬಗೆಯ ಚಿತ್ರಗಳು ದೀರ್ಘಕಾಲಿಕ ಚಳುವಳಿಯಾಗಿ ಉಳಿಯಲಿಲ್ಲ. ಇಂದಿನ ಚಿತ್ರೋದ್ಯಮ ಆಗಿನ ಚಿತ್ರಗಳಿಂದ ಬಹಳಷ್ಟು ಅಂತರ ಕಾಯ್ದುಕೊಂಡಿದೆ. ಫ್ರಾನ್ಸ್‌ಗಿಂತ ಹೆಚ್ಚಾಗಿ 1970 ರ ದಶಕದ ಇಟಲಿಯ ಚಿತ್ರಗಳಲ್ಲಿ ‘ಫ್ರೆಂಚ್‌ ನ್ಯೂ ವೇವ್’ ಪ್ರಭಾವ ಕಾಣಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT