ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಕೆಫೆ ಕಾಫಿ ಡೇ

Last Updated 31 ಜುಲೈ 2019, 2:34 IST
ಅಕ್ಷರ ಗಾತ್ರ

ಬೆಂಗಳೂರು:36 ಗಂಟೆಗಳ ಕಾರ್ಯಾಚರಣೆ ನಂತರ ನೇತ್ರಾವತಿ ನದಿಯ ಹಿನ್ನೀರಿನಲ್ಲಿಸ್ಥಳೀಯ ಮೀನುಗಾರರಿಗೆ ಮೃತದೇಹವಾಗಿ ಸಿಕ್ಕ ಕೆಫೆ ಕಾಫಿ ಡೇ (ಸಿಸಿಡಿ) ಸಂಸ್ಥಾಪಕವಿ.ಜೆ.ಸಿದ್ಧಾರ್ಥ ಅವರ ಉದ್ಯಮವು ಆರ್ಥಿಕ ಬಿಕ್ಕಟ್ಟಿನಲ್ಲಿ ಇತ್ತು.

ಚಿಕ್ಕಮಗಳೂರಿನವರಾದ ಸಿದ್ಧಾರ್ಥ ಅವರು ದೇಶದ ಪ್ರಮುಖ ಕಾಫಿ ರಫ್ತುದಾರರಲ್ಲಿ ಒಬ್ಬರು. ಅವರು ವಾರ್ಷಿಕ 28,000 ಟನ್‌ನಷ್ಟು ಕಾಫಿಯನ್ನು ರಫ್ತು ಮಾಡುತ್ತಿದ್ದರು. ಪ್ರತೀ ವರ್ಷ 2,000 ಟನ್‌ನಷ್ಟು ಕಾಫಿಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಸುಮಾರು ₹ 35 ಕೋಟಿಗೆ ಮಾರಾಟ ಮಾಡುತ್ತಿದ್ದರು. ಸುಮಾರು 12,000 ಎಕರೆಯಷ್ಟು ಕಾಫಿ ತೋಟ ಅವರ ಮಾಲೀಕತ್ವದಲ್ಲಿ ಇದೆ.

ಇವುಗಳ ಜತೆಯಲ್ಲೇ ಅವರು 1996ರಲ್ಲಿ ಕೆಫೆ ಕಾಫಿ ಡೇಯನ್ನು (ಸಿಸಿಡಿ) ಆರಂಭಿಸಿದರು. ಅದು ರಾಜ್ಯದಲ್ಲಿ ಮಾತ್ರವಲ್ಲಿ ದೇಶದ 243 ನಗರಗಳಲ್ಲಿ ರೆಸ್ಟೋರೆಂಟ್‌ಗಳನ್ನು ಹೊಂದಿದೆ. ಸಂಸ್ಥೆಯು ಒಟ್ಟು 1,751 ರೆಸ್ಟೋರೆಂಟ್‌ಗಳನ್ನು ಹೊಂದಿದೆ. ಕಾಫಿ ಡೇ ಎಂಟರ್‌ಪ್ರೈಸಸ್‌ನಲ್ಲಿ ಸಿದ್ಧಾರ್ಥ ಅವರು ಶೇ 53ರಷ್ಟು ಪಾಲುದಾರಿಕೆ ಹೊಂದಿದ್ದಾರೆ. ಈ ಕಂಪನಿ 2019ರ ಆರ್ಥಿಕ ವರ್ಷದಲ್ಲಿ ₹ 4,466.79 ಕೋಟಿ ಆದಾಯ ಮತ್ತು ₹ 127.51 ಕೋಟಿ ನಿವ್ವಳ ಲಾಭ ಗಳಿಸಿದೆ.

ಆದರೆ ವರ್ಷದಿಂದೀಚೆಗೆ ಹೆಚ್ಚುತ್ತಿದ್ದ ಸಾಲದ ಹೊರೆಯಿಂದ ಸಿದ್ಧಾರ್ಥ ತೊಂದರೆಗೆ ಸಿಲುಕಿದ್ದರು ಎಂದು ಅವರ ಆಪ್ತರು ಹೇಳಿದ್ದಾರೆ. ಸಾಲದ ಹೊರೆಯನ್ನು ಇಳಿಸಿಕೊಳ್ಳುವ ಉದ್ದೇಶದಿಂದಲೇ ಮೈಂಡ್‌ಟ್ರೀ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ತಾವು ಹೊಂದಿದ್ದ ಷೇರುಗಳನ್ನು ಸಿದ್ಧಾರ್ಥ ಮಾರಾಟ ಮಾಡಿದ್ದರು. ‘ಅಷ್ಟೂ ಹಣವನ್ನು ಅವರು ಬ್ಯಾಂಕ್‌ಗೆ ಪಾವತಿಸಿದ್ದರು. ಇದರಿಂದ ಅವರ ಹೊರೆ ಕಡಿಮೆಯಾಗಿತ್ತು’ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

2018ರ ಮಾರ್ಚ್‌ನಲ್ಲಿ ಸಿದ್ಧಾರ್ಥ ಅವರ ಸಾಲ ₹ 3,192.56 ಕೋಟಿ ಇತ್ತು. 2019ರ ಮಾರ್ಚ್‌ನಲ್ಲಿ ಅದು ₹ 2,657.75 ಕೋಟಿಗೆ ಇಳಿಕೆಯಾಗಿತ್ತು. ಮೈಂಡ್‌ಟ್ರೀಯಲ್ಲಿ ತಾವು ಹೊಂದಿದ್ದ ಶೇ 20ರಷ್ಟು ಷೇರುಗಳ ಮಾರಾಟದಿಂದ ಸಿದ್ಧಾರ್ಥ ಅವರಿಗೆ ₹ 3,269 ಕೋಟಿ ಲಭ್ಯವಾಗಿತ್ತು ಎಂದು ಮೂಲಗಳು ಹೇಳಿವೆ.

ಕಾಫಿ ಡೇ ಎಂಟರ್‌ಪ್ರೈಸಸ್‌ ಪಡೆದಿದ್ದ ಅಲ್ಪಾವಧಿ ಸಾಲವು ಒಂದು ವರ್ಷದಲ್ಲಿ ನಾಲ್ಕುಪಟ್ಟು ಹೆಚ್ಚಾಗಿತ್ತು. ವರ್ಷದಿಂದೀಚೆಗೆ ಅದು ₹ 810.91 ಕೋಟಿಯಿಂದ ₹ 3,889.63 ಕೋಟಿಗೆ ಏರಿಕೆಯಾಗಿತ್ತು ಎಂಬ ಮಾಹಿತಿ ಲೆಕ್ಕಪತ್ರಗಳಲ್ಲಿ ಇದೆ.

ಸಿದ್ಧಾರ್ಥ ಅವರು ಒಂದು ವರ್ಷದಿಂದ ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಒತ್ತಡದಲ್ಲಿ ಇದ್ದರು. ಕಳೆದ ವರ್ಷ ಬೆಂಗಳೂರಿನಲ್ಲಿರುವ ಅವರ ಸ್ವತ್ತುಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು.

ಕೋಕಾ–ಕೋಲಾ ಜತೆಗೆ ಮಾತುಕತೆ

ಕಾಫಿ ಡೇ ಎಂಟರ್‌ಪ್ರೈಸಸ್‌ನಲ್ಲಿ ತಾವು ಹೊಂದಿದ್ದ ಷೇರುಗಳನ್ನು ಕೋಕಾ–ಕೋಲಾ ಕಂಪನಿಗೆ ಮಾರಾಟ ಮಾಡಲು ಸಿದ್ಧಾರ್ಥ ಮಾತುಕತೆ ನಡೆಸುತ್ತಿದ್ದರು ಎಂದು ಕಂಪನಿಯ ಮೂಲಗಳು ಹೇಳಿವೆ.

ಶೇ 53.93ರಷ್ಟು ಷೇರುಗಳಲ್ಲಿಸಿದ್ಧಾರ್ಥ ಮತ್ತು ಅವರ ಪತ್ನಿ ಮಾಳವಿಕಾ ಅವರು ಕ್ರಮವಾಗಿಶೇ 32.75 ಹಾಗೂ ಶೇ 4.05 ಷೇರುಗಳನ್ನು ಹೊಂದಿದ್ದರು. ದಂಪತಿಯ ಒಡೆತನದಲ್ಲಿದ್ದ ವಿವಿಧ ಕಂಪನಿಗಳ ಹೆಸರಿನಲ್ಲಿ ಉಳಿದ ಷೇರುಗಳಿವೆ.

ಸಿದ್ಧಾರ್ಥ ಅವರು ಹೊಂದಿದ್ದ ಶೇರುಗಳಲ್ಲಿ ಶೇ 20–30ರಷ್ಟು ಷೇರುಗಳನ್ನು ಮಾರಾಟ ಮಾಡಲು ಮಾತುಕತೆ ನಡೆಸಿದ್ದರು. ಈ ಸಂಬಂಧ ಮಂಗಳವಾರ ಕಾಫಿ ಡೇ ಎಂಟರ್‌ಪ್ರೈಸಸ್‌ನ ಮಂಡಳಿಯ ಸಭೆಯ ನಂತರ ಘೋಷಣೆ ಹೊರಡಿಸುವ ಸಾಧ್ಯತೆ ಇತ್ತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT