ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಬಾಧಿತ ಜಿಲ್ಲೆಗಳಿಗೆ ಸದ್ಯಕ್ಕಿಲ್ಲ ಅಭಿವೃದ್ಧಿ ಭಾಗ್ಯ

Last Updated 15 ನವೆಂಬರ್ 2018, 19:49 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ಬಾಧಿತವಾಗಿರುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಪುನರ್‌ಸೃಷ್ಟಿ (ಸಿಇಪಿಎಂಐಝಡ್‌) ಯೋಜನೆ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿರುವುದರಿಂದ ಸದ್ಯಕ್ಕೆ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಜನರ ‘ಶಾಪ’ ವಿಮೋಚನೆ ಆಗುವಂತೆ ಕಾಣುತ್ತಿಲ್ಲ.

ರಾಜ್ಯ ಸರ್ಕಾರ ಮೂರೂ ಜಿಲ್ಲೆಗಳಿಗೆ ಮುಂದಿನ ಹತ್ತು ವರ್ಷಕ್ಕೆ ₹ 25,000 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಿದೆ. ಇದನ್ನು ಒಪ್ಪದ ‘ಫೆಡರೇಷನ್‌ ಆಫ್‌ ಇಂಡಿಯನ್‌ ಮಿನೆರಲ್‌ ಇಂಡಸ್ಟ್ರಿ’ (ಫಿಮಿ) ₹ 8,000 ಕೋಟಿ ಮೌಲ್ಯದ ಪ್ರತ್ಯೇಕ ಯೋಜನೆ ತಯಾರಿಸಿದೆ. ಇವೆರಡೂ ಯೋಜನೆಗಳು ಸುಪ್ರೀಂ ಕೋರ್ಟ್‌ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಕೈ ಸೇರಿದ್ದು, ಕೋರ್ಟ್‌ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಅಕ್ಟೋಬರ್‌ ಕೊನೆ ವಾರ ನಡೆದ ಸರ್ಕಾರ ಮತ್ತು ‘ಫಿಮಿ’ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ್ದ ಸಿಇಸಿ ಪದಾಧಿಕಾರಿಗಳು, ಕೆಲವು ಷರತ್ತುಗಳೊಂದಿಗೆ ಸರ್ಕಾರದ ಯೋಜನೆಯನ್ನು ಒಪ್ಪಬಹುದು ಎಂದು ಶಿಫಾರಸು ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣ ಈ ತಿಂಗಳ 20ರಂದು ವಿಚಾರಣೆಗೆ ಬರುವ ಸಂಭವವಿದೆ.

ಮೂರೂ ಜಿಲ್ಲೆಗಳಿಗೆ ‘ಸಿಇಪಿಎಂಐಝಡ್‌’ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿತ್ತು. ಈ ಉದ್ದೇಶಕ್ಕಾಗಿ ಅದಿರು ಹರಾಜಿನ ಹಣದಲ್ಲಿ (ಸಣ್ಣಪುಟ್ಟ ಅಕ್ರಮವೆಸಗಿದ ಗಣಿಗಳಿಂದ ಶೇ 10, ಸ್ವಲ್ಪ ಅಧಿಕ ಪ್ರಮಾಣದಲ್ಲಿ ಅಕ್ರಮವೆಸಗಿದ ಗಣಿಗಳಿಂದ ಶೇ 15, ಯದ್ವಾತದ್ವ ಅಕ್ರಮವೆಸಗಿದ ಗಣಿಗಳಿಂದ ಶೇ 25) ಭಾಗಶಃ ಸಂಗ್ರಹಿಸುವಂತೆ ಸೂಚಿಸಿತ್ತು. ಇದಕ್ಕಾಗಿ ’ವಿಶೇಷ ಉದ್ದೇಶಿತ ಘಟಕ’ (ಎಸ್‌ಪಿವಿ) ಸ್ಥಾಪಿಸಿದೆ.

ಇದುವರೆಗೆ ಅದಿರು ಮಾರಾಟದಿಂದ ಸಂಗ್ರಹವಾದ ಹಣ ಮತ್ತು ಅದಕ್ಕೆ ಬಂದಿರುವ ಬಡ್ಡಿ ಸೇರಿದಂತೆ ₹ 12,500 ಕೋಟಿ ಎಸ್‌ಪಿವಿ ಖಾತೆಗೆ ಜಮಾ ಆಗಿದೆ. ಶುಲ್ಕ ಸಂಗ್ರಹ ಮುಂದಿನ 10 ವರ್ಷಗಳವರೆಗೆ ಮುಂದುವರಿದರೆ ₹ 23,000 ಕೋಟಿ ದೊರೆಯಲಿದೆ. ಸರ್ಕಾರಿ ಸ್ವಾಮ್ಯದ ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ’ದಿಂದ (ಎನ್‌ಎಂಡಿಸಿ) ₹ 2,800 ಕೋಟಿ ಬರಬಹುದೆಂದು ನಿರೀಕ್ಷಿಸಲಾಗಿದೆ.

ಏನಿದು ವಿವಾದ?: ‘ಸಿಇಪಿಎಂಐಝಡ್‌’ ಸಿದ್ಧಪಡಿಸುವ ವಿಷಯದಲ್ಲಿ ಸರ್ಕಾರ ಹಾಗೂ ಫಿಮಿ ನಡುವೆಆರಂಭದಿಂದಲೂ ತಿಕ್ಕಾಟ ನಡೆಯುತ್ತಿದೆ. ಸಿಇಸಿ ಸಮ್ಮುಖದಲ್ಲಿ ಹಲವು ಸಭೆಗಳು ನಡೆದರೂ ಒಮ್ಮತ ಸಾಧ್ಯವಾಗಿಲ್ಲ.ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಪ್ರಸ್ತಾವನೆ ಕುರಿತು ಫಿಮಿ ತಕರಾರಿಲ್ಲ. ಆಕ್ಷೇ‍ಪ ಬಳ್ಳಾರಿಗೆ ಸೀಮಿತ. ಈ ಯೋಜನೆಯನ್ನು ಸಂಡೂರು, ಹೊಸಪೇಟೆ ಹಾಗೂ ಬಳ್ಳಾರಿಗೆ ಸೀಮಿತಗೊಳಿಸಬೇಕು ಎಂಬುದು ಫಿಮಿ ನಿಲುವು. ಗಣಿಗಾರಿಕೆಯಿಂದಾಗಿ ಇಡೀ ಜಿಲ್ಲೆ ಹಾನಿಗೊಳಗಾಗಿರುವುದರಿಂದ ಎಲ್ಲ ತಾಲ್ಲೂಕುಗಳಿಗೂ ಅನ್ವಯಿಸಬೇಕು ಎಂಬುದು ಸರ್ಕಾರದ ಪ್ರತಿಪಾದನೆ.

ಸಿಇಪಿಎಂಐಝಡ್‌ನಲ್ಲಿ ತುಮಕೂರು– ದಾವಣಗೆರೆ ಬ್ರಾಡ್‌ಗೇಜ್‌ ಮಾರ್ಗ ಒಳಗೊಂಡಂತೆ ಅನೇಕ ರೈಲ್ವೆ ಯೋಜನೆಗಳೂ ಸೇರಿವೆ. ಇದಕ್ಕೆ 5,271 ಕೋಟಿ ವೆಚ್ಚವಾಗಲಿದೆ. ಫಿಮಿ ಆಕ್ಷೇಪಕ್ಕೆ ಇದೂ ಕಾರಣ. ಬಳ್ಳಾರಿ ಜಿಲ್ಲೆಯ ರೈಲ್ವೆ ಯೋಜನೆಗಳನ್ನು ಹೊರತುಪಡಿಸಿ, ಬೇರೆ ಯೋಜನೆಯನ್ನು ಅದು ಒಪ್ಪುತ್ತಿಲ್ಲ. ತುಮಕೂರು– ದಾವಣಗೆರೆ ಮಾರ್ಗಕ್ಕೆ ಎಸ್‌ಪಿವಿಯಿಂದ ₹ 913 ಕೋಟಿ ಕೊಡಬೇಕೆಂದುಸಿಇಸಿ ತಿಳಿಸಿದೆ.

**

ಎಸ್‌ಪಿವಿ ಶುಲ್ಕ ಮುಂದುವರೆಯಲಿ

‘ಸಿಇಪಿಎಂಐಝಡ್‌ ಯೋಜನೆಗಾಗಿ ಗಣಿ ಉದ್ಯಮಿಗಳಿಂದ ಎಸ್‌ಪಿವಿಗೆ ಸಂಗ್ರಹಿಸುತ್ತಿರುವ ಶುಲ್ಕ ಮುಂದಿನ 10 ವರ್ಷಗಳಿಗೆ ಮುಂದುವರಿಯಬೇಕು. ತಾತ್ಕಾಲಿಕವಾಗಿಯೂ ಅದನ್ನು ಸ್ಥಗಿತಗೊಳಿಸಬಾರದು’ ಎಂದು ಸಿಇಸಿ ಶಿಫಾರಸು ಮಾಡಿದೆ.

‘ಶುಲ್ಕ ಸಂಗ್ರಹ ನಿಲ್ಲಿಸಬೇಕು’ ಎಂಬ ಬೇಡಿಕೆಯನ್ನು ಫಿಮಿ ಇಟ್ಟಿತ್ತು. ಆದರೆ, ‘ಯೋಜನೆಗೆ ಒಟ್ಟಾರೆ ಎಷ್ಟು ಹಣ ಬೇಕಾಗಲಿದೆ ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲದ್ದರಿಂದ ಹಣ ಸಂಗ್ರಹಿಸುವುದನ್ನು ಮುಂದುವರಿಸಬೇಕು’ ಎಂದೂ ಸಿಇಸಿ ಸಲಹೆ ಮಾಡಿದೆ.

ಸರ್ಕಾರದ ಯೋಜನೆ (₹ ಕೋಟಿಗಳಲ್ಲಿ)

ಬಳ್ಳಾರಿ; 13,378;

ಚಿತ್ರದುರ್ಗ; 3792

ತುಮಕೂರು; 2554

ರೈಲ್ವೆ; ₹5,271‌

**

ಫಿಮಿ ಯೋಜನೆ

ಬಳ್ಳಾರಿ:4111

ಚಿತ್ರದುರ್ಗ:2043

ತುಮಕೂರು: 1753

ರೈಲ್ವೆ: 445ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT