ಬುಧವಾರ, ಸೆಪ್ಟೆಂಬರ್ 18, 2019
25 °C

ಡಿಕೆಶಿ ತನಿಖೆ ಸಿಬಿಐ ಕೂಡಾ ನಡೆಸಲಿ: ಎಸ್.ಆರ್.ಹಿರೇಮಠ

Published:
Updated:

ಧಾರವಾಡ: ‘ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಶಾಸಕ ಡಿ.ಕೆ.ಶಿವಕುಮಾರ್ ಅವರ ಪ್ರಕರಣವನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಸಿಬಿಐ ಕೂಡಾ ತನಿಖೆ ನಡೆಸಿ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಯಬೇಕು’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ತಿಳಿಸಿದರು.

‘ಆದಾಯಕ್ಕೆ ಸರಿಯಾಗಿ ತೆರಿಗೆ ಕಟ್ಟದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ, ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಗಳು ತನಿಖೆ ಕೈಗೊಂಡಿವೆ. ಇದನ್ನು ನಮ್ಮ ಸಂಸ್ಥೆ ಸ್ವಾಗತಿಸುತ್ತದೆ. ಆದರೆ ಇದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ಈ ಕುರಿತೂ ತನಿಖೆ ನಡೆಯಬೇಕು. ಇದಕ್ಕೆ ಬೇಕಾದ ದಾಖಲೆಗಳನ್ನು ಕೊಡಲು ಸಿದ್ಧ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಿಂದ ಶಿವಕುಮಾರ್ ಅವರ ಭ್ರಷ್ಟಾಚಾರ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಲೇ ಇದ್ದೇವೆ. ಆದರೆ ನಮ್ಮ ಜೀವಿತಾವಧಿಯಲ್ಲೇ ಇವರ ಬಂಧನವನ್ನು ನೋಡುವಂತಾಗಿದ್ದು, ಪ್ರಮಾಣಿಕ ಅಧಿಕಾರಿಗಳಿಂದಾಗಿ ಸಾಧ್ಯವಾಗಿದೆ’ ಎಂದರು.

‘ಉತ್ಕೃಷ್ಟ ಗುಣಮಟ್ಟದ 10.8 ಲಕ್ಷ ಟನ್‌ ಅದಿರನ್ನು ಅಕ್ರಮವಾಗಿ ರಫ್ತು ಮಾಡಿ ಮೈಸೂರು ಮಿನರಲ್ಸ್‌ಗೆ ನಷ್ಟ ಉಂಟು ಮಾಡಿದ್ದಾರೆ. ₹3ಲಕ್ಷ ಕೋಟಿ ಮೊತ್ತದ ಗೃಹನಿರ್ಮಾಣ ಹಗರಣದಲ್ಲಿ ಶಿವಕುಮಾರ್‌ ಹೆಸರಿದೆ. ಡಿನೋಟಿಫಿಕೇಷನ್ ಹಗರಣದಲ್ಲಿ ಬೆನ್ನಿಗಾನಹಳ್ಳಿಯಲ್ಲಿ 4.20ಎಕರೆ ಜಾಗವನ್ನ ಶಿವಕುಮಾರ್‌ಗೆ ಬಿ.ಎಸ್.ಯಡಿಯೂರಪ್ಪ ನೆರವಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದರೆ, ಬಿ.ಎಸ್.ಯಡಿಯೂರಪ್ಪ, ಗಾಲಿ ಜನಾರ್ಧನ ರೆಡ್ಡಿ ಅವರಂತ ಸ್ವಪಕ್ಷದವರ ವಿರುದ್ಧವೂ ತನಿಖೆ ನಡೆಸಿ ಜೈಲಿಗೆ ಅಟ್ಟಲಿ’ ಎಂದು ಹಿರೇಮಠ ಒತ್ತಾಯಿಸಿದರು.

‘ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಮತ್ತು ಕುಟುಂಬದ ಇತರ ಸದಸ್ಯರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ. ಕನಕಪುರದ ಅನೇಕ ಗುಡ್ಡಗಳನ್ನು ಕರಗಿಸಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ಹಣ ಸಂಪಾದಿಸಿದ್ದಾರೆ. ಹಿಂದೆ ಗಾಲಿ ಜನಾರ್ಧನ ರೆಡ್ಡಿ ವಿಚಾರಣೆ ಸಂದರ್ಭದಲ್ಲಿ ಮೂರು ವರ್ಷ ಜೈಲಿನಲ್ಲಿದ್ದಂತೆ, ಶಿವಕುಮಾರ್ ಕೂಡಾ ಜೈಲಿನಲ್ಲಿದ್ದು ತನಿಖೆ ಎದುರಿಸಬೇಕು. ರಾಜಕೀಯವಾಗಿ ಶಿವಕುಮಾರ್ ಸಾಕಷ್ಟು ಚಾಣಾಕ್ಷರಿದ್ದು ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ತನಿಖಾ ಸಂಸ್ಥೆಗಳ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಬೇಕು’ ಎಂದು ಆಗ್ರಹಿಸಿದರು.

‘ಮತ್ತೊಂದು ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಹಾಗೂ ಇತರ 197 ಹುದ್ದೆಗಳ ನೇಮಕಾತಿಯಲ್ಲಿ ಲೋಪದೋಷಗಳಿರುವುದು ಹಾಗೂ ಈ ನೇಮಕಾತಿ ಅಸಿಂಧು ಎಂದು ವಿಧಿ ವಿಜ್ಞಾನ ಸಂಸ್ಥೆಯ ವರದಿ ಪ್ರಕಾರ ದೃಢಪಟ್ಟಿದೆ. ಇದನ್ನಾಧರಿಸಿ ಲೋಕಾಯುಕ್ತ ಸಂಸ್ಥೆಯಲ್ಲಿ ಸಲ್ಲಿಸಿದ ಆರೋಪಪಟ್ಟಿ ಅನ್ವಯ ನ್ಯಾಯಾಲಯ ಸರಕಾರಕ್ಕೆ ನೋಟಿಸ್ ಕೂಡ ನೀಡಿದೆ. ಈ ಪ್ರಕರಣದ ವಿಚಾರಣೆ ಇದೇ ಅಕ್ಟೋಬರ್ 10ರಂದು ನಡೆಯಲಿದೆ’ ಎಂದು ಹಿರೇಮಠ ತಿಳಿಸಿದರು.

Post Comments (+)