ಕಾವೇರಿಗೆ ತ್ಯಾಜ್ಯ: ಮೂಲದಲ್ಲೇ ಕಲುಷಿತ

ಶನಿವಾರ, ಮಾರ್ಚ್ 23, 2019
24 °C
ನೀರಿನ ಗುಣಮಟ್ಟ ಕುಸಿತ, ಜನರ ಆರೋಗ್ಯದ ಮೇಲೂ ಪರಿಣಾಮ

ಕಾವೇರಿಗೆ ತ್ಯಾಜ್ಯ: ಮೂಲದಲ್ಲೇ ಕಲುಷಿತ

Published:
Updated:
Prajavani

ಮಡಿಕೇರಿ: ಕಾವೇರಿ ಒಡಲಿಗೆ ಮೂಲದಲ್ಲಿಯೇ ತ್ಯಾಜ್ಯ ಸೇರ್ಪಡೆಗೊಳ್ಳುತ್ತಿದ್ದು ನದಿ ನೀರು ಕಪ್ಪಿಡುತ್ತಿದೆ. ಕಾಫಿ ಪಲ್ಪಿಂಗ್‌ ತ್ಯಾಜ್ಯ, ಮೀನು ತ್ಯಾಜ್ಯ, ಪ್ಲಾಸ್ಟಿಕ್‌ ಹಾಗೂ ಹೋಂಸ್ಟೇಗಳಲ್ಲಿನ ಶೌಚಾಲಯದ ನೀರು ನೇರವಾಗಿ ನದಿ ಸೇರುತ್ತಿದೆ. ನದಿ ಮೂಲವಾದ ಕೊಡಗಿನಲ್ಲಿಯೇ ಕಾವೇರಿ ಕಲುಷಿತಗೊಳ್ಳುತ್ತಿದ್ದಾಳೆ.

ಕೋಟ್ಯಂತರ ಜನರ ಪಾಲಿಗೆ ‘ಜೀವಜಲ’ವಾಗಿರುವ ಕಾವೇರಿಯು ಎಲ್ಲಿ ಜೀವಕ್ಕೇ ಕಂಟಕವಾಗುತ್ತಾಳೋ ಎಂಬ ಭಯ ಕಾಡಲು ಆರಂಭಿಸಿದೆ. ಮಳೆಗಾಲದಲ್ಲಿ ಮೈದುಂಬಿಕೊಂಡು ಹರಿದರೆ, ಬೇಸಿಗೆಯ ಮೂರು ತಿಂಗಳು ಸಮಸ್ಯೆ ಹೇಳತೀರದು. ಈ ವರ್ಷವೂ ಅದೇ ದುರ್ಗತಿ ಎದುರಾಗಿದೆ.

ಸಿದ್ದಾಪುರ, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಮೂರು ತಿಂಗಳಿಂದ ಕಾಫಿ ಪಲ್ಪಿಂಗ್‌ ಮಾಡಿದ ತ್ಯಾಜ್ಯದ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ನೀರನ್ನೇ ಕುಡಿಯಲು ಬಳಸುತ್ತಿರುವ ಗ್ರಾಮಸ್ಥರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾಫಿ ತೋಟದ ಮಾಲೀಕರಿಗೆ ನೋಟಿಸ್‌ ನೀಡಿ ಮೌನಕ್ಕೆ ಶರಣಾಗಿದ್ದಾರೆ. ನದಿ ಕಲುಷಿತವಾಗುವುದನ್ನು ತಡೆಯಲು ಯಾವ ಕ್ರಮವೂ ಆಗಿಲ್ಲ ಎಂದು ಆರೋಪ ಕೇಳಿಬಂದಿದೆ.

ಕುಶಾಲನಗರದಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ ಸ್ಥಗಿತಗೊಂಡಿದ್ದು ರೆಸಾರ್ಟ್‌, ಹೋಂಸ್ಟೇ ಹಾಗೂ ಮನೆಗಳ ಕಲುಷಿತ ನೀರು ನದಿ ಪಾಲಾಗುತ್ತಿದೆ. ಸ್ಥಳೀಯ ಸಂಸ್ಥೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಪರಿಸರ ಪ್ರೇಮಿಗಳು ದೂರುತ್ತಾರೆ.

ತಲಕಾವೇರಿಯಿಂದ 8 ಕಿ.ಮೀ ಅಷ್ಟೇ ಸ್ವಚ್ಛವಾಗಿ ಹಿರಿಯುವ ನದಿ ಮುಂದೆ ಕಲುಷಿತವಾಗುತ್ತಲೇ ಸಾಗುತ್ತಿದೆ. ಕುಶಾಲನಗರ ಸೇರುವಷ್ಟರಲ್ಲಿ ಕಾವೇರಿಯು ಕಪ್ಪಿಟ್ಟು ಹೋಗುತ್ತಿದ್ದಾಳೆ. ‘ನದಿಯ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದೃಢಪಡಿಸಿದ್ದಾರೆ.

ನದಿ ಹರಿಯುವ 500 ಮೀಟರ್‌ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೆ, ಬಹುತೇಕ ಹೋಂಸ್ಟೇ, ರೆಸಾರ್ಟ್‌ಗಳು ಇರುವುದೇ ನದಿ ತಟದಲ್ಲಿ. ಇವುಗಳ ತ್ಯಾಜ್ಯ ಪ್ರತಿನಿತ್ಯ ನದಿಯ ಒಡಲು ಸೇರುತ್ತಿವೆ. ಜತೆಗೆ, ನದಿ ತಟದ ಪಟ್ಟಣ ಹಾಗೂ ಗ್ರಾಮಗಳ ತ್ಯಾಜ್ಯ, ಕಲುಷಿತ ನೀರೂ ನದಿ ಪಾಲಾಗುತ್ತಿದೆ. ಸಿದ್ದಾಪುರ ಭಾಗದಲ್ಲಿ ವ್ಯಾಪಾರಸ್ಥರು ಮೀನಿನ ತ್ಯಾಜ್ಯವನ್ನು ನದಿಗೆ ಎಸೆಯುವ ಮೂಲಕ ಕಂಟಕವಾಗುತ್ತಿದ್ದಾರೆ.

**

ಕುಶಾಲನಗರ ಭಾಗದಲ್ಲಿ ಯುಜಿಡಿ ವ್ಯವಸ್ಥೆಯಿಲ್ಲ. ಹೀಗಾಗಿ, ನದಿ ನೀರು ಮನೆಗೆ, ಮನೆಯ ನೀರು ನದಿಗೆ ಎನ್ನುವ ಸ್ಥಿತಿಯಿದೆ.
-ಚಂದ್ರಮೋಹನ್‌, ರಾಜ್ಯ ಸಂಚಾಲಕ, ಕಾವೇರಿ ನದಿ ಸ್ವಚ್ಛತಾ ಆಂದೋಲನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !