5 ಹೊಸ ಇನ್‌ಕ್ಯುಬೇಷನ್‌ ಕೇಂದ್ರ ಸಿದ್ಧ

ಶುಕ್ರವಾರ, ಏಪ್ರಿಲ್ 26, 2019
21 °C
ಸಿಎಫ್‌ಟಿಆರ್‌ಐ: ಎರಡನೇ ಹಂತದಲ್ಲಿ ಕಾರ್ಯಾರಂಭ ಮಾಡಲಿವೆ ಹೆಚ್ಚುವರಿ ಕೇಂದ್ರಗಳು

5 ಹೊಸ ಇನ್‌ಕ್ಯುಬೇಷನ್‌ ಕೇಂದ್ರ ಸಿದ್ಧ

Published:
Updated:
Prajavani

ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಹಾಲಿ 9 ಇನ್‌ಕ್ಯುಬೇಷನ್‌ ಕೇಂದ್ರಗಳಿದ್ದು (ತರಬೇತಿ ಘಟಕ) 2ನೇ ಹಂತದಲ್ಲಿ ಹೆಚ್ಚುವರಿ 5 ಕೇಂದ್ರಗಳು ಸಿದ್ಧಗೊಂಡಿದ್ದು ಕಾರ್ಯಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಸಂಸ್ಥೆಯು ಆಹಾರಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ಮಾತ್ರ ತೊಡಗಿಲ್ಲ. ತನ್ನಲ್ಲಿರುವ ತಂತ್ರಜ್ಞಾನಗಳನ್ನು ಯುವ ಉದ್ಯಮಿಗಳಿಗೆ ನೀಡಿ ಆಹಾರ ಉದ್ದಿಮೆಗಳನ್ನು ಆರಂಭಿಸಲು ಪ್ರೋತ್ಸಾಹವನ್ನೂ ನೀಡುತ್ತಿದೆ. ಸಂಸ್ಥೆ ಇಂತಹ 9 ಕೇಂದ್ರಗಳ ಮೂಲಕ ಈಗಾಗಲೇ ತರಬೇತಿ ನೀಡಿದ್ದು, ದೇಶದ ವಿವಿಧೆಡೆ ಹೊಸ ಉದ್ಯಮಗಳು ತಲೆಯೆತ್ತಿವೆ.

ಈಗ ಹೆಚ್ಚುವರಿ ಇಂತಹ 5 ಕೇಂದ್ರಗಳು ಸಂಸ್ಥೆಯ ಕ್ಯಾಂಪಸ್‌ನಲ್ಲೇ ಆರಂಭವಾಗಿವೆ. ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಆಹಾರ ಸಂರಕ್ಷಣೆ, ರುಚಿ ವರ್ದನೆ ಸೇರಿದಂತೆ ಹಲವು ವಿಭಾಗಗಳಲ್ಲಿ ಯುವ ಉದ್ಯಮಿಗಳಿಗೆ ತರಬೇತಿ ನೀಡಲು ಇಲ್ಲಿ ಅವಕಾಶ ಇದೆ. ಉದ್ಯಮ ಆರಂಭಿಸಲು ಬೇಕಾದ ತಂತ್ರಜ್ಞಾನ, ಉಪಕರಣ ಮಾಹಿತಿ, ಮಾರುಕಟ್ಟೆ ವ್ಯಾಖ್ಯಾನ, ಬೇಡಿಕೆ ವಿಶ್ಲೇಷಣೆಯಂತಹ ಪಾಠಗಳನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ. ಅಲ್ಲದೇ, ಇಂತಹ ಇನ್‌ಕ್ಯುಬೇಷನ್‌ ಕೇಂದ್ರಗಳ ಸ್ಥಾಪನೆಗೆ 41 ಹೊಸ ಅರ್ಜಿ ಬಂದಿವೆ.

₹ 40 ಕೋಟಿ: ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ ಇದುವರೆಗೆ ₹ 40 ಕೋಟಿ ಹಣ ಸಂಸ್ಥೆಗೆ ಸಿಕ್ಕಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿ ಈ ಹಣ ಹರಿದು ಬಂದಿದೆ. ರಿಲಯನ್ಸ್ ಸಂಸ್ಥೆಯೊಂದೇ ₹ 10 ಕೋಟಿ ನೀಡಿದೆ. ಈ ಅನುದಾನವನ್ನು ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ, ವಿವಿಧ ಯಂತ್ರೋಪಕರಣ ಖರೀದಿ, ಮಾನವ ಸಂಪನ್ಮೂಲ ವೃದ್ಧಿಸಲು ಬಳಸಲಾಗುವುದು. ಇನ್‌ಕ್ಯುಬೇಷನ್‌ ಕೇಂದ್ರಗಳನ್ನು ಬಲ‍ಪಡಿಸಿ ಸಂಸ್ಥೆಯ ಆಹಾರ ತಂತ್ರಜ್ಞಾನವು, ಈ ಉದ್ಯಮಗಳ ಮೂಲಕ ಜನಸಾಮಾನ್ಯರಿಗೆ ತಲುಪುವಂತೆ ಮಾಡಲಾಗುವುದು ಎಂದು ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್.ರಾಘವರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜ್ಞಾನಿ ನೇಮಕಾತಿಗೆ ಆದ್ಯತೆ: ಸಂಸ್ಥೆಯಲ್ಲಿ ಈಗ ವಿಜ್ಞಾನಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ದಶಕಗಳ ಹಿಂದೆ 1 ಸಾವಿರ ಸಂಖ್ಯೆಯಲ್ಲಿದ್ದ ವಿಜ್ಞಾನಿಗಳ ಸಂಖ್ಯೆ ಈಗ ಕೇವಲ 500ಕ್ಕೆ ಇಳಿದಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

**

ಕೇಂದ್ರಗಳು ಸಿದ್ಧವಿವೆ. ಚುನಾವಣೆ ಮುಗಿದ ಬಳಿಕ ಉದ್ಘಾಟಿಸಲಾಗುವುದು. ನವ ಉದ್ದಿಮೆದಾರರನ್ನು ಪ್ರೋತ್ಸಾಹಿಸಲಾಗುವುದು.
–ಡಾ.ಕೆ.ಎಸ್‌.ಎಂ.ಎಸ್.ರಾಘವರಾವ್, ನಿರ್ದೇಶಕ, ಸಿಎಫ್‌ಟಿಆರ್‌ಐ

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !