ಮಂಗಳವಾರ, ಮಾರ್ಚ್ 2, 2021
31 °C
ಎಸ್‌ಬಿಐಗೆ ₹ 98 ಕೋಟಿ ವಂಚಿಸಿದ ಪ್ರಕರಣ

‘ಏಗನ್‌ ಬ್ಯಾಟರೀಸ್‌’ ಮೇಲೆ ಸಿಬಿಐ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ₹ 98 ಕೋಟಿ ವಂಚನೆ ಮಾಡಿರುವ ದೂರಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ‘ಏಗನ್‌ ಬ್ಯಾಟರೀಸ್‌ ಲಿಮಿಟೆಡ್‌’ ಕಂಪನಿ ಕಚೇರಿ ಮತ್ತು ಅವುಗಳ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿದರು.

ಬೆಂಗಳೂರು, ಕೋಲಾರ, ತಮಿಳುನಾಡಿನ ಪಳನಿ ಹಾಗೂ ತಿರುಪುರ್‌ಗಳಲ್ಲಿ ಏಗನ್‌ ಬ್ಯಾಟರೀಸ್‌ಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಅರುಣ್‌ ಕುಮಾರ್‌ ತ್ಯಾಗರಾಜನ್‌, ಭದ್ರಾದೇವಿ ತ್ಯಾಗರಾಜನ್‌, ರಾಜ್‌ಕುಮಾರ್‌ ತ್ಯಾಗರಾಜನ್‌, ಚಿತ್ರ ರಾಜ್‌ಕುಮಾರ್‌ ಮತ್ತಿತರರು ಕಂಪನಿ ನಿರ್ದೇಶಕರಾಗಿದ್ದಾರೆ. 

2010ರಲ್ಲಿ ಆರಂಭವಾಗಿರುವ ಏಗನ್‌ ಬ್ಯಾಟರೀಸ್‌ ಕೈಗಾರಿಕಾ ಬ್ಯಾಟರಿಗಳು ಹಾಗೂ ಆಟೊಮೊಟಿವ್‌ ಬ್ಯಾಟರಿಗಳನ್ನು ತಯಾರಿಸುತ್ತಿದೆ. ಇಲ್ಲಿನ ಜಯನಗರ 9ನೇ ಕ್ರಾಸ್‌, 2ನೇ ಬ್ಲಾಕ್‌ನಲ್ಲಿ ನೋಂದಣಿ ಕಚೇರಿ ಹೊಂದಿರುವ ಈ ಕಂಪನಿ ಮೂರು ಎಕರೆ ಪ್ರದೇಶದಲ್ಲಿ ಕೈಗಾರಿಕೆ ಹೊಂದಿದೆ. ಬ್ಯಾಂಕ್‌ ಅಧಿಕಾರಿಗಳು ನೀಡಿದ್ದ ದೂರು ಆಧರಿಸಿ ಕಂಪನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿ, ದಾಖಲೆ ವಶ‍‍ಕ್ಕೆ ಪಡೆಯಲಾಗಿದೆ.

ಬ್ಯಾಂಕ್‌ಗಳಿಗೆ ₹ 640 ಕೋಟಿ ವಂಚನೆ
ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿ ಬ್ಯಾಂಕ್‌ಗಳಿಗೆ ಸುಮಾರು ₹ 640 ಕೋಟಿ ವಂಚನೆ ಮಾಡಿರುವ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ.

‘ದೇಶದ 12 ರಾಜ್ಯಗಳ, 18 ನಗರಗಳ 50 ಸ್ಥಳಗಳಲ್ಲಿ ಏಕಕಾಲಕ್ಕೆ ಮಂಗಳವಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಹೊಂದಿರುವ ಕಂಪನಿಗಳ ಪ್ರವರ್ತಕರು ಹಾಗೂ ನಿರ್ದೇಶಕರಿಗೆ ಸೇರಿದ ಮನೆ, ಕಚೇರಿಗಳಲ್ಲಿ ಶೋಧ ನಡೆದಿದೆ. 14 ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ಜತಿನ್‌ ಮೆಹ್ತಾ ಅವರಿಗೆ ಸೇರಿದ ಮುಂಬೈಯ ವಿನ್‌ಸಮ್‌ ಗ್ರೂಪ್‌, ದೆಹಲಿಯ ಎಸ್‌ಎಲ್‌ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ ಲಿ., ಪಂಜಾಬ್‌ನ ಇಂಟರ್‌ನ್ಯಾಷನಲ್‌ ಮೆಗಾ ಫುಡ್‌ ಪಾರ್ಕ್‌ ಲಿ. ಮತ್ತು ಸುಪ್ರೀಂ ಟೆಕ್ಸ್‌ ಮಾರ್ಟ್‌ ಮುಂತಾದ ಸಂಸ್ಥೆಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು