ಮಂಗಳವಾರ, ಆಗಸ್ಟ್ 3, 2021
23 °C

ಚಾಮರಾಜನಗರ: 2ನೇ ಕೋವಿಡ್‌ ಪ್ರಕರಣ, ತಮಿಳುನಾಡಿಗೆ ಹೋಗಿದ್ದ ಚಾಲಕನಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್-19 ಪ್ರಕರಣ ದೃಢಪಟ್ಟಿದೆ. ಗುಂಡ್ಲುಪೇಟೆ ಪಟ್ಟಣದ ಮಹದೇವಪ್ರಸಾದ್ ನಗರದ ನಿವಾಸಿ, ವೃತ್ತಿಯಲ್ಲಿ ಚಾಲಕ ಆಗಿರುವ 39 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ರೋಗಿ ಗುಣಮುಖರಾಗಿ ಮನೆಗೆ ಹೋದ ದಿನವೇ (ಶುಕ್ರವಾರ) ‌ಎರಡನೇ ಪ್ರಕರಣ ವರದಿಯಾಗಿದೆ. 

ಮಿನಿ ಲಾರಿಯ ಚಾಲಕರಾಗಿರುವ ಅವರು ಗುಂಡ್ಲುಪೇಟೆ ತಮಿಳುನಾಡು ನಡುವೆ ಈರುಳ್ಳಿ ಸಾಗಾಟ ಮಾಡುತ್ತಿದ್ದರು. ವಾರದಲ್ಲಿ ಎರಡು ಮೂರು ಬಾರಿ ಹೋಗಿ ಬರುತ್ತಿದ್ದರು. ಜೂನ್ 17ಕ್ಕೆ ತಮಿಳುನಾಡಿನ ಸೇಲಂನಿಂದ ವಾಪಸ್ ಆಗಿದ್ದರು. 18ರಂದು ಕೆಮ್ಮು ಕಾಣಿಸಿಕೊಂಡಿತ್ತು. ವೈದ್ಯರಲ್ಲಿ ತೋರಿಸಿದಾಗ, ಅನುಮಾನಗೊಂಡು ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ ಕೋವಿಡ್-19 ದೃಢಪಟ್ಟಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ವಿವರ ನೀಡಿದರು.

‘ಇದು ಕೆಮ್ಮು, ನೆಗಡಿ, ಶೀತ ಜ್ವರದ ರೋಗ ಲಕ್ಷಣ (ಐಎಲ್‌ಐ) ಪ್ರಕರಣವಾಗಿದ್ದು, 18ಕ್ಕೆ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಸಂಜೆ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ತಕ್ಷಣ ಅವರನ್ನು ನಗರದಲ್ಲಿರುವ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

10 ಮಂದಿ ಪ್ರಾಥಮಿಕ ಸಂಪರ್ಕ: ‘ಅವರ ಮನೆಯಲ್ಲಿ ಪತ್ನಿ ಇದ್ದಾರೆ. ಪಕ್ಕದಲ್ಲೇ ಇದ್ದ ಅವರ ತಾಯಿ ಮನೆಯಲ್ಲಿ ಮೂರು ಮಕ್ಕಳು ಇದ್ದರು. ಇವರು ಐವರ ಜೊತೆ, ಸೋಂಕಿತನ ತಮ್ಮ, ಅವರ ಪತ್ನಿ ಸೇರಿದಂತೆ 10 ಮಂದಿಯನ್ನು ಪ್ರಾಥಮಿಕ ಸಂಪರ್ಕ ಎಂದು ಗುರುತಿಸಲಾಗಿದೆ. 18ರಂದು ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಗೆ ಬರುವುದಕ್ಕೂ ಮೊದಲು ಖಾಸಗಿ ಕ್ಲಿನಿಕ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರ ಗಂಟಲ ದ್ರವವನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು. 

‘ಸೋಂಕಿತ ವ್ಯಕ್ತಿಯ ಮನೆಯ ಇದ್ದ ಬೀದಿಯನ್ನು ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಲಾಗಿದೆ. ಹೊರಗಿನ 100 ಮೀಟರ್‌ ವ್ಯಾಪ್ತಿಯನ್ನು ಬಫರ್‌ ವಲಯ ಎಂದು ಗುರುತಿಸಲಾ‌ಗಿದೆ. ಕಂಟೈನ್‌ಮೆಂಟ್‌ ವಲಯದಲ್ಲಿ 10 ಮನೆಗಳಿವೆ. ಇಲ್ಲಿ ಎಂಟರಿಂದ 10 ದಿನಗಳ ಕಾಲ ಯಾರೂ ಓಡಾಡುವುದಕ್ಕೆ ಅವಕಾಶ ಇಲ್ಲ. ಮನೆಯವರಿಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ನಾವೇ ಪೂರೈಸುತ್ತೇವೆ. ಬಫರ್‌ ವಲಯದಲ್ಲಿ ಎಲ್ಲ ಚಟುವಟಿಕೆಗಳನ್ನು ಮಾಡಬಹುದು’ ಎಂದು ಹೇಳಿದರು. 

‘ಕಂಟೈನ್‌ವಲಯದಲ್ಲಿರುವ ಪ್ರತಿಯೊಬ್ಬರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 60 ವರ್ಷಕ್ಕಿಂತ ಮೇಲಿನವರನ್ನು ಗುರುತಿಸಲಾಗುತ್ತಿದೆ. ಸೋಂಕಿತ ಚಾಲಕನ ಪ್ರಯಾಣದ ಇತಿಹಾಸವನ್ನೂ ಸಂಗ್ರಹಿಸಲಾಗುತ್ತಿದೆ. ಒಂದು ಅಂಗಡಿಯಲ್ಲಿ ಚಹ ಕುಡಿದಿರುವುದಾಗಿ ಹೇಳಿದ್ದಾರೆ. ಆ ಅಂಗಡಿಯ ಮಾಲೀಕನನ್ನು ಕ್ವಾರಂಟೈನ್‌ ಮಾಡಬೇಕಾಗುತ್ತದೆ’ ಎಂದರು. 

‘ಬಫರ್‌ ವಲಯದಲ್ಲಿರುವವರು ಆತಂಕ ಪಡಬೇಕಾಗಿಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಜಿಲ್ಲೆಯ ಸಾರ್ವಜನಿಕರು ಕೂಡ ಜಾಗರೂಕರಾಗಿರಬೇಕು. ಹೊರ ರಾಜ್ಯಗಳಿಂದ ಬಂದವರು ಮತ್ತು ಹೊರ ರಾಜ್ಯಗಳಿಗೆ ಹೋಗಿಬರುವವರಿಂದ ಆದಷ್ಟೂ ದೂರ ಇರುವುದು ಒಳ್ಳೆಯದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮನವಿ ಮಾಡಿದರು.

‘ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಲಾಕ್‌ಡೌನ್‌ ನಿಯಮಗಳೆಲ್ಲ ಸಡಿಲಿಕೆ ಆದ ಬಳಿಕ, ಜನರ ಓಡಾಟ ಹೆಚ್ಚಾಗಿರುವುದರಿಂದ ಸೋಂಕು ಕಂಡು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಾವು ಮಾನಸಿಕವಾಗಿ ಸಜ್ಜುಗೊಂಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು