ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕೊಲೇಟ್‌, ಇ–ಸಿಗರೇಟ್‌ನಲ್ಲಿ ಡ್ರಗ್ಸ್ !

ಅಂತರರಾಷ್ಟ್ರೀಯ ಜಾಲ ಭೇದಿಸಿದ ಸಿಸಿಬಿ * ₹ 1 ಕೋಟಿ ಮೌಲ್ಯದ ಹೈಡ್ರೊ ಗಾಂಜಾ ಜಪ್ತಿ
Last Updated 29 ನವೆಂಬರ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಡಾರ್ಕ್‌ ನೆಟ್’ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಜಾಲದ ಭಾರತದ ರೂವಾರಿ ಅತಿಫ್ ಸಲೀಂ ಎಂಬಾತನನ್ನು ಬಂಧಿಸಿದ್ದಾರೆ.

‘ಕೋಲ್ಕತ್ತದ ಅತಿಫ್, ಕೆನಡಾದ ವಿಕ್ಕರ್ ಎಂಬಾತನ ಜೊತೆ ‘ಡಾರ್ಕ್‌ ನೆಟ್’ ಮೂಲಕ ಸಂಪರ್ಕವಿಟ್ಟುಕೊಂಡು ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಸಾಗಿಸಿ ಮದ್ಯವರ್ತಿಗಳ ಮೂಲಕ ಗ್ರಾಹಕರಿಗೆ ಮಾರಾಟ ಮಾಡಿಸುತ್ತಿದ್ದ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

‘ಡ್ರಗ್ಸ್ ಮಾರಾಟದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸಿಸಿಬಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಆತನಿಂದ ₹ 1 ಕೋಟಿ ಮೌಲ್ಯದ ಕೆನಡಾ ಹೈಡ್ರೊ ಗಾಂಜಾ ಹಾಗೂ ₹1 ಲಕ್ಷ ನಗದು ಜಪ್ತಿ ಮಾಡಿದೆ’ ಎಂದು ಅವರು ತಿಳಿಸಿದರು.

‘ಡ್ರಗ್ಸ್‌ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಈ ಜಾಲ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಈ ಜಾಲದಲ್ಲಿ ರಾಜ್ಯದ ಹಲವರು ಭಾಗಿಯಾಗಿರುವ ಅನುಮಾನವಿದೆ’ ಎಂದು ಹೇಳಿದರು.

ಆ್ಯಪ್‌ ಮೂಲಕ ಪರಿಚಯ: ‘ಜಾಲದ ಪ್ರಮುಖ ಕೇಂದ್ರ ಕೆನಡಾ. ಅಲ್ಲಿಯ ಕೆಲವರು, ಡಾರ್ಕ್‌ ನೆಟ್ ಮೂಲಕ ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳ ಮೂಲಕವೇ ಹಲವು ದೇಶಗಳಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಈ ಸಂಗತಿ ಆರೋಪಿಯ ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಚಾಕೊಲೇಟ್, ಹಶೀಶ್ ಆಯಿಲ್ ಹಾಗೂ ಇ–ಸಿಗರೇಟ್ ಟ್ಯೂಬ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಲಾಗುತ್ತಿತ್ತು. ಮಕ್ಕಳ ಹಾಗೂ ಯುವಜನತೆಯ ಬುದ್ಧಿಮತ್ತೆ ಹೆಚ್ಚಾಗುವುದೆಂದು ಹೇಳಿ ಅವೆಲ್ಲವನ್ನೂ ಮಾರಲಾಗುತ್ತಿತ್ತು. ಒಮ್ಮೆ ಖರೀದಿಸಿದವರು ಮತ್ತೆ ಮತ್ತೆ ಖರೀದಿ ಮಾಡುತ್ತಿದ್ದರು. ಖಾಸಗಿ ಕಂಪನಿ ಉದ್ಯೋಗಿಳು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಆರೋಪಿಗಳ ಬಳಿ ಡ್ರಗ್ಸ್ ಖರೀದಿ ಮಾಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ಎಲ್ಲೆಲ್ಲಿ ? ಎಷ್ಟು ? ಪ್ರಮಾಣದಲ್ಲಿ ಡ್ರಗ್ಸ್ ಬೇಕು ಎಂಬುದನ್ನು ತಿಳಿದುಕೊಳ್ಳುತ್ತಿದ್ದಆರೋಪಿ ಅತಿಫ್, ಕೆನಡಾದ ವಿಕ್ಕರ್‌ಗೆ ಮಾಹಿತಿ ನೀಡುತ್ತಿದ್ದ. ಆತ, ಕೆನಡಾದಿಂದ ಕೋರಿಯರ್ ಮೂಲಕ ವಿಮಾನದಲ್ಲಿ ಡ್ರಗ್ಸ್ ಕಳುಹಿಸುತ್ತಿದ್ದ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT