ಭಾನುವಾರ, ಸೆಪ್ಟೆಂಬರ್ 15, 2019
30 °C

ಕೇರಳ ಕೇಂದ್ರೀಯ ವಿವಿ ಕನ್ನಡ ಕೋರ್ಸ್‌ಗೆ 5 ಮಂದಿ ಪ್ರವೇಶ: ವಿಭಾಗ ಮುಚ್ಚುವ ಭೀತಿ

Published:
Updated:

ಮಂಗಳೂರು: ಕಾಸರಗೋಡು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಕನ್ನಡ ಸ್ನಾತಕೋತ್ತರ ವಿಭಾಗ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಪ್ರವೇಶಕ್ಕೆ ಉತ್ಸುಕತೆ ತೋರಿಸದಿರುವುದರಿಂದ ವಿಭಾಗ ಮುಚ್ಚುವ ಭೀತಿ ಎದುರಾಗಿದೆ. ಈ ಪರಿಸರದಲ್ಲಿ ಆರಂಭವಾಗಿರುವ ಕನ್ನಡ ಅಧ್ಯಯನ ವಿಭಾಗ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರೀಯ ವಿ.ವಿ.ಯಿಂದಲೂ ಪ್ರಯತ್ನಗಳು ನಡೆದಿವೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈ ಶೈಕ್ಷಣಿಕ ವರ್ಷಕ್ಕೆ ಪ್ರವಾಸೋದ್ಯಮ, ವಾಣಿಜ್ಯ, ವ್ಯವಹಾರ ನಿರ್ವಹಣೆ, ಕನ್ನಡ ಸೇರದಿಂತೆ ನಾಲ್ಕು ನೂತನ ಸ್ನಾತಕೋತ್ತರ ಕೋರ್ಸ್‌ ಆರಂಭಿಸಿದೆ. ಕನ್ನಡ ಹೊರತುಪಡಿಸಿ ಮೂರು ವಿಭಾಗಗಳು ಜುಲೈ 30 ರಂದು ಅಧಿಕೃತ ಆರಂಭಗೊಂಡಿವೆ. ಕನ್ನಡ ವಿಭಾಗಕ್ಕೆ ಆನ್‌ಲೈನ್‌ ಮೂಲಕ 8 ಮಂದಿ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 5 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಕೊರತೆ ಕಾರಣದಿಂದ ವಿಭಾಗವು ಇನ್ನು ಆರಂಭಗೊಂಡಿಲ್ಲ.

ಕೇರಳ ರಾಜ್ಯದ ಕಾಸರಗೋಡು ಗಡಿನಾಡು ಪರಿಸರದಲ್ಲಿ ಕನ್ನಡಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಬಹುಭಾಷೆ ಹಾಗೂ ಪಂಚ ಭಾಷೆಯ ಸಂಗಮ ಆಗಿರುವ ಕಾಸರಗೋಡಿನಲ್ಲಿ ಕನ್ನಡ ವ್ಯಾಸಂಗ ಮಾಡುವ ಅವಕಾಶ ಒದಗಿಸುವ ಉದ್ದೇಶದಿಂದ ಈ ವಿಭಾಗ ಪ್ರಾರಂಭಗೊಂಡಿದೆ. ಆದರೆ, ವಿದ್ಯಾರ್ಥಿಗಳು ಪ್ರವೇಶಕ್ಕೆ ಬಾರದೇ ಇರುವ ಕಾರಣದಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಆಗಸ್ಟ್‌ 20ವರಿಗೆ ಅವಧಿ ವಿಸ್ತರಣೆ ಮಾಡಿ ಕೇಂದ್ರೀಯ ವಿ.ವಿ ಆದೇಶ ಹೊರಡಿಸಿದೆ.

‘ಕಾಸರಗೋಡು, ಕರ್ನಾಟಕದ ಭಾಗವಾಗಿತ್ತು, ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಕೋರ್ಸ್‌ ಆರಂಭಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸದೆ ಇರುವ ಕಾರಣಕ್ಕೆ ವಿಭಾಗ ಇನ್ನು ಆರಂಭಿಸಿಲ್ಲ. ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರ ರಾಜ್ಯದಲ್ಲಿ ಕನ್ನಡ ವ್ಯಾಸಂಗ ಮಾಡುವ ಕನ್ನಡದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹ 25 ಸಾವಿರ ಶಿಷ್ಯವೇತನ ನೀಡುತ್ತಿದೆ. ಆಸಕ್ತ ವಿದ್ಯಾರ್ಥಿಗಳು cukerala.ac.in ಮೂಲಕ ಮಾಹಿತಿ ಪಡೆಯಬಹುದು’ ಎಂದು ಕಾಸರಗೋಡು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಶೈಕ್ಷಣಿಕ ಸಂಯೋಜಕ ಪ್ರೊ. ಬಿ. ಶಿವರಾಮ ಶೆಟ್ಟಿ ಹೇಳಿದರು.

ಈ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಆರಂಭಗೊಂಡಿರುವುದು ಕನ್ನಡಕ್ಕೆ ಸಿಕ್ಕ ದೊಡ್ಡ ಅವಕಾಶ. ಗಡಿನಾಡಿನಲ್ಲಿ ಸಿಕ್ಕಿರುವ ಈ ಅವಕಾಶ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆಯುವ ಯತ್ನ ನಡೆದಿದೆ. ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಪ್ರವೇಶ ಪಡೆದುಕೊಂಡಲ್ಲಿ ವಿಭಾಗ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

10 ವಿದ್ಯಾರ್ಥಿಗಳಾದರೂ ಆರಂಭ

‘ಕನ್ನಡ ಕೋರ್ಸ್‌ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯವೂ ಇದೆ. ವಿಭಾಗಕ್ಕೆ 50 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದೆ. ಆದರೆ, ಕನಿಷ್ಠ 10 ವಿದ್ಯಾರ್ಥಿಗಳು ಪ್ರವೇಶ ಪಡೆದರೂ ವಿಭಾಗ ಆರಂಭಿಸಲು ಸಾಧ್ಯವಾಗುತ್ತದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ರಾಧಾಕೃಷ್ಣನ್‌ ನಾಯರ್‌ ಹೇಳಿದರು.

ಆರ್ಥಿಕ ಸಹಾಯಕ್ಕೆ ಪ್ರಾಯೋಜಕರ ಹುಡುಕಾಟ

ವಿದ್ಯಾರ್ಥಿಗಳ ಪ್ರವೇಶಕ್ಕೆ ಎಲ್ಲ ಪ್ರಯತ್ನ ನಡೆದಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪ್ರವೇಶಕ್ಕೆ ಪ್ರಾಯೋಜಕರ ಹುಡುಕಾಟವು ನಡೆದಿದೆ. ಪ್ರವೇಶಕ್ಕಾಗಿ ಬಂದು ವಿದ್ಯಾರ್ಥಿಗಳು ಹೋಗುತ್ತಿದ್ದಾರೆ, ಆದರೆ ಪ್ರವೇಶ ಪಡೆಡಯುತ್ತಿಲ್ಲ. ವಿಭಾಗವನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ನೋಡಿಕೊಳ್ಳುವ ಪ್ರಯತ್ನ ಸಾಗಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಶೈಕ್ಷಣಿಕ ಸಂಯೋಜಕ ಪ್ರೊ. ಬಿ. ಶಿವರಾಮ ಶೆಟ್ಟಿ ಹೇಳಿದರು.

Post Comments (+)