ಸೋಮವಾರ, ಡಿಸೆಂಬರ್ 9, 2019
20 °C
ಅಧಿಕಾರಿ ಆತ್ಮಹತ್ಯೆ ಪ್ರಕರಣ ಕುರಿತು ತನಿಖೆ ನಡೆಸಿದ್ದ ಸಿಬಿಐ ವರದಿಯಲ್ಲಿ ಉಲ್ಲೇಖ

ಗಣಪತಿಗೆ ನೆರವಾಗಿದ್ದ ಜಾರ್ಜ್‌!

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ. ಗಣ‍ಪತಿ ಆತ್ಮಹತ್ಯೆಗೆ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ಅವರ ಕಿರುಕುಳ ಕಾರಣವಲ್ಲ ಎಂದು ಕ್ಲೀನ್‌ ಚಿಟ್‌ ನೀಡಿರುವ ಸಿಬಿಐ, ಬದಲಿಗೆ ಪೊಲೀಸ್‌ ಅಧಿಕಾರಿಗೆ ಮಾಜಿ ಸಚಿವರು ಒಂದೆರಡು ಸಂದರ್ಭದಲ್ಲಿ ನೆರವು ನೀಡಿದ್ದರು ಎಂದು ಹೇಳಿದೆ.

ಗಣ‍ಪತಿ ಆತ್ಮಹತ್ಯೆ ಕುರಿತು ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳ ತಂಡ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾ
ಲಯಕ್ಕೆ ಅಂತಿಮ ವರದಿ ಸಲ್ಲಿಸಿದೆ. ಗಣಪತಿ 2008ರಲ್ಲಿ ಮಂಗಳೂರಿನಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದಾಗ ನಡೆದಿದ್ದ ಕುಲಶೇಖರ ಚರ್ಚ್‌ ದಾಳಿ ಸಂಬಂಧ ಕ್ರೈಸ್ತ ಸಮುದಾಯ ಹಾಗೂ ಅವುಗಳ ಮುಖಂಡರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. 2011ರಲ್ಲಿ ರಾಜ್ಯ ಸರ್ಕಾರ ಈ ಪ್ರಕರಣಗಳನ್ನು ಹಿಂದಕ್ಕೆ ಪಡೆದಿತ್ತು ಎಂದು ತಿಳಿಸಿದೆ.

ಗೃಹ ಸಚಿವರಾಗಿದ್ದಾಗ ಮಂಗಳೂರಿಗೆ ಬಂದಿದ್ದ ಜಾರ್ಜ್‌ ಅವರಿಗೆ ಕ್ರೈಸ್ತ ಸಂಘಟನೆಗಳು ಗಣಪತಿ ವಿರುದ್ಧ ದೂರು ನೀಡಿದ್ದವು. ಇದನ್ನೇ ಕಾರಣವಾಗಿಟ್ಟುಕೊಂಡು ಅವರು ದ್ವೇಷ ಸಾಧಿಸುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ಭಾವಿಸಿದ್ದನ್ನು ಒಪ್ಪ
ತಕ್ಕದ್ದಲ್ಲ. ಅಲ್ಲದೆ, ಈ ಪ್ರಕರಣ 2011ರಲ್ಲೇ ಮುಕ್ತಾಯಗೊಂಡಿತ್ತು. ಐದು ವರ್ಷಗಳ ಬಳಿಕ ಜಾರ್ಜ್‌ ಮೇಲೆ ಆರೋಪ ಮಾಡಿರುವುದಕ್ಕೆ ಯಾವುದೇ ಮಹತ್ವವಿಲ್ಲ ಎಂದೂ ಸಿಬಿಐ ಸ್ಪಷ್ಟಪಡಿಸಿದೆ.

ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಜಾರ್ಜ್‌, ಐ‍‍ಪಿಎಸ್‌ ಅಧಿಕಾರಿಗಳಾದ ಪ್ರಣಬ್‌ ಮೊಹಂತಿ ಹಾಗೂ ಎ.ಎಂ. ಪ್ರಸಾದ್‌ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ ಮೂವರನ್ನು ವಿಚಾರಣೆಗೆ ಒಳಪಡಿಸಿತ್ತು.

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ ಆವರಣದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ನಡೆದಿದ್ದ ಘರ್ಷಣೆ ಕುರಿತೂ ತನಿಖೆ ನಡೆಸಿದ್ದ ಸಿಬಿಐ, ಗಣಪತಿ (ಈ ಪ್ರಕರಣದಲ್ಲಿ ಆರೋಪಿ) ಅವರನ್ನು ವಿಚಾರಣೆಗೆ ಒಳಪಡಿಸಲು 2015ರಲ್ಲಿ ರಾಜ್ಯ ಸರ್ಕಾರದ ಅನುಮತಿ ಕೇಳಿತ್ತು. ಜಾರ್ಜ್‌ ಅನುಮತಿ ನಿರಾಕರಿಸಿದ್ದರು.

ಅಲ್ಲದೆ, ರಾಜಗೋಪಾಲನಗರ ಪೊಲೀಸ್‌ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಪ್ರಕರಣವೊಂದರಲ್ಲಿ ₹ 1.5 ಕೋಟಿ ನಾಪತ್ತೆಯಾಗಿತ್ತು. ಆದರೆ, ಗಣಪತಿ ಉದ್ದೇಶ‍ಪೂರ್ವಕವಾಗಿ ₹ 24 ಸಾವಿರ ನಾಪತ್ತೆ ಎಂದು ದೂರು ದಾಖಲಿಸಿದ್ದರು. ಹಿರಿಯ ಅಧಿಕಾರಿಗಳ ಗಮನಕ್ಕೂ ಪ್ರಕರಣವನ್ನು ತಂದಿರಲಿಲ್ಲ. ಹೀಗಾಗಿ, ಕರ್ತವ್ಯಲೋಪದ ಆರೋಪದ ಮೇಲೆ ಅವರು ಅಮಾನತುಗೊಂಡಿದ್ದರು.

ಆನಂತರ, ಗಣಪತಿ, ಜಾರ್ಜ್‌ ಅವರನ್ನು ಭೇಟಿ ಆಗಿದ್ದರು. ಪೊಲೀಸ್‌ ಅಧಿಕಾರಿ ವಿಷಯದಲ್ಲಿ ಉದಾರ ಧೋರಣೆ ತಳೆದು ಗೃಹ ಸಚಿವರು ಅಮಾನತು ರದ್ದುಪಡಿಸಿದ್ದರು. ಗಣಪತಿ ವಿರುದ್ಧ ಜಾರ್ಜ್‌ ದ್ವೇಷದ ಭಾವನೆ ಹೊಂದಿರಲಿಲ್ಲ ಎಂಬುದಕ್ಕೆ ಇವೆರಡು ಉದಾಹರಣಗಳೇ ಸಾಕು ಎಂದು ಸಿಬಿಐ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಇದಲ್ಲದೆ, ಬೆಂಗಳೂರು ಅಪರಾಧ ವಿಭಾಗದ ಐ.ಜಿ ಪ್ರಣಬ್‌ ಮೊಹಂತಿ ಹಾಗೂ ಮಂಗಳೂರು ಐ.ಜಿ ಆಗಿದ್ದ ಎ.ಎಂ. ಪ್ರಸಾದ್‌ ಅವರ ವಿರುದ್ಧ ಗಣ‍‍ಪತಿ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದೂ ಸಿಬಿಐ ಪ್ರತಿಪಾದಿಸಿದೆ.

 ‘ಮಾನಸಿಕ ಖಿನ್ನತೆಗೆ ಒಳಗಾಗಿದ್ದರು’

ಕೌಟುಂಬಿಕ ಕಾರಣಗಳಿಂದಾಗಿ ಗಣಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 2016ರ ಜೂನ್‌ 13ರಂದು ತಮ್ಮ ಸಹೋದರಿಗೆ ಕಳುಹಿಸಿದ್ದ ಎಸ್‌ಎಂಎಸ್‌ ಸಂದೇಶದಲ್ಲಿ, ’ನನಗೆ ಮತ್ತು ಮಕ್ಕಳಿಗೆ ಕಿರುಕುಳ ನೀಡುವ ವ್ಯಕ್ತಿಯ ಜೊತೆ ಬದುಕಲು ಸಾಧ್ಯವಿಲ್ಲ, ವಿಚ್ಛೇದನ ಬೇಕು’ ಎಂದು ನಿನ್ನೆ ಪಾವನ (ಗಣಪತಿ ಪತ್ನಿ) ಎಸ್‌ಎಂಎಸ್‌ ಕಳುಹಿಸಿದ್ದಾರೆ’ ಎಂದಿದ್ದರು.

ಈ ಸಂದೇಶ ಬಂದ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸಿಬಿಐ ವರದಿ ಹೇಳಿದೆ. ಇದು ಗಣಪತಿ ಹಾಗೂ ಅವರ ಪತ್ನಿ ನಡುವಿನ ಸಂಬಂಧ ಸೌಹಾರ್ದವಾಗಿರಲಿಲ್ಲ. ಇದರಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬ ತೀರ್ಮಾನಕ್ಕೆ ಬರಲು ಇದೊಂದೇ ನಿದರ್ಶನ ಸಾಕು ಎಂದೂ ವರದಿ ತಿಳಿಸಿದೆ.

ಮಾನಸಿಕ ಖಿನ್ನತೆಗಾಗಿ ಪೊಲೀಸ್‌ ಅಧಿಕಾರಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದೂ ವರದಿ ವಿವರಿಸಿದೆ.

 ಕ್ಷಮೆಗೆ ಆಗ್ರಹ

ಶಾಸಕ ಕೆ.ಜೆ.ಜಾರ್ಜ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಈ ಪ್ರಕರಣದ ಬಗ್ಗೆ ತೀವ್ರ ಗದ್ದಲವೆಬ್ಬಿಸಿದ್ದ ಬಿಜೆಪಿ ಮುಖಂಡರು ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು