ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಆಮದು ಸುಂಕ ಇಳಿಕೆ

7
ರೈತರಿಗೆ ನೀಡಿದ್ದ ಭರವಸೆ ಈಡೇರಿಸದ ಕೇಂದ್ರ: ಮೋದಿ ಸರ್ಕಾರ ರೈತ ವಿರೋಧಿ

ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಆಮದು ಸುಂಕ ಇಳಿಕೆ

Published:
Updated:

ಹುಬ್ಬಳ್ಳಿ: ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಖಾದ್ಯತೈಲ, ಸಕ್ಕರೆ, ಗೋಧಿ, ಆಲೂಗೆಡ್ಡೆಯ ಆಮದು ಸುಂಕವನ್ನು ಕಡಿಮೆ ಮಾಡಿದೆ. ಪರಿಣಾಮ ದೇಶದ ರೈತರು ತಮ್ಮ ಬೆಳೆಗಳಿಗೆ ಬೆಲೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಮಹಾ ಸಂಘದ ರಾಷ್ಟ್ರೀಯ ಸಂಚಾಲಕ ಕೆ.ವಿ. ಬಿಜು ದೂರಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘ ಜಮ್ಮುವಿನಿಂದ ಆರಂಭಿಸಿರುವ ಕಿಸಾನ್ ಅಧಿಕಾರ ಯಾತ್ರೆ ಸೋಮವಾರ ಹುಬ್ಬಳ್ಳಿ ತಲುಪಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಾಮ್ ಆಯಿಲ್ ಅಂತಹ ಖಾದ್ಯ ತೈಲವನ್ನು ಆಮದು ಮಾಡಿಕೊಂಡಿಕೊಂಡಿದ್ದರಿಂದ ಪ್ರಧಾನಿ ಅವರ ಸ್ನೇಹಿತ ಅದಾನಿ ಕಂಪೆನಿಗೆ ಲಾಭವಾಯಿತು’ ಎಂದು ಆರೋಪಿಸಿದರು.

ವಸೂಲಾಗದ ಸಾಲದ ಪ್ರಮಾಣ ₹9.6 ಲಕ್ಷ ಕೋಟಿಯಾಗಿದೆ. ಅದರಲ್ಲಿ ಕಾರ್ಪೋರೇಟ್ ಕಂಪೆನಿಗಳು ಬ್ಯಾಂಕ್‌ಗಳಿಗೆ ಪಾವತಿಸಬೇಕಾಗಿರುವ ಮೊತ್ತವೇ 7.05 ಲಕ್ಷ ಕೋಟಿ. ಆರು ವರ್ಷದ ಅವಧಿಯಲ್ಲಿ ಯುಪಿಎ ಹಾಗೂ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ₹4.8 ಲಕ್ಷ ಕೋಟಿ ಕಾರ್ಪೋರೇಟ್ ಸಾಲ ಮನ್ನಾ (ಅಡ್ಜಸ್ಟ್‌) ಮಾಡಿವೆ. ಕೇವಲ ಎರಡು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ₹2.36 ಲಕ್ಷ ಕೋಟಿ ಮನ್ನಾ ಮಾಡಿದೆ. ಕಾರ್ಪೋರೇಟ್ ವಲಯಕ್ಕೆ ಸಿಕ್ಕಿರುವ ತೆರಿಗೆ ಕಡಿತದ ಲಾಭ ₹5.5 ಲಕ್ಷ ಕೋಟಿ ಎಂದು ಅವರು ಮಾಹಿತಿ ನೀಡಿದರು.

ಸಂಘದ ಇನ್ನೊಬ್ಬ ಸಂಚಾಲಕ ಜಗಜಿತ್ ಸಿಂಗ್ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಇದರ ವಿರುದ್ಧ ಹೋರಾಟ ಮಾಡಲು ವಿವಿಧ ರಾಜ್ಯಗಳ ರೈತ ಸಂಘಗಳನ್ನು ಸಂಘಟಿಸಿ ಮಹಾ ಸಂಘ ರಚಿಸಲಾಗಿದೆ. ಸರ್ಕಾರದ ಗಮನ ಸೆಳೆಯಲು 26 ಸಾವಿರ ಕಿ.ಮೀ ಕಿಸಾನ್ ಅಧಿಕಾರ ಯಾತ್ರೆಯನ್ನು ಜಮ್ಮುವಿನಿಂದ ಜುಲೈ26ರಂದು ಆರಂಭಿಸಲಾಗಿದೆ. ಇದೇ 20ರಂದು ಯಾತ್ರೆ ಕನ್ಯಾಕುಮಾರಿ ತಲುಪಲಿದೆ ಎಂದರು.

ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯಂತೆ ಉತ್ಪಾದನಾ ವೆಚ್ಚ ಹಾಗೂ ಅದರ ಅರ್ಧಭಾಗ ಲಾಭ ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು. ಹಣ್ಣು ಹಾಲು, ತರಕಾರಿ ಎಲ್ಲ ಕೃಷಿ ಉತ್ಪನ್ನಗಳಿಗೂ ಬೆಂಬಲ ಬೆಲೆ ನಿಗದಿ ಮಾಡಬೇಕು, ಖರೀದಿ ಭದ್ರತೆ ಜಾರಿಗೊಳಿಸಬೇಕು. ಫಸಲ್ ಬಿಮಾ ಯೋಜನೆಯನ್ನು ಎಲ್ಲ ಬೆಳೆಗಳಿಗೂ ವಿಸ್ತರಿಸಬೇಕು ಎಂದು ಹೇಳಿದರು.

ದೇಶದ ಎಲ್ಲ ರೈತ ಸಂಘಟನೆಗಳನ್ನು ಸೇರಿಸಿ ಇನ್ನೊಂದು ದೊಡ್ಡ ಮಟ್ಟದ ಹೋರಾಟವನ್ನು ಸಂಘಟಿಸಲಾಗುವುದು ಎಂದು ಅವರು ಹೇಳಿದರು. ಸಂಚಾಲಕ ಗುರುನಾಥ್ ಸಿಂಗ್ ಚಂದೋನಿ ಇದ್ದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !