ಸೋಮವಾರ, ಜೂನ್ 14, 2021
26 °C

ಜುಲೈ 30–31ಕ್ಕೆ ಸಿಇಟಿ ಪರೀಕ್ಷೆ: ಸರ್ಕಾರದ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನಿಯರಿಂಗ್ ಸಹಿತ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆಯಲು ಇರುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಜುಲೈ 30 ಮತ್ತು 31ರಂದು ನಡೆಸಲು ಸರ್ಕಾರ ನಿರ್ಧರಿಸಿದೆ.

‘ಜುಲೈ 30ರಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವವಿಜ್ಞಾನ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ, 31ರಂದು ಬೆಳಿಗ್ಗೆ ಭೌತವಿಜ್ಞಾನ, ಮಧ್ಯಾಹ್ನ ರಸಾಯನವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಆಗಸ್ಟ್‌ 1ರಂದು ಬೆಳಿಗ್ಗೆ 11.30ರಿಂದ 12.30ರವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

‘ಈ ಬಾರಿ ಸುಮಾರು 1.92 ಲಕ್ಷ ಮಂದಿ ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ವೇಳೆ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗುವುದು. ಸರ್ಕಾರದ ‘ಗೆಟ್‌ಸೆಟ್‌ಗೊ’ ಆನ್‌ಲೈನ್‌ ಕೋಚಿಂಗ್‌ ಜುಲೈ 31ರವರೆಗೂ ನಡೆಯಲಿದೆ’ ಎಂದರು.

ಶುಲ್ಕ ಹೆಚ್ಚಳಕ್ಕೆ ಬೇಡಿಕೆ: ‘ಎಂಜಿನಿಯರಿಂಗ್ ಕಾಲೇಜುಗಳು ಸಹ ಶುಲ್ಕ ಹೆಚ್ಚಳ ಮಾಡಲು ಬೇಡಿಕೆ ಸಲ್ಲಿಸಿವೆ.  ಆದರೆ ಈ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲ’ ಎಂದು ಸಚಿವರು ತಿಳಿಸಿದರು.

‘ವೈದ್ಯಕೀಯ ಸೀಟುಗಳನ್ನು ಬ್ಲಾಕ್‌ ಮಾಡುವ ದಂಧೆಯನ್ನು ತಡೆಗಟ್ಟುವ ಸಲುವಾಗಿ ಈ ಬಾರಿ ಹೊಸ ಪದ್ಧತಿ ಅನುಸರಿಸಲಾಗುತ್ತದೆ. ಹಳೆಯ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿದೆ. ಅದು ನೀಡಿದ ಶಿಫಾರಸಿನಂತೆ ಕ್ರಮ ಜರುಗಿಸಲಾಗು ವುದು’ ಎಂದು ಹೇಳಿದರು.

ಸೆಪ್ಟೆಂಬರ್‌ನಲ್ಲಿ ಶೈಕ್ಷಣಿಕ ವರ್ಷಾರಂಭ?

‘ಸೆಪ್ಟೆಂಬರ್ ಮೊದಲ ವಾರದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿದೆ’ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು. ‘ನಡೆಯಲು ಬಾಕಿ ಇರುವ ದ್ವಿತೀಯ ಪಿಯುಸಿಯ ಇಂಗ್ಲಿಷ್‌ ಪರೀಕ್ಷೆಯ ದಿನಾಂಕವನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು.‌ ಕೊರೊನಾ ಭೀತಿಯ ಕಾರಣಕ್ಕೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು