4

‘ಕಾವೇರಿ’ಗೆ ತಮಿಳುನಾಡು ಕ್ಯಾತೆ

Published:
Updated:

ನವದೆಹಲಿ: ಜುಲೈ ತಿಂಗಳಿನಲ್ಲಿ 34 ಟಿಎಂಸಿ ಅಡಿ ಕಾವೇರಿ ನೀರನ್ನು ಹರಿಸಲೇಬೇಕು ಎಂದು ತಮಿಳುನಾಡು ಹಟ ಹಿಡಿದಿದ್ದು, ಐ–ತೀರ್ಪಿನಲ್ಲಿ ಹಂಚಿಕೆಯಾಗಿರುವುದಕ್ಕಿಂತ ಹೆಚ್ಚಿನ ನೀರನ್ನು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಖಡಾಖಂಡಿತವಾಗಿ ಪ್ರತಿಪಾದಿಸಿದೆ.

ಸೋಮವಾರ ಇಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆಯಲ್ಲಿ ಉಭಯ ರಾಜ್ಯಗಳ ಪ್ರತಿನಿಧಿ ಸದಸ್ಯರ ವಾದ ಆಲಿಸಿದ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಮಸೂದ್ ಹುಸೇನ್‌, ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ, ಮಳೆ ಸ್ಥಿತಿಗತಿ ಮಾಹಿತಿ ಪಡೆದು ಜುಲೈ 5ರಂದು ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು.

ಕರ್ನಾಟಕವು ಜುಲೈ ತಿಂಗಳಲ್ಲಿ ತಮಿಳುನಾಡಿಗೆ 34 ಟಿಎಂಸಿ ಅಡಿ ನೀರು ಹರಿಸುವಂತೆ ನ್ಯಾಯಮಂಡಳಿ ತನ್ನ ಐತೀರ್ಪಿನಲ್ಲಿ ಸೂಚಿಸಿತ್ತು. ಈ ಐತೀರ್ಪನ್ನು ಮಾರ್ಪಾಡು ಮಾಡಿರುವ ಸುಪ್ರೀಂ ಕೋರ್ಟ್‌, ತಮಿಳುನಾಡಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ 14.75 ಟಿಎಂಸಿ ಅಡಿಯಷ್ಟು ಕಡಿತಗೊಳಿಸಿದೆ. ರಾಜ್ಯದ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಮಾಹಿತಿ ಪಡೆದು ತಮಿಳುನಾಡಿಗೆ ಜುಲೈನಲ್ಲಿ ಎಷ್ಟು ನೀರು ಹರಿಸಬೇಕು ಎಂಬುದನ್ನು ಪ್ರಾಧಿಕಾರ ನಿರ್ಧರಿಸಬೇಕಿದೆ.

ಸಭೆಯಲ್ಲಿ ಮಾತನಾಡಿದ ಕರ್ನಾಟಕ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ‘ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರಿನ ಸಂಗ್ರಹ ಇಲ್ಲದ್ದರಿಂದ ಅಷ್ಟು ಪ್ರಮಾಣದ ನೀರನ್ನು ದಿಢೀರ್‌ ಹರಿಸಲು ಸಾಧ್ಯವಾಗದು. ಜಲಾಶಯಗಳ ಉಸ್ತುವಾರಿಗಾಗಿ ಪ್ರತಿನಿಧಿಗಳನ್ನು ನಿಯೋಜಿಸುವ ಪ್ರಸ್ತಾವಕ್ಕೆ ರಾಜ್ಯದ ವಿರೋಧ ಇದೆ. ಈ ಪ್ರಾತಿನಿಧ್ಯ ಕಾನೂನು ಸಮ್ಮತವೇ ಎಂಬುದು ಸಂಶಯಾಸ್ಪದ’ ಎಂದು ಪ್ರತಿಪಾದಿಸಿದರು.

ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾದ ವಿಷಯ

 * ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ಚಟುವಟಿಕೆ ಹಾಗೂ ನಿಯಮಾವಳಿ ರೂಪಿಸುವುದು

* ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳ ನಿರ್ವಹಣೆ ಕುರಿತು ಅಭಿಪ್ರಾಯ ಸಂಗ್ರಹ

* ಕಾವೇರಿ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಕಚೇರಿ ನಿರ್ಮಾಣಕ್ಕೆ ಸ್ಥಳ ಗೊತ್ತು ಮಾಡುವುದು, ಮೂಲ ಸೌಕರ್ಯ ಕಲ್ಪಿಸುವುದು

* ಕಣಿವೆ ವ್ಯಾಪ್ತಿಯಲ್ಲಿನ ಕೇರಳದ ಬಾಣಾಸುರ ಸಾಗರ, ರಾಜ್ಯದ ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‍ಎಸ್, ತಮಿಳುನಾಡಿನ ಮೆಟ್ಟೂರು, ಅಮರಾವತಿ, ಭವಾನಿ ಜಲಾಶಯಗಳ ಒಳಹರಿವು ಮತ್ತು ಹೊರಹರಿವಿನ ಮಾಹಿತಿ ಸಂಗ್ರಹ ವ್ಯವಸ್ಥೆ ರೂಪಿಸುವುದು

***

ರಾಜ್ಯದ ವಾಸ್ತವ ಸ್ಥಿತಿಗತಿಯನ್ನು ಅಧಿಕಾರಿಗಳು ಪ್ರಾಧಿಕಾರದ ಮುಂದಿಟ್ಟಿದ್ದಾರೆ. ಎಚ್‌.ಡಿ.ದೇವೇಗೌಡರು ಹಾಗೂ ನೀರಾವರಿ ಪರಿಣತರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ
ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಸಚಿವ
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !