ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ವನ್ಯಜೀವಿ ಧಾಮ ಕಾಳ್ಗಿಚ್ಚು: ಬೆಂಕಿ ನಂದಿಸಲು ಸಿಬ್ಬಂದಿ, ಸಲಕರಣೆ ಕೊರತೆ

1.02 ಲಕ್ಷ ಹೆಕ್ಟೇರ್‌ ಪ್ರದೇಶ ವಿಸ್ತಾರದ ಅರಣ್ಯ
Last Updated 25 ಫೆಬ್ರುವರಿ 2019, 19:23 IST
ಅಕ್ಷರ ಗಾತ್ರ

ರಾಮನಗರ: ಕಾವೇರಿ ವನ್ಯಜೀವಿ ಧಾಮದ ಒಳಗೆ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳತೊಡಗಿದ್ದು, ಅಪಾಯದ ಮುನ್ಸೂಚನೆ ನೀಡತೊಡಗಿದೆ. ಆದರೆ ಇದನ್ನು ನಂದಿಸಲು ಬೇಕಾದಷ್ಟು ಸಿಬ್ಬಂದಿ, ಸಲಕರಣೆಗಳೇ ಅರಣ್ಯ ಇಲಾಖೆಯ ಬಳಿ ಇಲ್ಲ.

ಕಾಡಿನಲ್ಲಿ ಬೆಂಕಿ ಹರಡದಂತೆ ನೋಡಿಕೊಳ್ಳುವುದು. ಬೆಂಕಿ ಹೊತ್ತಿಕೊಂಡ ಸಂದರ್ಭ ಅದನ್ನು ನಂದಿಸಲೆಂದೇ ಅರಣ್ಯ ಇಲಾಖೆಯು ಅರಣ್ಯ ವೀಕ್ಷಕರನ್ನು (ವಾಚರ್‌/ಫೈರ್ ವಾಚರ್‌) ನೇಮಕ ಮಾಡಿಕೊಳ್ಳುತ್ತದೆ. ಈ ವಾಚರ್‌ಗಳಿಗೆ ದಿನಗೂಲಿ ಆಧಾರದ ಮೇಲೆ ವೇತನ ನೀಡಲಾಗುತ್ತಿದೆ. ದಿನವೊಂದಕ್ಕೆ ₹400 ಕೂಲಿ ನಿಗದಿಪಡಿಸಿದ್ದು, ತಿಂಗಳಿಗೆ ₹12 ಸಾವಿರ ಸಿಗುತ್ತದೆ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನವೂ ಇವರಿಗೆ ಸಿಗುತ್ತಿಲ್ಲ.

1.02 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿರುವ ಕಾವೇರಿ ವನ್ಯಧಾಮದಲ್ಲಿ ಹನೂರು, ಗೋಪಿನಾಥಂ, ಕೌದಳ್ಳಿ, ಹಲಗೂರು, ಸಂಗಮ ಹಾಗೂ ಮುಗ್ಗೂರು ವಲಯಗಳು ಬರುತ್ತವೆ. ಅಪಾರ ಪ್ರಮಾಣದ ಸಂರಕ್ಷಿತ ವನ್ಯ ಮತ್ತು ಸಸ್ಯ ಸಂಪತ್ತು ಇಲ್ಲಿದೆ. ಸರ್ಕಾರವು ಪ್ರತಿ 400–500 ಹೆಕ್ಟೇರ್‌ಗೆ ಒಬ್ಬರಂತೆ ವಾಚರ್‌ಗಳನ್ನು ನೇಮಿಸಬೇಕಿದೆ. ಆದರೆ ಇದಕ್ಕೆ ಪ್ರತಿಯಾಗಿ 1,500–2,000 ಹೆಕ್ಟೇರ್‌ಗೆ ಒಬ್ಬ ವಾಚರ್‌ ಅನ್ನು ನಿಯೋಜಿಸಲಾಗಿದೆ.

ಒಂದು ವಲಯಕ್ಕೆ ಸುಮಾರು 50 ವಾಚರ್‌ಗಳ ಅವಶ್ಯಕತೆ ಇದೆ. ಆದರೆ ಪ್ರಸ್ತುತ ಒಂದು ವಲಯಕ್ಕೆ 8–10 ವಾಚರ್‌ಗಳು ಇದ್ದಾರೆ. ಕಡಿಮೆ ಸಂಬಳದ ಕಾರಣ ಹೆಚ್ಚು ಸಿಬ್ಬಂದಿ ಕೆಲಸಕ್ಕೆ ಬರುತ್ತಿಲ್ಲ. ಇರುವ ಕಾರ್ಮಿಕರೂ ನಿಯಮಿತವಾಗಿ ಕೆಲಸಕ್ಕೆ ಸಿಗುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.

‘ಅರಣ್ಯ ಇಲಾಖೆಯ ಸಿಬ್ಬಂದಿಗೆ ಸೂಕ್ತ ವೇತನವಾಗಲಿ, ಅನುದಾನವಾಗಲಿ ಸಿಗುತ್ತಿಲ್ಲ. ಒಂದು ವಲಯದ ನಿರ್ವಹಣೆಗೆ ವಾರ್ಷಿಕ ₹8–10 ಲಕ್ಷ ಅನುದಾನ ಸಿಗುತ್ತಿದ್ದು, ಇದರಲ್ಲಿಯೇ ಸಿಬ್ಬಂದಿ ವೇತನ ಸಹಿತ ಎಲ್ಲ ಖರ್ಚನ್ನೂ ಭರಿಸಬೇಕು’ ಎಂದು ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘ಕಾಡಿನ ಒಳಗೆ ಅಗ್ನಿಶಾಮಕ ವಾಹನಗಳು ಹೋಗುವುದಿಲ್ಲ. ದೊಡ್ಡ ಮಟ್ಟದಲ್ಲಿ ಬೆಂಕಿ ಬಿದ್ದಾಗ ಸಿಬ್ಬಂದಿಯೇ ಆರಿಸಬೇಕು. ಆದರೆ ಅದಕ್ಕೆ ಬೇಕಾದ ಉಪಕರಣಗಳು ನಮ್ಮಲ್ಲಿ ಇಲ್ಲ. ಇನ್ನೂ ಹಳೆಯ ವಿಧಾನಗಳನ್ನೇ ಅನುಸರಿಸಲಾಗುತ್ತಿದೆ. ಆಧುನಿಕ ಉಪಕರಣ ಹಾಗೂ ವಾಹನಗಳ ಖರೀದಿಗೆ ಅನುದಾನದ ಕೊರತೆ ಇದೆ’ ಎಂದು ಇಲಾಖೆಯ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

ಸರ್ಕಾರಕ್ಕೆ ಮನವಿ: ‘ಸದ್ಯ ಪ್ರತಿ ವಲಯಕ್ಕೆ 10 ವಾಚರ್‌ಗಳನ್ನು ನಿಯೋಜಿಸಿದ್ದೇವೆ. ಉಳಿದ ಸಿಬ್ಬಂದಿಯೂ ಅವರಿಗೆ ನೆರವಾಗುತ್ತಿದ್ದಾರೆ. ಇಲಾಖೆಗೆ ಏರ್ ಬ್ಲೋವರ್ ಸಹಿತ ಕೆಲವು ಉಪಕರಣಗಳ ಅವಶ್ಯಕತೆ ಇದೆ. ಇರುವ ಅನುದಾನದಲ್ಲಿ ಕೆಲವನ್ನು ಖರೀದಿಸಿದ್ದೇವೆ. ಉಳಿದ ಉಪಕರಣಗಳ ಖರೀದಿಗೆ ಹಣ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎನ್ನುತ್ತಾರೆ ಕಾವೇರಿ ವನ್ಯಧಾಮದ ಕೊಳ್ಳೇಗಾಲ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ರಮೇಶ್‌.

ವಿವಿಧೆಡೆ ಹಬ್ಬಿದ ಕಾಳ್ಗಿಚ್ಚು
ಕಾವೇರಿ ವನ್ಯಜೀವಿ ಧಾಮದ ವಿವಿಧೆಡೆ ಕಾಳ್ಗಿಚ್ಚು ಹಬ್ಬಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿದೆ.

ಕನಕಪುರ ತಾಲ್ಲೂಕಿನ ಮುಗ್ಗೂರು ಅರಣ್ಯ ಪ್ರದೇಶದ ಚವರಕಲ್‌ ಬೆಟ್ಟ, ಹಲಗೂರು ವಲಯ ವ್ಯಾಪ್ತಿಯ ಬಸವನಬೆಟ್ಟ ಮೊದಲಾದ ಕಡೆ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ‘ಸದ್ಯ ಪರಿಸ್ಥಿತಿಯು ನಿಯಂತ್ರಣದಲ್ಲಿ ಇದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ಕಾರ್ಯಾಚರಣೆಯು ಮುಂದುವರಿದಿದೆ’ ಎಂದು ಡಿಸಿಎಫ್‌ ರಮೇಶ್‌ ತಿಳಿಸಿದರು.

**

ಒಂದು ವಲಯಕ್ಕೆ 40–50 ವಾಚರ್‌ಗಳ ಅಗತ್ಯ ಇದೆ. ಅವರ ನೇಮಕ ಮತ್ತು ಉಪಕರಣ ಖರೀದಿಗೆ ಹಣ ನೀಡುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ
- ಡಾ. ಎಸ್. ರಮೇಶ್‌ , ಡಿಸಿಎಫ್‌, ಕಾವೇರಿ ವನ್ಯಜೀವಿ ಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT