ಬುಧವಾರ, ಅಕ್ಟೋಬರ್ 16, 2019
28 °C
ಭಾಗಮಂಡಲದ ಸಂಗಮದಲ್ಲಿ ಮಹಾ ಆರತಿ

21ರಿಂದ ಕಾವೇರಿ ನದಿ ಜಾಗೃತಿ ಯಾತ್ರೆ

Published:
Updated:

ಮಡಿಕೇರಿ: ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಹಯೋಗದಲ್ಲಿ 9ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆಯನ್ನು ಅ.21ರಿಂದ ನ. 8ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನ ಸಮಿತಿ ಸಂಚಾಲಕ ಎಂ.ಎನ್‌.ಚಂದ್ರಮೋಹನ್‌ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 21ರಂದು ತಲಕಾವೇರಿ ಕ್ಷೇತ್ರದಲ್ಲಿ ಬೆಳಿಗ್ಗೆ 8.30ಕ್ಕೆ ಪೂಜಾ ಕಾರ್ಯಕ್ರಮ ನಡೆಯಲಿದೆ. 9ಕ್ಕೆ ಯಾತ್ರೆಗೆ ಚಾಲನೆ ಸಿಗಲಿದೆ. ಬೆಳಿಗ್ಗೆ 10.30ಕ್ಕೆ ಭಾಗಮಂಡಲ ನದಿ ಸಂಗಮದಲ್ಲಿ ಮಹಾಆರತಿ ನಡೆಯಲಿದೆ ಎಂದು ಮಾಹಿತಿ ನೀಡಿದರು. 

ಯಾತ್ರೆಗೆ ನದಿ ಜಾಗೃತಿ ಯಾತ್ರೆ ಸಮಿತಿ ಸಂಯೋಜಕ ಶ್ರೀರಂಗಪಟ್ಟಣ ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರದ ಡಾ.ಭಾನು ಪ್ರಕಾಶ್ ಶರ್ಮ, ಅಖಿಲ ಭಾರತ ಸನ್ಯಾಸಿ ಸಂಘದ ರಮಾನಂದ ಸ್ವಾಮೀಜಿ, ಶ್ರೀರಂಗಪಟ್ಟಣದ ಗಣೇಶ್ ಸ್ವರೂಪನಂದಾ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನ.8ರಂದು ತಮಿಳುನಾಡಿನ ಪೊಂಪ್‌ಹಾರ್‌ನಲ್ಲಿ ತೀರ್ಥ ವಿಸರ್ಜನೆ ಮಾಡುವುದರೊಂದಿಗೆ ಆಂದೋಲನ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ಕಾವೇರಿ ರಿವರ್ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೋಣಪ್ಪ ಮಾತನಾಡಿ, 21ರಂದು ಬೆಳಿಗ್ಗೆ 8.30ಕ್ಕೆ ಭಾಗಮಂಡಲದಿಂದ ಹೊರಡುವ ರಥಯಾತ್ರೆ ಭಾಗಮಂಡಲ–ಬಲಮುರಿ–ಮೂರ್ನಾಡು– ಕಾವಡಿ, ಅಮ್ಮತ್ತಿ–ಸಿದ್ದಾಪುರ–ಮಾರ್ಗವಾಗಿ ನೆಲ್ಲಿಹುದಿಕೇರಿ ಸಾಗಲಿದೆ. ನಂತರ, ದುಬಾರೆ ಮಾರ್ಗವಾಗಿ ಕುಶಾಲನಗರಕ್ಕೆ ಆಗಮಿಸಿ ಅಂದು ಸಂಜೆ 5.30ಕ್ಕೆ ನದಿಗೆ ಮಹಾ ಆರತಿ ನಡೆಯಲಿದ್ದು, ರಾತ್ರಿ ಕಣಿವೆ ರಾಮಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

22ರಂದು ಕಣಿವೆ ಮಾರ್ಗವಾಗಿ ಹೆಬ್ಬಾಲೆ, ಶಿರಂಗಾಲ, ಕೊಣನೂರು ಮಾರ್ಗವಾಗಿ ಸಾಗಿ ರಾಮನಾಥಪುರದಲ್ಲಿ ಕಾವೇರಿಗೆ ಮಹಾ ಆರತಿ ನಡೆಯಲಿದೆ ಎಂದು ವಿವರಿಸಿದರು.

ನಂತರ ಕೆ.ಆರ್‌. ನಗರ ಮಾರ್ಗವಾಗಿ ಬೆಳಗೊಳ ಮೂಲಕ ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಬ ದೇವಾಲಯದಲ್ಲಿ ಮಹಾ ಆರತಿ, ಕನಕಪುರ ರವಿಶಂಕರ ಗುರೂಜಿ ಆರ್ಟ್‌ ಆಫ್‌ ಲಿವಿಂಗ್ ಆಶ್ರಮದಲ್ಲಿ ವಾಸ್ತವ್ಯ, 23ರಂದು ಬೆಳಿಗ್ಗೆ ರಥಯಾತ್ರೆ ಹೊಸೂರು–ಹೊಗೇನಕಲ್ ಮೂಲಕ ತಮಿಳುನಾಡಿಗೆ ತಲುಪಲಿದೆ ಎಂದು ತಿಳಿಸಿದರು.

‌‌‌ಪತ್ರಿಕಾಗೋಷ್ಟಿಯಲ್ಲಿ ನದಿ ಜಾಗೃತಿ ಸಮಿತಿ ಅಧ್ಯಕ್ಷ ಡಿ.ಆರ್‌.ಸೋಮಶೇಖರ್‌, ಟ್ರಸ್ಟಿ ಕೆ.ಆರ್.ಶಿವನಂದನ್‌, ಪನ್ಯಾಡಿ ಅಕ್ಷಯ್‌ ಹಾಜರಿದ್ದರು. 

Post Comments (+)