ಬುಧವಾರ, ನವೆಂಬರ್ 20, 2019
22 °C
ನಿಂಬಾಳ್ಳರ್‌, ಹಿಲೋರಿ, ಬಿ.ಎಂ. ವಿಜಯಶಂಕರ್‌, ಎಲ್‌.ಸಿ ನಾಗರಾಜ್‌ ಮನೆಗಳ ಶೋಧ

ಐಎಂಎ: 9 ಅಧಿಕಾರಿಗಳ ಮನೆಯಲ್ಲಿ ಸಿಬಿಐ ಶೋಧ

Published:
Updated:
prajavani

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಗೆ ‘ಕ್ಲೀನ್‌ಚಿಟ್‌’ ನೀಡಿ ಭಾರಿ ಲಂಚ ಪಡೆದಿರುವ ಆರೋಪಕ್ಕೆ ಒಳಗಾಗಿರುವ ಐಪಿಎಸ್‌ ಅಧಿಕಾರಿಗಳಾದ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲೋರಿ, ಐಎಎಸ್‌ ಅಧಿಕಾರಿ ಬಿ.ಎಂ. ವಿಜಯ ಶಂಕರ್‌ ಮತ್ತು ಕೆಎಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜ್‌ ಸೇರಿದಂತೆ ಒಂಬತ್ತು ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿದೆ.

ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿರುವ ರಾಜ್ಯದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಈಚಿನ ವರ್ಷಗಳಲ್ಲಿ ನಡೆದ ಅತ್ಯಂತ ದೊಡ್ಡ ಸಿಬಿಐ ದಾಳಿ ಇದಾಗಿದೆ.

ಬೆಂಗಳೂರು, ರಾಮನಗರ, ಮಂಡ್ಯ, ಬೆಳಗಾವಿ ಮತ್ತು ಉತ್ತರ ಪ್ರದೇಶದ ಮೀರಟ್‌ ಸೇರಿದಂತೆ 15 ಕಡೆ ಸಿಬಿಐ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ಡಿಜಿಟಲ್‌ ಪುರಾವೆ, ಆಸ್ತಿಪಾಸ್ತಿಗೆ ಸಂಬಂಧಿಸಿದ ಕಾಗದಪತ್ರ ಸೇರಿದಂತೆ ಮಹತ್ವದ ದಾಖಲೆಗಳು ಅಧಿಕಾರಿಗಳಿಗೆ ಸಿಕ್ಕಿವೆ.

‘ಲಕ್ಷಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಐಎಂಎಗೆ ಈ ಅಧಿಕಾರಿಗಳು ಅನುಕೂಲಕರವಾದ ವರದಿ ನೀಡಿ, ವಂಚನೆ ಮುಂದುವರಿಸಲು ಸಹಕರಿಸಿದ್ದರು’ ಎಂದು ಸಿಬಿಐ ಆರೋಪಿಸಿದೆ.

ಈ ವಂಚನೆ ಬಗ್ಗೆ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ (ಎಸ್‌ಎಲ್‌ಸಿಸಿ)  ಪದೇ ಪದೇ ಎಚ್ಚರಿಸಿದ್ದರು. ವಿಚಾರಣೆ ನಡೆಸುವಂತೆಯೂ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದಿದ್ದರು. ಪತ್ರದ ಆಧಾರದ ಮೇಲೆ ಕಾಟಾಚಾರಕ್ಕೆ ಎಂಬಂತೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಕಂಪನಿಗೆ ಲಾಭ ಮಾಡಿಕೊಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂದೂ ಹೇಳಿದೆ. 

ಐಎಂಎ ಖರ್ಚುವೆಚ್ಚದ ದಾಖಲೆಗಳನ್ನು ‍ಪರಿಶೀಲಿಸಿದಾಗ ಅನೇಕ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಲಂಚ ಕೊಟ್ಟಿರುವುದು ಕಂಡುಬಂದಿದೆ. ಕಂಪನಿ ನಿರ್ದೇಶಕರು ಲಂಚದ ಹಣ ಪಾವತಿಸಿದ್ದಾರೆ. ಈ ವಂಚನೆ ಹಿಂದಿನ ಪಿತೂರಿಯನ್ನು ಭೇದಿಸುವ ಯತ್ನವಾಗಿ ದಾಳಿ ನಡೆಸಲಾಗಿದೆ. ‘ರಾಜ್ಯದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಐಎಂಎಗೆ ಲಾಭ ಮಾಡಿಕೊಟ್ಟಿದ್ದಾರೆ. ವಂಚನೆ ಗಮನಕ್ಕೆ ಬಂದರೂ ನಿಷ್ಕ್ರಿಯರಾಗಿದ್ದಾರೆ’ ಎಂಬ ಸಂಗತಿ ತನಿಖೆಯಿಂದ ಬಯಲಿಗೆ ಬಂದಿದೆ.

ಐಎಂಎ ವಂಚನೆ ಕುರಿತು ರಾಜ್ಯ ಸರ್ಕಾರ ಆಗಸ್ಟ್‌ನಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಆಗಸ್ಟ್‌ 30ರಂದು ಮನ್ಸೂರ್‌ ಖಾನ್‌ ಒಡೆತನದ ಸಮೂಹ ಕಂಪನಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಈ ಪ್ರಕರಣದ ತನಿಖೆಗೆ ಲೆಕ್ಕ ಪರಿಶೋಧಕರು, ಕಂಪ್ಯೂಟರ್‌ , ಫೊರೆನ್ಸಿಕ್‌ ತಜ್ಞರು, ಬ್ಯಾಂಕಿಂಗ್‌ ಒಳಗೊಂಡಂತೆ ವಿವಿಧ ಕ್ಷೇತ್ರಗಳ ಪರಿಣಿತರ ತಂಡ ಸಹಕರಿಸುತ್ತಿವೆ. ಈಗಾಗಲೇ ಐಎಂಎ ವಿರುದ್ಧ ಸಿಬಿಐ ಎರಡು ದೋಷಾರೋಪ ಪಟ್ಟಿ ಸಲ್ಲಿಸಿದೆ.

ಐಎಂಎ ಮಾಲೀಕ ಮನ್ಸೂರ್‌ ಖಾನ್‌ ಅವರಿಂದ ಲಂಚ ಪಡೆದಿದ್ದಾರೆ ಎನ್ನಲಾದ ಅಧಿಕಾರಿಗಳ ಬಗ್ಗೆ ಪ್ರಜಾವಾಣಿ ವರದಿಗಳನ್ನು ಪ್ರಕಟಿಸಿತ್ತು. ಎಸ್‌ಎಲ್‌ಸಿಸಿ ಸಭೆಯ ನಡಾವಳಿ ಕುರಿತೂ ವರದಿಗಳಲ್ಲಿ ಪ್ರಸ್ತಾಪಿಸಿತ್ತು.

ಅಕ್ರಮದ ವಿರುದ್ಧ ಎಚ್ಚರಿಸಿದ್ದ ಅಧಿಕಾರಿ!
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬ್ಯಾಂಕಿಂಗೇತರ ಹಣಕಾಸು ವಿಭಾಗದ (ಡಿಎನ್‌ಬಿಎಸ್‌) ಪ್ರಧಾನ ವ್ಯವಸ್ಥಾಪಕಿ ಕೆ.ಎಸ್‌. ಜ್ಯೋತ್ಸ್ನಾ ಐಎಂಎ ಅಕ್ರಮಗಳ ವಿರುದ್ಧ ಮೊದಲಿಗೆ ದನಿ ಎತ್ತಿದರು. ಕೇಂದ್ರ ಬ್ಯಾಂಕ್‌ನ ಮಾರುಕಟ್ಟೆ ಗುಪ್ತಚರ ವಿಭಾಗದ ವರದಿಯನ್ನು ಅವರು ಉಲ್ಲೇಖಿಸಿದ್ದರು.

ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯುತ್ತದೆ. ಇದರಲ್ಲಿ ಪೊಲೀಸ್‌, ಕಂದಾಯ, ಹಣಕಾಸು, ಸಹಕಾರ, ಆರ್‌ಒಸಿ, ಸೆಬಿ, ಐಟಿ, ಇಡಿ ಸೇರಿದಂತೆ ಅನೇಕ ಇಲಾಖೆಗಳ ಪ್ರತಿನಿಧಿಗಳು ಇರುತ್ತಾರೆ. 2016ರ ಆರಂಭದಿಂದ ಕಳೆದ ಜೂನ್‌ವರೆಗೆ ನಡೆದ ಎಸ್‌ಎಲ್‌ಸಿಸಿ ಸಭೆಗಳಲ್ಲಿ ಐಎಂಎ ವಂಚನೆ ಕುರಿತು ಈ ಮಹಿಳಾ ಅಧಿಕಾರಿ ಪ್ರಸ್ತಾಪಿಸಿದ್ದರು.

ಆದರೆ, ಅವರ ಎಚ್ಚರಿಕೆಯನ್ನು ನಿರಂತರವಾಗಿ ಕಡೆಗಣಿಸಲಾಯಿತು. ಆ ಸಮಯದಲ್ಲೇ ಅಧಿಕಾರಿಗಳು ಜಾಗೃತರಾಗಿದ್ದರೆ ಈ ವಂಚನೆ ತಡೆಯಲು ಸಾಧ್ಯವಿತ್ತು ಎಂದು ಮೂಲಗಳು ತಿಳಿಸಿವೆ.

ಸಸ್ಪೆಂಡ್‌ ಆದ ಅಧಿಕಾರಿಗಳು
ಐಎಂಎ ಪ್ರಕರಣ ಕುರಿತು ಕೆಪಿಐಡಿ ಕಾಯ್ದೆಯಡಿ ಎಲ್‌.ಸಿ ನಾಗರಾಜ್‌ ವಿಚಾರಣೆ ನಡೆಸಿದ್ದರು. ಅವರು ಕೊಟ್ಟ ವರದಿಯನ್ನು ವಿಜಯ ಶಂಕರ್‌ ಅನುಮೋದಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರು, ಇವರಿಬ್ಬರ ಮನೆಗಳ ಮೇಲೆ ಸಿಬಿಐಗೆ ಮೊದಲು ತನಿಖೆ ನಡೆಸಿದ್ದ ಬಿ.ಆರ್‌. ರವಿಕಾಂತೇಗೌಡ ನೇತೃತ್ವದ ವಿಶೇಷ ತನಿಖಾ ದಳ ದಾಳಿ ನಡೆಸಿತ್ತು. ಆನಂತರ ಇಬ್ಬರನ್ನೂ ಬಂಧಿಸಲಾಗಿತ್ತು.

ನಾಗರಾಜ್‌ ಹಾಗೂ ವಿಜಶಂಕರ್‌ ಸದ್ಯ ಅಮಾನತಿನಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)