ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊತ್ತಿ ಉರಿದ ಚಾಮುಂಡಿಬೆಟ್ಟ; ನಿಯಂತ್ರಣಕ್ಕೆ ಬಾರದ ಬೆಂಕಿ

ನೂರಾರು ಎಕರೆಯಷ್ಟು ಪ್ರದೇಶ ಅಗ್ನಿಗಾಹುತಿ
Last Updated 8 ಮಾರ್ಚ್ 2019, 17:35 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಗವಿಮಠದ ಸಮೀಪ ಕುರುಚಲು ಕಾಡಿಗೆ ಶುಕ್ರವಾರ ಬೆಂಕಿ ಬಿದ್ದಿದ್ದು, 100ಕ್ಕೂ ಅಧಿಕ ಎಕರೆ ಪ್ರದೇಶದ ಕಾಡು ನಾಶವಾಗಿದೆ.

ದುರ್ಗಮ ಪ್ರದೇಶದಲ್ಲಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕಪಡೆ, ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದು, ರಾತ್ರಿಯವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ತಪ್ಪಲಿನಲ್ಲಿರುವ ಮನೆಗಳಿಗೆ ಆತಂಕ ಎದುರಾಗಿದೆ.

ಸಂಜೆ 4 ಗಂಟೆ ಹೊತ್ತಿಗೆ ದಟ್ಟವಾದ ಹೊಗೆ ನಂಜನಗೂಡು ರಸ್ತೆಗೆ ಹೊಂದಿಕೊಂಡ ಚಾಮುಂಡಿಬೆಟ್ಟದ ಭಾಗದಲ್ಲಿ ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಯು ಬೆಟ್ಟಕ್ಕೆ ವ್ಯಾಪಿಸಿತು. ಬೀಸುತ್ತಿದ್ದ ಗಾಳಿಯು ಬೆಂಕಿಯ ಕಿಡಿಗಳನ್ನು ದೂರಕ್ಕೆ ಹೊತ್ತೊಯ್ದು ಇಡೀ ಕಾಡೇ ಧಗಧಗಿಸುವಂತೆ ಭಾಸವಾಯಿತು.

ಅಗ್ನಿಶಾಮಕಪಡೆಯ 4 ವಾಹನಗಳು ಬೆಟ್ಟದ ಪಾದದ ಬಳಿ ಬೆಂಕಿ ನಂದಿಸಿದವು. ಆದರೆ, ವಾಹನಗಳು ತಲುಪಲಾಗದಷ್ಟು ದುರ್ಗಮ ಪ್ರದೇಶದಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲಾಗಲಿಲ್ಲ. 100ಕ್ಕೂ ಅಧಿಕ ಸಿಬ್ಬಂದಿ ಬೆಟ್ಟವೇರಿ ಸೊಪ್ಪು, ಇತರ ಸಾಧನಗಳಿಂದ ನಂದಿಸುವ ಪ್ರಯತ್ನ ಮಾಡಿದರು.

ದಟ್ಟವಾದ ಹೊಗೆ ಬೆಟ್ಟದಿಂದ ಹೊಮ್ಮುತ್ತಿರುವುದು ಬಹುದೂರದವರೆಗೂ ಕಾಣಿಸುತಿತ್ತು. ಪಕ್ಷಿ ಮರಿಗಳು, ಮೊಟ್ಟೆಗಳು, ಕಪ್ಪೆ, ಮುಂಗುಸಿ, ಹಾವು ಮೊದಲಾದ ಸರಿಸೃಪಗಳು ಸುಟ್ಟು ಕರಕಲಾದವು. ಬೆಟ್ಟದಲ್ಲಿ ನಾಲ್ಕೈದು ಚಿರತೆಗಳಿದ್ದು, ಅವು ನಗರಕ್ಕೆ ಬರುವ ಆತಂಕ ಎದುರಾಗಿದೆ.‌

ಶವ ಪತ್ತೆ: ವ್ಯಕ್ತಿಯೊಬ್ಬರ ಶವ ಬೆಂಕಿಯಲ್ಲಿ ಬೇಯುತ್ತಿರುವುದು ಪತ್ತೆಯಾಯಿತು. ಇದರಿಂದ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿತು. ಬೆಂಕಿ ನಂದಿಸುತ್ತಿದ್ದವರ ಪೈಕಿ ಯಾರೊ ಒಬ್ಬರು ಬೆಂಕಿಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಮೊದಲಿಗೆ ಭಾವಿಸಲಾಯಿತು. ಶವದ ಸುತ್ತಲೂ ಕುರುಚಲು ಗಿಡಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿ ಪರಿಶೀಲಿಸಿದಾಗ ಅದು ಮಹಿಳೆಯೊಬ್ಬರ ಕೊಳೆತ ಶವ ಎಂಬುದು ಗೊತ್ತಾಯಿತು.

‘ಮೊದಲೇ ಮೃತಪಟ್ಟಿದ್ದು, ಶವ ಕೊಳೆತಿದ್ದು, ಈಗ ಬೆಂಕಿ ಹೊತ್ತಿಕೊಂಡಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಕ್ಕಿರುವ ಶವ ಅರಣ್ಯ ಇಲಾಖೆ ಸಿಬ್ಬಂದಿಯದಲ್ಲ. ಬೆಂಕಿ ಆರಿಸುವಾಗ ಯಾರೂ ಮೃತಪಟ್ಟಿಲ್ಲ’ ಎಂದು ಡಿಸಿಎಫ್ ಡಾ.ಪ್ರಶಾಂತ್ ಖಚಿತಪಡಿಸಿದ್ದಾರೆ.

ಸಿಬ್ಬಂದಿಗೆ ಗಾಯ

ಹಳೇಬೀಡು: ಇಲ್ಲಿನ ಕಲ್ಲಳ್ಳಿ ಅರಣ್ಯ ಪ್ರದೇಶಕ್ಕೆ ಶುಕ್ರವಾರ ಆಕಸ್ಮಿಕವಾಗಿ ತಗುಲಿದ್ದ ಬೆಂಕಿಯನ್ನು ನಂದಿಸುವ ಸಂದರ್ಭದಲ್ಲಿ ಅರಣ್ಯ ರಕ್ಷಕ ಬಿ.ವಿ.ನಾಗರಾಜು (49) ಅವರ ಎರಡು ಕೈಗಳಿಗೆ ಸುಟ್ಟ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT