ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಲ್ಲಿ ‘ಇ-ಸಮಯ’

ಪೇಪರ್-ಎಲೆಕ್ಟ್ರಾನಿಕ್ ವ್ಯವಸ್ಥೆಯ ಹಗ್ಗ-ಜಗ್ಗಾಟ
Last Updated 6 ಜೂನ್ 2018, 19:40 IST
ಅಕ್ಷರ ಗಾತ್ರ

ಕಳೆದ ವರ್ಷ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ‘ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಒಂದೇ ಪಕ್ಷಕ್ಕೆ ಮತ ಬೀಳುತ್ತಿದೆ’ ಎಂಬ ಆರೋಪಗಳು ಕೇಳಿಬಂದವು. ಆದರೆ, ಚುನಾವಣಾ ಆಯೋಗ ’ಯಂತ್ರದಲ್ಲಿ ಏನೂ ಸಮಸ್ಯೆ ಇಲ್ಲ. ಎಲ್ಲ ಸರಿ ಇದೆ’ ಎಂಬ ತಾಂತ್ರಿಕ ಸ್ಪಷ್ಟನೆಯನ್ನೂ ನೀಡಿದ್ದಾಯಿತು. ಇಷ್ಟಾದರೂ ಮತ ಯಂತ್ರಗಳ ವಿಶ್ವಾಸರ್ಹತೆ ಬಗ್ಗೆ ಚರ್ಚೆಯಂತೂ ಮುಂದುವರಿದಿದೆ.

ಚುನಾವಣೆಗಳಲ್ಲಿ ವಿಶ್ವದಾದ್ಯಂತ ಕೆಲವು ರಾಷ್ಟ್ರಗಳು ಇವಿಎಂಗಳನ್ನು ಬಳಸಿ, ನಂತರ ಅದನ್ನು ಕೈಬಿಟ್ಟಿವೆ. ಹಾಗೆಯೇ ಈವರೆಗೂ ಅವುಗಳನ್ನು ಬಳಸಿದಿರುವ ರಾಷ್ಟ್ರಗಳೂ ಇವೆ. ಹಾಗಾದರೆ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಮತದಾನಕ್ಕೆ ಯಾವ್ಯಾವ ಕ್ರಮಗಳನ್ನು ಅನುಸರಿಸಲಾಗುತ್ತಿದೆ ? ಅವುಗಳ ವಿಶ್ವಾಸಾರ್ಹತೆ ಎಷ್ಟು? ಇಲ್ಲಿ ತಂತ್ರಜ್ಞಾನದ ಪಾತ್ರವೇನು? ಈ ಕುರಿತು ಸಂಗ್ರಹಿಸಿದ ಮಾಹಿತಿ ಇಲ್ಲಿದೆ.

ಅಂತರ್ಜಾಲ ಬಳಕೆ ‘ಮಾನವ ಹಕ್ಕು’ ಎಂದು ಪರಿಗಣಿಸಿ ಅಳವಡಿಸಿಕೊಂಡಿರುವ ಯುರೋಪಿನ ಎಸ್ಟೋನಿಯಾದಲ್ಲಿ ಆನ್‍ಲೈನ್‍ನಲ್ಲಿಯೇ ಸಂಪೂರ್ಣ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ದೇಶದ ‘ಡಿಜಿಟಲ್ ಐಡಿ’ ಪಡೆದಿರುವ ನಾಗರಿಕರು ಆನ್‍ಲೈನ್ ಮೂಲಕ ಮತ ಚಲಾಯಿಸಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂಥ ವ್ಯವಸ್ಥೆಗೆ ಅಂತರ್ಜಾಲವೇ ಕಡಿವಾಣ. 2005ರಲ್ಲಿ ಪ್ರಾರಂಭವಾದ ಈ ವ್ಯವಸ್ಥೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಇಲ್ಲಿ 2015ರ ಚುನಾವಣೆಯಲ್ಲಿ ಆನ್‍ಲೈನ್‍ನಲ್ಲಿ ಆದ ಮತದಾನ ಶೇ 30.

‘ಇ’ ಮಯ ಎಸ್ಟೋನಿಯಾ

ಜಗತ್ತಿನಲ್ಲಿ ಇ-ಸೇವೆಗಳನ್ನು ಒಗ್ಗೂಡಿಸಿಕೊಂಡಿರುವ ರಾಷ್ಟ್ರಗಳ ಪೈಕಿ ಎಸ್ಟೋನಿಯಾಗೆ ಪ್ರಮುಖ ಸ್ಥಾನ. ವಿಶೇಷ ಚಿಪ್, ಪಿನ್ ಕೋಡ್ ಒಳಗೊಂಡ ಎಲೆಕ್ಟ್ರಾನಿಕ್ ಗುರುತಿನ ಚೀಟಿ(ಐಡಿ) ಹೊಂದಿರುವ ಇಲ್ಲಿನ ನಾಗರಿಕರು ಸುಮಾರು 600 ಸೇವೆಗಳನ್ನು ಅಂತರ್ಜಾಲದ ಮೂಲಕವೇ ಪಡೆಯುತ್ತಿದ್ದಾರೆ. ವಾಣಿಜ್ಯ-ಉದ್ಯಮ ಉದ್ದೇಶಗಳಿಗಾಗಿ 2,400ರಷ್ಟು ‘ಇ-ಸೇವೆ’ ಸೌಲಭ್ಯವಿದೆ.

ಎಸ್ಟೋನಿಯಾದಲ್ಲಿ ಇ-ಆಡಳಿತ ಕೂಡ ಸಾಮಾನ್ಯ ಪ್ರಕ್ರಿಯೆಯಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಹಣ ಪಾವತಿ, ಪಾರ್ಕಿಂಗ್, ತೆರಿಗೆ, ಹೊಸ ಸಂಸ್ಥೆ ಪ್ರಾರಂಭ ಸೇರಿದಂತೆ ಸರ್ಕಾರದ ಯಾವುದೇ ಸೇವೆ ಪಡೆಯಲು ಸರ್ಕಾರದ ಎಲೆಕ್ಟ್ರಾನಿಕ್ ಐಡಿ ಬಳಸಿ ಆನ್‍ಲೈನ್‍ನಲ್ಲಿಯೇ ಪೂರೈಸಿಕೊಳ್ಳಬಹುದು.

ಸುರಕ್ಷತೆ ದೃಷ್ಟಿಯಿಂದ ಐಡಿ ಕಾರ್ಡ್‍ಗಳು ಸೀಮಿತ ಖಾಸಗಿ ಮಾಹಿತಿಯನ್ನಷ್ಟೇ ಒಳಗೊಂಡಿರುತ್ತದೆ. ಕಾರ್ಡ್ ಕಳೆದರೆ, ಅದನ್ನು ರದ್ದು ಪಡಿಸಿ ಹೊಸ ಕಾರ್ಡ್ ಪಡೆಯಲು ಸುಲಭ ವ್ಯವಸ್ಥೆ ಇದೆ. ಉದ್ಯಾನ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್, ಬಸ್ ನಿಲ್ದಾಣ ಎಲ್ಲೆಡೆಯೂ ಉಚಿತ ಹಾಗೂ ವೇಗದ ವೈ–ಫೈ ಅಂತರ್ಜಾಲ ಸಂಪರ್ಕ ವ್ಯವಸ್ಥೆ ಪಡೆಯಬಹುದು. ಇಲ್ಲಿನ ಸರ್ಕಾರ ಕಳೆದ ವರ್ಷ ಪ್ರಾರಂಭಿಸಿದ ಇ-ರೆಸಿಡೆನ್ಸಿ ಕಾರ್ಯಕ್ರಮದ ಅಡಿಯಲ್ಲಿ ಜಗತ್ತಿನ ಯಾವುದೇ ನಾಗರಿಕ ಎಸ್ಟೋನಿಯಾದ ಡಿಜಿಟಲ್ ಐಡಿ ಪಡೆದು ಆನ್‍ಲೈನ್‍ನಲ್ಲಿ ಅಧಿಕೃತ ಸಂಸ್ಥೆ ಕಾರ್ಯಾರಂಭಿಸಬಹುದು.

ಇ- ಫೋನ್ ಬೂತ್

ಫೋನ್‍ಗಳಲ್ಲಿರುವ ಅಂಕಿಗಳ ಪ್ಯಾಡ್ ಹಾಗೂ ಅಂತಿಮ ಆಯ್ಕೆಗಾಗಿ ಮೂರು ಪ್ರತ್ಯೇಕ ಗುಂಡಿಗಳು. ಆಯ್ಕೆ ಮಾಡಿದ ಅಭ್ಯರ್ಥಿಯ ಭಾವಚಿತ್ರ, ಹೆಸರು ಸೇರಿ ಇತರ ಮಾಹಿತಿ ತೋರಿಸುವ ಪರದೆ- ಇದು ಬ್ರೆಜಿಲ್‍ನ ಎಲೆಕ್ಟ್ರಾನಿಕ್ ಫೋನ್ ಬೂತ್‍ಗಳಲ್ಲಿರುವ ಮತಯಂತ್ರದ ಚಿತ್ರಣ.

ಚುನಾವಣೆಯನ್ನು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಯಂತ್ರಗಳ ಮೂಲಕವೇ ನಿರ್ವಹಿಸಿದ ಮೊದಲ ರಾಷ್ಟ್ರ ಬ್ರೆಜಿಲ್. ಬಳಸಲು ಸುಲಭವಾದ ಈ ವ್ಯವಸ್ಥೆಯನ್ನು 2000ರಲ್ಲಿ ಮತದಾರರು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸಿದರು. ಈ ವ್ಯವಸ್ಥೆ ನಕಲಿ ಮತಗಳನ್ನು ತಡೆ ಹಾಗೂ ವೇಗವಾಗಿ ಫಲಿತಾಂಶ ಪ್ರಕಟಿಸುವುದಕ್ಕೂ ಸಹಕಾರಿಯಾಯಿತು. ಆದರೂ, ಇಲ್ಲಿನ ಒಟ್ಟು ಮತದಾನದ ಪ್ರಮಾಣದಲ್ಲಿ ಹೆಚ್ಚು ಏರಿಕೆ ಕಾಣಲಿಲ್ಲ. 1998ರಲ್ಲಿ ಶೇ 78.5 ಮತದಾನ, 2014ರಲ್ಲಿ ಶೇ 78.9ರಷ್ಟು ಮತದಾನ ದಾಖಲಾಗಿದೆ.

ಇ–ಮತದಾನದಿಂದ ಹೊರಬಂದ ಜರ್ಮನಿ

ಪ್ರಜಾಪ್ರಭುತ್ವ ಅನುಸರಿಸುತ್ತಿರುವ ರಾಷ್ಟ್ರಗಳ ಪೈಕಿ 20-24 ರಾಷ್ಟ್ರಗಳು ಮಾತ್ರ ವಿದ್ಯುನ್ಮಾನ ಮತದಾನ ಮಾರ್ಗ ಅಳವಡಿಸಿಕೊಂಡಿವೆ. ಈ ಕುರಿತಾದ ಕಾನೂನು ರಚನೆ ಸೇರಿ ಹಲವು ಗೊಂದಲಗಳ ಕಾರಣದಿಂದಾಗಿ ಜರ್ಮನಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ನಿಲ್ಲಿಸಿ, ಹಿಂದಿನ ಪೇಪರ್ ಬ್ಯಾಲೆಟ್ ವ್ಯವಸ್ಥೆಯನ್ನೇ ಮುಂದುವರಿಸಿದೆ. ಅಮೆರಿಕ ಎಟಿಎಂನಂತೆ ಕಾಣುವ ದೊಡ್ಡ ಯಂತ್ರಗಳಲ್ಲಿ ಚಿಪ್ ಒಳಗೊಂಡ ಮತದಾರರ ಗುರುತಿನ ಚೀಟಿ ಬಳಸಿ ಮತದಾನ ಪ್ರಕ್ರಿಯೆ ನಡೆಸುತ್ತಿದೆ. ಈ ಟಚ್‍ಸ್ಕ್ರೀನ್ ಯಂತ್ರದಲ್ಲಿ ಮತದಾರರು ಇಂಗ್ಲಿಷ್, ಸ್ಪ್ಯಾನಿಷ್ ಅಥವಾ ಹಿಂದಿ ಭಾಷೆ ಆಯ್ಕೆ ಮಾಡಿಕೊಂಡು ಪ್ರಕ್ರಿಯೆ ಮುಂದುವರಿಸಬಹುದು.

ಬೆರಳೊತ್ತಿ ಮತ ಚಲಾವಣೆ

ಟಚ್ ಸ್ಕ್ರೀನ್ ಮೂಲಕ ಮತಗಳನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಮೊದಲ ಬಾರಿಗೆ ವೆನಿಜುವೆಲಾದಲ್ಲಿ ಪ್ರಾರಂಭಿಸಲಾಯಿತು. ಬೆರಳಿನ ಗುರುತು ಪಡೆಯುವ ಮೂಲಕ ನಕಲಿ ಮತಗಳನ್ನು ತಡೆಯುವ ವ್ಯವಸ್ಥೆ ಇದಾಗಿತ್ತು. ಆದರೆ, ಬೆರಳು ಗುರುತಿನ ಮೂಲಕ ನೀಡಿದ ಮತದ ಮಾಹಿತಿ ಬಹಿರಂಗವಾಗಬಹುದು ಎಂಬ ಅನುಮಾನ ವ್ಯಕ್ತವಾಯಿತು.

ಆಫ್ರಿಕಾ ಖಂಡದ 25 ರಾಷ್ಟ್ರಗಳು ‘ಬೆರಳು ಒತ್ತಿ’ ಮತದಾನ ನಡೆಸುವ ‘ಬಯೋಮೆಟ್ರಿಕ್’ ವ್ಯವಸ್ಥೆಯ ಮೂಲಕ ಚುನಾವಣೆ ನಡೆಸಿದವು. ಮತದಾನದಲ್ಲಿ ಅಕ್ರಮ ತಡೆ ಮತ್ತು ಗೊಂದಲಗಳಿಗೆ ವಿರಾಮ ಹಾಕಲು ಇದೊಂದು ಉತ್ತಮ ಯೋಜನೆಯಾಗಿ ಕಂಡರೂ, ಅನುಷ್ಠಾನದಲ್ಲಿ ಅನೇಕ ಸಮಸ್ಯೆಗಳು ಎದುರಾದವು. ಬಯೋಮೆಟ್ರಿಕ್ ಯಂತ್ರಗಳಲ್ಲಿ ಬೆರಳಿನ ಗುರುತು ಸಂಗ್ರಹಿಸುವ ಸಮಸ್ಯೆ, ಲ್ಯಾಪ್‍ಟಾಪ್‍ಗಳ ಬ್ಯಾಟರಿ ಚಾರ್ಜ್ ಸಮಸ್ಯೆ ಕೂಡ ಕೆಲವು ಚುನಾವಣೆಯಲ್ಲಿ ತೊಡಕಾಯಿತು. ಜತೆಗೆ, ಈ ವ್ಯವಸ್ಥೆಗೆ ಮಾಡಿದ ಖರ್ಚು ದೊಡ್ಡ ಹೊರೆಯಾಯಿತು.

ಬಾಹ್ಯಾಕಾಶದಿಂದ ಅಂಚೆ ಮತ

ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದ ಅಧಿಕಾರಿಗಳು, ಸಿಬ್ಬಂದಿಗೆ ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ಭೂಮಿಯಿಂದ ಹೊರಗೆ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮತದಾನ ಮಾಡುವುದು ಹೇಗೆ?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ನಾಸಾದ ವಿಜ್ಞಾನಿಗಳು, ಖಗೋಳ ತಜ್ಞರಿಗಾಗಿ ಅಮೆರಿಕ ವಿಶೇಷವಾದ ಅರ್ಜಿಯನ್ನು ರವಾನಿಸಿ, ಭರ್ತಿ ಮಾಡಿದ ಅದರ ಸ್ಕ್ಯಾನ್ ಪ್ರತಿಯನ್ನು ಪಡೆಯುವ ಮೂಲಕ ಬಾಹ್ಯಾಕಾಶದಲ್ಲಿ ಇದ್ದವರಿಗೂ ಮತದಾನದ ಅವಕಾಶ ನೀಡಿದೆ. ಈವರೆಗೆ ಮೂವರು ಗಗನಯಾತ್ರಿಗಳು ಅಂತರಿಕ್ಷದಿಂದಲೇ ಮತ ಚಲಾಯಿಸಿದ್ದಾರೆ.

ಪೆನ್-ಪೇಪರ್ ಆ ವ್ಯವಸ್ಥೆ

ಇವಿಎಂ ಕುರಿತ ಚರ್ಚೆ ನಡೆದಾಗಲೆಲ್ಲ ಅನೇಕ ಪಕ್ಷಗಳು ಇಂದಿಗೂ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಒಲವು ವ್ಯಕ್ತಪಡಿಸುತ್ತವೆ. ಪೇಪರ್ ನಲ್ಲಿ ತನ್ನ ಆಯ್ಕೆಯನ್ನು ಪೆನ್‍ನಿಂದ ಗುರುತು ಮಾಡುವುದು ಅಥವಾ ಮುದ್ರೆ ಒತ್ತುವ ಕ್ರಮವನ್ನೇ ಜಗತ್ತಿನ ಅನೇಕ ಮುಂದುವರಿದ ರಾಷ್ಟ್ರಗಳಲ್ಲಿಯೂ ಅನುಸರಿಸಲಾಗುತ್ತಿದೆ.

ಎಲೆಕ್ಟ್ರಾನಿಕ್ ಯಂತ್ರಗಳಿಗಿಂತ ಕಡಿಮೆ ವೆಚ್ಚ, ಬಳಸುವುದು ಸುಲಭ ಹಾಗೂ ಹ್ಯಾಕ್ ಮಾಡುವುದು ಅಸಾಧ್ಯ, ವಿದ್ಯುತ್ ಅಥವಾ ಬ್ಯಾಟರಿ ಅವಶ್ಯಕತೆಯೂ ಇಲ್ಲ, ಎನ್ನುವಂತಹ ಅನೇಕ ವಾದಗಳ ಮೂಲಕ ಪೇಪರ್ ಬ್ಯಾಲೆಟ್ ಅಸ್ತಿತ್ವ ಉಳಿಸಿಕೊಂಡಿದೆ.

‘ಗೋಲಿ ಮತದಾನ’!

ಪಶ್ಚಿಮ ಆಫ್ರಿಕಾದ ಗಾಂಬಿಯಾದಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳ ಬಳಕೆಯೂ ಇಲ್ಲ, ಪೇಪರ್ ಬ್ಯಾಲೆಟ್ ಪ್ರಕ್ರಿಯೆಯನ್ನೂ ಅನುಸರಿಸುವುದಿಲ್ಲ. ಪಕ್ಷ, ಅಭ್ಯರ್ಥಿವಾರು ಜೋಡಿಸಲಾದ ವಿವಿಧ ಬಣ್ಣಗಳ ಲೋಹದ ಡಬ್ಬಗಳಲ್ಲಿ ಒಂದಕ್ಕೆ ‘ಗಾಜಿನ ಗೋಲಿ’ ಹಾಕುವ ಮೂಲಕ ಗಾಂಬಿಯಾದ ಜನ ಮತದಾನದ ಹಕ್ಕು ಚಲಾಯಿಸುತ್ತಾರೆ.

ಆಫ್ರಿಕಾದ ಅತ್ಯಂತ ಪುಟ್ಟ ರಾಷ್ಟ್ರ ಗಾಂಬಿಯಾದಲ್ಲಿ ಮಾತ್ರವೇ ಈ ಪ್ರಕ್ರಿಯೆಯಿದೆ. ಡಬ್ಬದೊಳಗೆ ಗೋಲಿ ಉರುಳಿ ದೊಡ್ಡದಾಗಿ ಸದ್ದಾಗುತ್ತದೆ. ಅಲ್ಲಿಗೆ ಮತದಾನ ಯಶಸ್ವಿ. ಗೋಲಿಗಳ ಎಣಿಕೆ ಆಧಾರದಲ್ಲಿ ನಾಯಕನ ಘೋಷಣೆಯಾಗುತ್ತದೆ. 1960ರಿಂದ ಜಾರಿಯಲ್ಲಿರುವ ಈ ವ್ಯವಸ್ಥೆ ಚುನಾವಣಾ ಆಯೋಗದ ಆದೇಶದ ಮೇರೆಗೆ 2018ರಿಂದ ಪೇಪರ್ ಬ್ಯಾಲೆಟ್ ಕಡೆಗೆ ಹೊರಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT