ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆ: ಜನ ಜಾತ್ರೆ

*14 ದಿನಗಳ ಯಾತ್ರೆಗೆ ಚಾಲನೆ * ಮನೆಮನೆಗೂ ಕರಪತ್ರಗಳನ್ನು ಹಂಚಿದ ಕಾರ್ಯಕರ್ತರು
Last Updated 2 ಮಾರ್ಚ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಕೇಸರಿ ಟೋಪಿ, ಕಮಲ ಚಿಹ್ನೆ ಇರುವ ಕೇಸರಿ–ಹಸಿರು ಬಾವುಟಗಳ ಹಾರಾಟ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆಗಳ ಮೊರೆತ. . . ಹಿನ್ನೆಲೆಯಲ್ಲಿ ದೇಶಕ್ಕೆ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ ಎಂಬ ಹಾಡು ಏರು ಧ್ವನಿಯಲ್ಲಿ ರಿಂಗಣಿಸುತ್ತಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಗೂಂಡಾರಾಜ್ಯದಿಂದ ‘ಬೆಂಗಳೂರು ರಕ್ಷಿಸಿ’ ಎಂಬ ಆಗ್ರಹದಡಿ ಬಿಜೆಪಿ ಶುಕ್ರವಾರದಿಂದ ಆರಂಭಿಸಿರುವ ಪಾದಯಾತ್ರೆಯ ನೋಟ ಇದು.

ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ಪ್ರಕಾಶ್ ಜಾವಡೇಕರ್‌, ಶಾಸಕರಾದ ಆರ್. ಅಶೋಕ್‌, ಎಸ್. ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ನೇತೃತ್ವದಲ್ಲಿ 14 ದಿನಗಳ ಯಾತ್ರೆಗೆ ಶಂಖ, ಕಹಳೆ ಊದುವ ಮೂಲಕ ಚಾಲನೆ ನೀಡಲಾಯಿತು.

ಬಸವನ ಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಆರಂಭಿಕ ಪೂಜೆ ಸಲ್ಲಿಸಿದ ನಾಯಕರು, ಅಲ್ಲಿಂದ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಪೂಜೆ ಸಲ್ಲಿಸಿದರು. ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪಾದಯಾತ್ರೆ ಆರಂಭವಾಯಿತು. 9.45ಕ್ಕೆ ಕಾಲ್ನಡಿಗೆಯಲ್ಲಿ ಹೊರಟ ನಾಯಕರ ದಂಡಿಗೆ, ಕಾರ್ಯಕರ್ತರ ಗಡಣವೇ ಜತೆಯಾಯಿತು. ಕಲಾತಂಡಗಳು ಯಾತ್ರೆಗೆ  ಮೆರಗು ನೀಡಿದ್ದವು. ಬಸವನ ಗುಡಿ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಾಗಿತು.

ಸಂಜೆ 4ಗಂಟೆಯಿಂದ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಸಿದ ಬಿಜೆಪಿ ನಾಯಕರು, ಈ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ನಡೆಸಿದ ಭೀಕರ ಹಲ್ಲೆಯನ್ನು ಖಂಡಿಸಿದರು. ವಿದ್ವತ್‌ ಮೇಲೆ ಹಲ್ಲೆ ನಡೆದ ಯು.ಬಿ. ಸಿಟಿ ಸಮೀಪದಿಂದ ಆರಂಭವಾದ ಕಾಲ್ನಡಿಗೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಮುನ್ನಡೆಯಿತು.

‘ಬೆಂಗಳೂರಿನ ಜನರಿಗೆ ಲೆಕ್ಕಕೊಡಿ’ ಎಂದು ಆಗ್ರಹಿಸಿರುವ ಕರಪತ್ರಗಳನ್ನು ಕಾರ್ಯಕರ್ತರು ಮನೆಮನೆಗೂ ಹಂಚಿದರು.‌

ಬುರುಡೆ ಬಿಡುವುದು ಬಿಜೆಪಿಯ ಕೆಲಸ: ದಿನೇಶ್‌ ಗುಂಡೂರಾವ್‌
‘ಬುರುಡೆ ಬಿಡುವುದು ಬಿಜೆಪಿಯವರ ಕೆಲಸ. ಹಿಂದೆ ಹವ್ಯಾಸವಾಗಿತ್ತು. ಈಗ ಅದು ಅಭ್ಯಾಸವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಲೇವಡಿ ಮಾಡಿದರು.

‘ಬಿಜೆಪಿ ನಾಯಕರು ತಮ್ಮ ಅಧಿಕಾರ ಅವಧಿಯಲ್ಲಿ ನಡೆಸಿದ ಭ್ರಷ್ಟಚಾರಗಳನ್ನು ಮರೆತಿದ್ದಾರೆ. ಆ ಪಕ್ಷದ ನಾಯಕ ಆರ್‌. ಅಶೋಕ ಅಧ್ಯಕ್ಷರಾಗಿದ್ದ ಸಮಿತಿ ಅಕ್ರಮವಾಗಿ ಸಕ್ರಮಗೊಳಿಸಿದ ಎರಡು ಸಾವಿರ ಎಕರೆ ಭೂಮಿ ಕುರಿತ ತನಿಖೆ ನಡೆಯುತ್ತಿದೆ. ಕೆಐಎಡಿಬಿ ಭೂ ಹಗರಣದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅವರ ಮಗ ಜೈಲಿಗೆ ಹೋಗಿದ್ದರು. ಕೃಷ್ಣಯ್ಯ ಶೆಟ್ಟಿ ಕೂಡ ಭೂ ಹಗರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಯಡಿಯೂರಪ್ಪ ವಿರುದ್ಧ ಡಿನೋಟಿಫೈ ಪ್ರಕರಣದ ತನಿಖೆ ನಡೆಯುತ್ತಿದೆ. ಇಷ್ಟಿದ್ದರೂ ಭ್ರಷ್ಟಾಚಾರದ ಬಗ್ಗೆ ‌ಅವರು ಮಾತನಾಡುತ್ತಿದ್ದಾರೆ’ ಎಂದು
ವ್ಯಂಗ್ಯವಾಡಿದರು.

‘ಬಿಜೆಪಿ ಅವಧಿಯಲ್ಲಿ ಮಿಡ್‌ನೈಟ್ ಟೆಂಡರ್‌, ಕಡತಗಳನ್ನು ಸುಡುವ ಕೆಲಸಗಳು ನಡೆದಿವೆ. ಬೆಂಗಳೂರು ಹಾಳು ಮಾಡಿದ ಬಿಜೆಪಿಗೆ ಲೆಕ್ಕ ಕೇಳುವ ನೈತಿಕತೆ ಇಲ್ಲ. ಆದರೂ ನಾವು ಲೆಕ್ಕ ಕೊಡಲು ಸಿದ್ಧ’ ಎಂದರು.

‘ಬೆಂಗಳೂರನ್ನು ಬಿಜೆಪಿಯವರು ಗಾರ್ಬೇಜ್ ಸಿಟಿ ಮಾಡಿದರು. ನಾವು ಏನು ಸಾಧನೆ ಮಾಡಿದ್ದೇವೆ ಎನ್ನುವ ಕುರಿತು ನಾವೂ ಕಿರುಪುಸ್ತಕ ಬಿಡುಗಡೆ ಮಾಡುತ್ತೇವೆ’ ಎಂದರು.

‘ಯುಪಿಎ ಸರ್ಕಾರ ಬೆಂಗಳೂರನ್ನು ಅಭಿವೃದ್ಧಿಪಡಿಸಿದೆ. ಅದನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ಧ ಇಲ್ಲ. ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ನಗರಗಳಿಗೆ ವಾರ್ಷಿಕ ಕೇವಲ ₹ 100 ಕೋಟಿ ಮಾತ್ರ ಕೇಂದ್ರ ಸರ್ಕಾರ ನೀಡುತ್ತಿದೆ. ಈ ಹಣದಿಂದ ನಗರದ ಸಮಗ್ರ ಅಭಿವೃದ್ಧಿ  ಸಾಧ್ಯವೇ’ ಎಂದೂ ಅವರು ಪ್ರಶ್ನಿಸಿದರು.

ಪಾದಯಾತ್ರೆ: ಜನರ ಪಡಿಪಾಟಲು
ಬಿಜೆಪಿ ಪಾದಯಾತ್ರೆ ಸಾಗಿದ ಮಾರ್ಗಗಳಲ್ಲಿ ವಾಹನ ಸವಾರರು ಪರದಾಡಬೇಕಾಯಿತು. ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಬೆಳಿಗ್ಗೆ 9.30ಕ್ಕೆ ನಿಗದಿಯಾಗಿತ್ತು. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನದ ಸಮೀಪ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಮೂವರು ಕೇಂದ್ರ ಸಚಿವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ಅವರ ಚಲವಲನದಿಂದಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬೆಳಿಗ್ಗೆಯೇ ಕೆಲಸಕ್ಕೆ ಹೋಗುವವರು, ಶಾಲಾ–ಕಾಲೇಜುಗಳಿಗೆ ತೆರಳುವವರು ಇದರಿಂದ ತೊಂದರೆ ಅನುಭವಿಸಬೇಕಾಯಿತು. ಬಸವನಗುಡಿ, ಎನ್.ಆರ್. ಕಾಲೊನಿಗಳಲ್ಲಿ ಪಾದಯಾತ್ರೆ ಸಾಗಿದ್ದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಬೇರೆ ಮಾರ್ಗಗಳನ್ನು ಬಳಸಿ ಓಡಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಸಂಜೆ ಯು.ಬಿ. ಸಿಟಿಯಿಂದ ಹೊರಟ ಪಾದಯಾತ್ರೆ ಕಸ್ತೂರಬಾ ರಸ್ತೆ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಚಲಿಸಿದ್ದರಿಂದಾಗಿ ಈ ಭಾಗದಲ್ಲೂ ಜನರು ಕಿರುಕುಳ ಅನುಭವಿಸಿದರು. ಅರ್ಧಗಂಟೆಗೂ ಹೆಚ್ಚು ಹೊತ್ತು ವಾಹನಗಳು ಕಾದು ನಿಲ್ಲಬೇಕಾಯಿತು.

ಚುನಾವಣೆ ಮುಂದೂಡಲು ಯತ್ನ: ಜಾರ್ಜ್‌
ಸೋಲಿನ ಭೀತಿಯಲ್ಲಿರುವ ಬಿಜೆಪಿ ವಿಧಾನಸಭಾ ಚುನಾವಣೆಯನ್ನು ಮುಂದೂಡಲು ಯತ್ನಿಸುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಆಪಾದಿಸಿದರು.

‘ಚುನಾವಣೆಯಲ್ಲಿ ಬಿಜೆಪಿ 55 ಸ್ಥಾನಕ್ಕಿಂತ ಹೆಚ್ಚು ಗೆಲ್ಲುವುದಿಲ್ಲ.ನಮ್ಮ ಸರ್ಕಾರದ ಅವಧಿ ಮುಗಿಯುತ್ತಿದ್ದಂತೆ ರಾಷ್ಟ್ರಪತಿ ಆಳ್ವಿಕೆ ಹೇರುವ ಸನ್ನಾಹ ನಡೆಯುತ್ತಿದೆ. ರಾಜಸ್ಥಾನ‌, ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆ ಮತ್ತು ಮುಂಬರುವ ಲೋಕಸಭಾ ಚುನಾವಣೆಗಳ ಜತೆ ಕರ್ನಾಟಕದಲ್ಲಿ ಚುನಾವಣೆ ನಡೆಸಲು ತಂತ್ರ ಹೆಣೆಯುತ್ತಿದ್ದಾರೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ದೂರಿದರು.

*


ಬಿಜೆಪಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಿಂದ ಎಂ.ಜಿ.ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು – ಪ್ರಜಾವಾಣಿ ವಾರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT