ಮಂಗಳವಾರ, ಆಗಸ್ಟ್ 3, 2021
21 °C
ಕುಕ್ಕೆ ಸುಬ್ರಹ್ಮಣ್ಯ ಬಂದ್‌ ಯಶಸ್ಸಿಗೆ ಸಹಕಾರ: ಅಭಿನಂದನಾ ಸಭೆ

ಚೈತ್ರಾ ಹಿಂದೂ ನಾಯಕಿ ಎನ್ನಲು ಅಸಮರ್ಥೆ: ಧರ್ಮಪ್ರಚಾರಕ ಲಕ್ಷ್ಮೀಶ ಗಬಲಡ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸುಬ್ರಹ್ಮಣ್ಯ: ಪಾಪ ವಿಮೋಚನಾ ಕ್ಷೇತ್ರದ ಬಗ್ಗೆ ಅರಿಯದೆ, ಆಚರಿಸಿಕೊಂಡು ಬಂದಿರುವ ಪದ್ಧತಿ ಬಗ್ಗೆ ತಿಳಿವಳಿಕೆ ಇಲ್ಲದೆ ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡಿರುವ ಚೈತ್ರಾ ಕುಂದಾಪುರ ಹಿಂದೂ ನಾಯಕಿ ಎಂದು ಕರೆಸಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಧರ್ಮಪ್ರಚಾರಕ ಲಕ್ಷ್ಮೀಶ ಗಬಲಡ್ಕ ಹೇಳಿದರು.

ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಅವರ ಮೇಲೆ ಚೈತ್ರಾ ಕುಂದಾಪುರ ಹಾಗೂ ಅವರ ಬೆಂಬಲಿಗರು ನಡೆಸಿದ ಹಲ್ಲೆ ಖಂಡಿಸಿ ಗುರುವಾರ ವರ್ತಕರು ನೀಡಿದ್ದ ಕರೆ ಬಂದ್ ಅಭೂತ ಪೂರ್ವ ಯಶಸ್ಸಿಗೆ ಸಹಕರಿಸಿದ ಸುಬ್ರಹ್ಮಣ್ಯದ ವರ್ತಕರು ಹಾಗೂ ಪರಿಸರದ ನಾಗರಿಕರಿಗೆ ಅಭಿನಂದನೆ ಸಭೆ ಹಾಗೂ ಚೈತ್ರಾ ಕುಂದಾಪುರ ವಿರುದ್ಧ ನಡೆದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.

ಕಿಶೋರು ಶಿರಾಡಿ ಮಾತನಾಡಿ, ಹಿಂದೂ ನಾಯಕ ಎನಿಸಿದವರು ಹಿಂದೂಗಳನ್ನು ಒಗ್ಗುಡಿಸುವ ಕೆಲಸ ಮಾಡಬೇಕಿತ್ತು, ಚೈತ್ರಾ ಅವರು ಹಿಂದೂಗಳನ್ನು ಒಗ್ಗೂಡಿಸುವ ಬದಲು ವಿಂಗಡಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ಘಟನೆ ಗಂಭೀರ ಸ್ಥಿತಿ ತಲುಪಿದ್ದರೂ ಹಿರಿಯ ಹಿಂದೂ ಮುಖಂಡರ ಮೌನವಾಗಿರುವುದರ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೂ ಕಾರ್ಯಕರ್ತರು ನಡು ಬೀದಿಯಲ್ಲಿ ಹೊಡೆದಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಿಳಿಗೊಳಿಸುವ ಪ್ರಯತ್ನಕ್ಕೆ ಮುತ್ಸದ್ದಿ ಹಿಂದೂ ನಾಯಕರು ಮುಂದಾಗಬೇಕು. ಧಾರ್ಮಿಕ ಕ್ಷೇತ್ರದಲ್ಲಿ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಇಲ್ಲಿನ ಯುವಕರು ಸಂಸ್ಕೃತಿಗೆ ಬೆಲೆ ನೀಡಿ ಸುಮ್ಮನಾಗಿದ್ದರು. ಇದು ಇಲ್ಲಿನ ಯುವಕರ ತಾಳ್ಮೆ ಮತ್ತು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲ ರಂಗಯ್ಯ ಹೇಳಿದರು.

ಸತೀಶ್ ಕೂಜುಗೋಡು ಮತ್ತು ರಾಜೇಶ್ ಎನ್ ಎಸ್ ಮಾತನಾಡಿ, ‘ಹೊರಗಿನಿಂದ ಬಂದು ದೌರ್ಜನ್ಯ ಎಸಗಲು ಸಹಕಾರ ನೀಡುತ್ತಿರುವ ಸ್ಥಳೀಯ ಕೆಲ ಸ್ಥಾಪಿತ ಹಿತಾಶಕ್ತಿಗಳನ್ನು ಈ ಊರಿನಿಂದ ಹೊರದಬ್ಬುವ ಕೆಲಸ ಆಗಬೇಕಿದೆ’ ಎಂದರು.

ಗ್ರಾ.ಪಂ ಮಾಜಿ ಸದಸ್ಯೆ ಲಕ್ಷ್ಮಿ, ಪಂಚಾಯಿತಿ ಸದಸ್ಯೆ ಹರಿಣಾಕ್ಷಿ ಮಾತನಾಡಿದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ರಾವ್ ಸ್ವಾಗತಿಸಿ, ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ್ ಕಾಮತ್ ವಂದಿಸಿದರು. ಶಿವರಾಮ ರೈ ಕಾರ್ಯಕ್ರಮ ನಿರೂಪಿಸಿದರು.

ಸ್ವಾರ್ಥಕ್ಕೆ ಧರ್ಮ ಬಳಕೆ: ವ್ಯಾಪಕ ಖಂಡನೆ

‘ಧರ್ಮದ ವಿಚಾರವನ್ನು ಸ್ವಾರ್ಥಕ್ಕೆ ಬಳಸುವ ಮೂಲಕ ಹಿಂದೂಗಳ ನಡುವೆ ಸಂಘರ್ಷ ತರಲಾಗುತ್ತಿದೆ. ಅಶಾಂತಿಗೆ ಕಾರಣ ಆಗುತ್ತಿರುವ ಕಾಣದ ಶಕ್ತಿಗಳನ್ನು ಗುರುತಿಸಿ ಊರಿನಿಂದಲೇ ಹೊರ ಹಾಕುವ ಕೆಲಸ ನಡೆದರೆ ಕ್ಷೇತ್ರದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ಸ್ಥಳೀಯ ಮುಖಂಡ ರಾಜೇಶ್ ಎನ್.ಎಸ್. ಹೇಳಿದರು.

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಅವರ ಮೇಲೆ ಚೈತ್ರಾ ಕುಂದಾಪುರ ಹಾಗೂ ಅವರ ಬೆಂಬಲಿಗರು ಬುಧವಾರ ರಾತ್ರಿ ನಡೆಸಿದ ಹಲ್ಲೆ ಖಂಡಿಸಿ ಸುಬ್ರಹ್ಮಣ್ಯದ ವರ್ತಕರು ಗುರುವಾರ ಕರೆ ನೀಡಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಚೈತ್ರಾ ಕುಂದಾಪುರ ಹಾಗೂ ಅವರ ಬೆಂಬಲಿಗರ ದುಂಡಾವರ್ತನೆ ಸಹಿಸಲು ಅಸಾಧ್ಯ. ಧಾರ್ಮಿಕ ಕ್ಷೇತ್ರಕ್ಕೆ ಬಂದು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ತೀವ್ರವಾಗಿ ಹಲ್ಲೆ ಮಾಡಿರುವುದನ್ನು ಖಂಡಿಸಲಾಗುತ್ತದೆ. ಇಂತಹ ಕೃತ್ಯ ಮಾಡಿದವರ ವಿರುದ್ಧ ಪಕ್ಷ ಭೇದ ಮರೆತು ಒಟ್ಟಾಗಿ ಹೋರಾಟ ಮಾಡಬೇಕು. ದೇವಸ್ಥಾನದ ಸೇವೆ ವಿರುದ್ಧವಾಗಿ ಚೈತ್ರಾ ಅವರು ಮಾತನಾಡಿರುವುದು, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿರುವುದರ ಬಗ್ಗೆ ಗುರುಪ್ರಸಾದ್ ಪಂಜ, ಆಶಿತ್ ಕಲ್ಲಾಜೆ ವಿರುದ್ಧ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಬಹುದಿತ್ತು. ಅದನ್ನು ಬಿಟ್ಟು ಹುಡುಗರನ್ನು ಕರೆತಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವರಾಮ ರೈ ಮಾತನಾಡಿ, ಸುಬ್ರಹ್ಮಣ್ಯ ಬಂದ್‌ಗೆ ಕರೆ ನೀಡಿರುವುದು ನರಸಿಂಹ ಮಠದ ಸ್ವಾಮೀಜಿ ವಿರುದ್ಧವಲ್ಲ. ದುಂಡಾವರ್ತನೆ ಹಾಗೂ ಹಲ್ಲೆಯಂತ ಅಮಾನವೀಯ ಕೃತ್ಯ ಮಾಡಿರುವ ಚೈತ್ರಾ ಕುಂದಾಪುರ ಹಾಗೂ ಅವರ ಬೆಂಬಲಿಗರು ಮತ್ತು ಇದಕ್ಕೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಎಂದು ಹೇಳಿದರು.

ವರ್ತಕರು, ಸಂಘ ಸಂಸ್ಥೆಗಳು ಅಲ್ಲದೆ ಕಡಬ, ಗುತ್ತಿಗಾರು, ಹರಿಹರ, ಕೊಲ್ಲಮೊಗ್ರು, ಐನಕಿದು, ಪಂಜ, ಬಳ್ಪ, ಮೊದಲಾದ ಕಡೆಗಳಿಂದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆ 10ಕ್ಕೆ ಪೇಟೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದರು. ಬಂದ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಹೊಟೇಲ್‌ಗಳನ್ನು ಸ್ವಲ್ಪ ತಡವಾಗಿ ಬಂದ್‌ ಮಾಡಲಾಯಿತು.

ವರ್ತಕರು, ಖಾಸಗಿ ವಾಹನ ಹಾಗೂ ಆಟೋ ರಿಕ್ಷಾ ಚಾಲಕ ಮಾಲೀಕರು, ವಿವಿಧ ಸಂಘಟನೆಗಳ ಸದಸ್ಯರು ದೇವಸ್ಥಾನದ ಆದಿಶೇಷ ವಸತಿಗೃಹದ ಬಳಿ ಬೆಳಿಗ್ಗೆ ಜಮಾಯಿಸಿ ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಚೈತ್ರಾ ಕುಂದಾಪುರ ಹಾಗೂ ಅವರ ಬೆಂಬಲಿಗರ ದುಂಡಾವರ್ತನೆ ವಿರುದ್ಧ ಧಿಕ್ಕಾರ ಕೂಗಿದರು.

ಗುರುವಾರದ ಬಂದ್ ಶಾಂತಿಯುತವಾಗಿ ನಡೆಯಿತು. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಭಟನಾಕಾರರು ಸಹಕರಿಸಿದರು. ದೇವಸ್ಥಾನದಿಂದ ಭಕ್ತರಿಗೆ ಬೆಳಿಗ್ಗೆಯಿಂದ ನಿರಂತರ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಭೋಜನ ಸಹಿತ ಎಲ್ಲವೂ ಹಿಂದಿನಂತೆ ಇತ್ತು. ಭಕ್ತರಿಗೆ ಯಾವುದೇ ತೊಂದರೆ ಆಗಲಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳು, ಬ್ಯಾಂಕ್‌ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜನಜೀವನ ಸಹಜವಾಗಿತ್ತು.

ಚೈತ್ರಾ ಕುಂದಾಪುರ ಸೇರಿ 7 ಮಂದಿಗೆ ನ್ಯಾಯಾಂಗ ಬಂಧನ: ಪ್ರತಿದೂರು

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚೈತ್ರಾ ಕುಂದಾಪುರ ಮತ್ತು ಅವರ ಬೆಂಬಲಿಗರ ಮತ್ತು ಸುಳ್ಯ ತಾಲ್ಲೂಕು ಹಿಂದು ಜಾಗರಣಾ ವೇದಿಕೆ ಪ್ರಧಾನ  ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಸಹಚರರ ನಡುವೆ ಬುಧವಾರ ರಾತ್ರಿ ಕುಕ್ಕೆ ಸುಹ್ಮಣ್ಯದಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ (24), ಸುದೀನ್ (29), ಹರೀಶ್ (20) ಹರೀಶ್  (23) ನಿಖಿಲ್ (22) ವಿನಯ್ (23) ಮಣಿಕಂಠ (24) ಅವರನ್ನು ಬಂಧನ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಸುಳ್ಯ ನ್ಯಾಯಧೀಶರ ಮುಂದೆ ಹಾಜರು ಪಡಿಸಿದ್ದು, ಏಳು ಮಂದಿಗೆ ನವೆಂಬರ್‌ 3 ವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ಏಳು ಮಂದಿಯನ್ನು ಮಂಗಳೂರಿನ ಜೈಲಿಗೆ ಕರೆದೊಯ್ಯಲಾಗಿದೆ.

ಚೈತ್ರಾ ಕುಂದಾಪುರ ಮೊಬೈಲ್ ಸಂಭಾಷಣೆ ಬಹಿರಂಗ

ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಅವರ ಮೇಲಿನ ಹಲ್ಲೆಗೆ ಕಾರಣವಾದ ಸುಬ್ರಹ್ಮಣ್ಯದ ಹಿಂದೂ ಕಾರ್ಯಕರ್ತ ಆಶಿತ್ ಪಂಜ ಹಾಗೂ ಭಾಷಣಾಗಾರ್ತಿ ಚೈತ್ರಾ ಕುಂದಾಪುರ ಅವರ ನಡುವಿನ ಮೊಬೈಲ್ ಸಂಭಾಷಣೆಯನ್ನು ಸ್ಥಳೀಯ ಮುಕ್ತ ಟಿವಿ ವರದಿ ಮಾಡಿದೆ.

ಫೇಸ್‌ಬುಕ್ ಕಮೆಂಟ್ ವಿಚಾರವಾಗಿ ಇವರಿಬ್ಬರ ನಡುವೆ ನಡೆದ ವಾಗ್ವಾದ ತಾರಕಕ್ಕೆ ಏರಿರುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಈ ಮೂಲಕ ಸ್ಪಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು