ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಸಿಇಟಿ ಪರೀಕ್ಷೆ ಆರಂಭ

ರಾಜ್ಯದಾದ್ಯಂತ 1.94 ಲಕ್ಷ ಅಭ್ಯರ್ಥಿಗಳು * ದ್ವಿತೀಯ ಪಿಯುದಲ್ಲಿ ಫೇಲಾದವರೂ ಪರೀಕ್ಷೆ ಬರೆಯಬಹುದು
Last Updated 28 ಏಪ್ರಿಲ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಬಿ–ಫಾರ್ಮಾ, ನ್ಯಾಚುರೋಪತಿ, ಯೋಗ ಮತ್ತು ಪಶು ವೈದ್ಯಕೀಯ ವಿಜ್ಞಾನ ಕೋರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸೋಮವಾರ(ಏ.29) ಮತ್ತು ಮಂಗಳವಾರ (ಏ.30) ನಡೆಯಲಿದೆ.

ರಾಜ್ಯದ ಒಟ್ಟು 431 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ 1,94,282 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.ಬೆಂಗಳೂರಿನಲ್ಲಿ ಅತಿ ಹೆಚ್ಚು 84 ಪರೀಕ್ಷಾ ಕೇಂದ್ರಗಳಲ್ಲಿ 43,736 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದಾಂಡೆಲಿ ಪರೀಕ್ಷಾ ಕ್ಷೇಂದ್ರದಲ್ಲಿ ಅತಿ ಕಡಿಮೆ 328 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಗಿರೀಶ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಯೋಗ ಮತ್ತು ನ್ಯಾಚುರೋಪತಿ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಕೋರ್ಸ್‌ಗಳಿಗೆ ನೀಟ್‌ ಕಡ್ಡಾಯವಲ್ಲ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಕೋರ್ಸ್‌ನ ಪ್ರವೇಶಕ್ಕೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಿಸಿಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ) ವಿಷಯಗಳಿಗೆ ಹಾಜರಾಗಬೇಕು ಎಂದು ಅವರು ಹೇಳಿದ್ದಾರೆ.

ಎಂಜಿನಿಯರಿಂಗ್‌ಗೆ ಪಿಸಿಎಂ, ಕೃಷಿ ವಿಜ್ಞಾನಗಳ ಕೋರ್ಸ್‌ ಮತ್ತು ಬಿ–ಫಾರ್ಮಾಗೆ ಪಿಸಿಎಂಬಿ ಮತ್ತು ಪಶು ವೈದ್ಯಕೀಯ ಕೋರ್ಸ್‌ಗೆ ಪಿಸಿಬಿ ವಿಷಯಗಳಿಗೆ ಪರೀಕ್ಷೆ ಬರೆಯಬೇಕು.

ಅಭ್ಯರ್ಥಿಗಳಿಗೆ ಸೂಚನೆಗಳು: ಓಎಂಆರ್‌ ಉತ್ತರ ಪತ್ರಿಕೆಯು ಪ್ರತಿಯೊಬ್ಬ ಅಭ್ಯರ್ಥಿಗೂ ನಿರ್ದಿಷ್ಟವಾಗಿರುತ್ತದೆ. ಅಂದರೆ, ಅಭ್ಯರ್ಥಿಗಳಿಗೆ ನೀಡುವ ಓಎಂಆರ್‌ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಯ ಪ್ರವೇಶ ಪತ್ರದ (ಸಿಇಟಿ ಸಂಖ್ಯೆ), ಅಭ್ಯರ್ಥಿಯ ಹೆಸರು ಮತ್ತು ಪ್ರಶ್ನೆ ಪತ್ರಿಕೆಯ ವರ್ಷನ್‌ ಕೋಡ್‌ ಮುದ್ರಿಸಲಾಗಿರುತ್ತದೆ.

ಆದ್ದರಿಂದ, ಅಭ್ಯರ್ಥಿಗಳು ಕೊಠಡಿ ಮೇಲ್ವಿಚಾರಕರು ತಮಗೆ ನೀಡುವ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಸಿಇಟಿ ಸಂಖ್ಯೆ, ಹೆಸರು ಹಾಗೂ ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಸಿಇಟಿ ಸಂಖ್ಯೆ, ಹೆಸರು ಒಂದೇ ರೀತಿ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅಲ್ಲದೆ, ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಯ ವರ್ಷನ್‌ ಕೋಡ್‌ ಒಂದೇ ಆಗಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕು.

ಓಎಂಆರ್‌ ಉತ್ತರ ಪತ್ರಿಕೆಯ ಕೆಳ ಭಾಗದ ನಿಗದಿತ ಜಾಗದಲ್ಲಿ ಅಭ್ಯರ್ಥಿಯು ಪೂರ್ಣ ಸಹಿ ಮಾಡುವುದರ ಜೊತೆಗೆ ಹೆಬ್ಬೆರಳ ಗುರುತನ್ನೂ ಹಾಕಬೇಕು. ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಟೈಮಿಂಗ್‌ ಮಾರ್ಕ್ ತಿದ್ದಬಾರದು ಮತ್ತು ಹಾಳು ಮಾಡಬಾರದು.

ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯುವುದಿಲ್ಲ, ಅಂದರೆ ನೆಗೆಟೀವ್‌ ಮಾರ್ಕ್ಸ್‌ ನೀಡುವ ಪದ್ಧತಿ ಇಲ್ಲ.

ಉತ್ತರ ಪತ್ರಿಕೆ ಸಮಸ್ಯೆಗೆ ಏನು ಮಾಡಬೇಕು: ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ಪುಟಗಳು ಮುದ್ರಿತವಾಗಿಲ್ಲದಿದ್ದರೆ ಅಥವಾಹರಿದು ಹೋಗಿದ್ದರೆ ಅಥವಾಯಾವುದೇ ಪ್ರಶ್ನೆ ಬಿಟ್ಟು ಹೋಗಿದ್ದರೆ ಕೊಠಡಿ ಮೇಲ್ವಿಚಾರಕರಿಂದ ಪ್ರಶ್ನೆ ಪತ್ರಿಕೆಯನ್ನು ಬದಲಿಸಿಕೊಳ್ಳಬಹುದು. ಬಳಿಕ ಓಎಂಆರ್‌ ಉತ್ತರಪತ್ರಿಕೆಯಲ್ಲಿ ಉತ್ತರಿಸಲು ಆರಂಭಿಸಬೇಕು.

ಫೇಲಾದವರೂ ಪರೀಕ್ಷೆ ಬರೆಯುಬಹುದು: ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರೂ ಸಿಇಟಿ ಪರೀಕ್ಷೆ ಬರೆಯಬಹುದು. ಆದರೆ, ಜೂನ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಪೂರಕ ಪರೀಕ್ಷೆಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT