ಬಾಬಾ ಅಣುಶಕ್ತಿ ಕೇಂದ್ರದಲ್ಲಿ ಭ್ರಷ್ಟಾಚಾರ

7
ವಿಚಾರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಬಾಬಾ ಅಣುಶಕ್ತಿ ಕೇಂದ್ರದಲ್ಲಿ ಭ್ರಷ್ಟಾಚಾರ

Published:
Updated:
Deccan Herald

ಬೆಂಗಳೂರು: ಮೈಸೂರಿನ ಮೆಸರ್ಸ್‌ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರಕ್ಕೆ (ಬಾರ್ಕ್‌) ಔಷಧಿ ಪೂರೈಸುವ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಹೊತ್ತಿರುವ ಮುಂಬೈನ ‘ಸನೋಫಿ ಇಂಡಿಯಾ ಲಿಮಿಟೆಡ್‌ ಕಂಪನಿ’ ವಿರುದ್ಧದ ಸಿಬಿಐ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ಸನೋಫಿ ಕಂಪನಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‍‍ಎಫ್‌ಐಆರ್‌ ರದ್ದುಗೊಳಿಸಬೇಕು ಹಾಗೂ ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ.

ಎಫ್‌ಐಆರ್‌ನಲ್ಲಿ ಹೇಳಿರುವುದೇನು?: ‘ಟೆಂಡರ್‌ ನೀಡುವಾಗ ಎಲ್‌–1 ನಿಯಮ ಕಡೆಗಣಿಸಲಾಗಿದೆ. ಸಂಗ್ರಹಣೆ ಮತ್ತು ನಿರ್ವಹಣೆ ಕೈಪಿಡಿ ಹಾಗೂ ಸಾಮಾನ್ಯ ಆರ್ಥಿಕ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗಿದೆ’ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಮೂರು ವರ್ಷ: ‘ಇವೆಲ್ಲಾ ಕ್ರಿಮಿನಲ್‌ ಸಂಚುಗಳು‘ ಎಂದು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ 2015ರ ಜುಲೈ 31ರಂದು ಅರ್ಜಿದಾರ ಕಂಪನಿಯೂ ಸೇರಿದಂತೆ ಬಾರ್ಕ್‌ನ ಡಾ.ಪಿ.ಆನಂದ ವೈಜ್ಞಾನಿಕ ಅಧಿಕಾರಿ (ವೈದ್ಯಕೀಯ ವಿಭಾಗ), ಮೆಸರ್ಸ್‌ ಅಪೊಲೊ ಆಸ್ಪತ್ರೆ ಎಂಟರ್‌ ಪ್ರೈಸಸ್‌, ಅಹಮದಾಬಾದ್‌ನ ಮೆಸರ್ಸ್‌ ಅಲೆಂಬಿಕ್‌ ಫಾರ್ಮಾಸ್ಯುಟಿಕಲ್‌ ಕಂಪನಿ, ಬಾರ್ಕ್‌ನ ಅಧಿಕಾರಿಗಳು ಹಾಗೂ ಇತರೆ ಕಂಪನಿಗಳ ವಿರುದ್ಧ ದೂರು ದಾಖಲಿಸಿದೆ.

ಈ ಆರೋಪಗಳ ಅನುಸಾರ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

**

‘ಕಡಿಮೆ ದರದ ಟೆಂಡರ್‌ ಕಡೆಗಣನೆ’

‘ಡಾ.ಆನಂದ್‌ ಅವರು ಬಾರ್ಕ್‌ಗೆ ಪೂರೈಸಲಾ‌ಗುವ ಅಪರೂಪದ ಪರಿಕರಗಳ ಪರಿಶೀಲನಾ ತಂಡದ ಮುಖ್ಯಸ್ಥರು. 2011ರಿಂದ 2015ರವರೆಗೆ ಕರೆಯಲಾದ ಟೆಂಡರ್‌ ಪ್ರಕ್ರಿಯೆಯಲ್ಲಿ ಅವರು ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ’ ಎಂಬುದು ಸಿಬಿಐ ಆರೋಪ.

‘ಕಡಿಮೆ ದರಕ್ಕೆ ಟೆಂಡರ್‌ ಸಲ್ಲಿಸಿದ ಕಂಪನಿಗಳನ್ನು ಕಡೆಗಣಿಸಲಾಗಿದೆ. ಜಾಸ್ತಿ ಬಿಡ್‌ ಮಾಡಿದ ಕಂಪನಿಗಳಿಗೆ ಗುತ್ತಿಗೆ ನೀಡದೆ ಡಾ.ಆನಂದ್‌ ₹ 3 ಲಕ್ಷಕ್ಕೂ ಹೆಚ್ಚು ಹಣವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ. ಆದ್ದರಿಂದ ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುವು ಮಾಡಿಕೊಡಬೇಕು’ ಎಂಬುದು ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರ ಮನವಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !