ಬುಧವಾರ, ನವೆಂಬರ್ 13, 2019
28 °C
ಕಾರಣಗಳ ಪತ್ತೆಗೆ ತಾಂತ್ರಿಕ ಪರಿಶೀಲನಾ ಸಮಿತಿ ರಚನೆ

ಚಂದ್ರಯಾನ –2 | ಇನ್ನೂ ಸಂಪರ್ಕಕ್ಕೆ ಸಿಗದ ಲ್ಯಾಂಡರ್‌ ‘ವಿಕ್ರಮ್’

Published:
Updated:
Prajavani

ಬೆಂಗಳೂರು: ಚಂದ್ರನ ನೆಲದ ಮೇಲೆ ಇಳಿಯದೇ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ  ಲ್ಯಾಂಡರ್‌ ‘ವಿಕ್ರಮ್’ ಜತೆ ಸಂಪರ್ಕ ಪಡೆಯಲು ಇಸ್ರೊ ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶನಿವಾರ ಮುಂಜಾನೆ 1.55ಕ್ಕೆ ನಿಗದಿ ಮಾಡಿದ್ದ ಸಮಯದಲ್ಲಿ ಇಳಿಯಬೇಕಿತ್ತು. ಆದರೆ, ಕೆಲವೇ ಸೆಕೆಂಡುಗಳಿದ್ದಾಗ ಮಾಸ್ಟರ್‌ ಕಂಟ್ರೋಲ್‌ನ ಸಂಪರ್ಕ ಕಡಿದುಕೊಳ್ಳಲು ಕಾರಣ ಮತ್ತು ಅದರ ಈಗಿನ ಸ್ಥಿತಿಗತಿಯ ಬಗ್ಗೆ ಪತ್ತೆ ಮಾಡಲು ಇಸ್ರೊ ಪರಿಶೀಲನಾ ಸಮಿತಿಯೊಂದನ್ನು ರಚಿಸಲಿದೆ.

‘ವಿಕ್ರಮ್‌’ಗೆ ಏನಾಗಿದೆ; ಸುರಕ್ಷಿತವಾಗಿ ಚಂದ್ರನ ನೆಲ ಸ್ಪರ್ಶ ಮಾಡಿತೇ ಅಥವಾ ಬಿದ್ದು ಹೋಯಿತೆ ಎಂಬ ಮಾಹಿತಿ ಇಸ್ರೊಗೆ ಇನ್ನೂ ಸಿಕ್ಕಿಲ್ಲ. ತಾಂತ್ರಿಕ ಪರಿಣಿತರ ಪರಿಶೀಲನಾ ಸಮಿತಿ ಮಾತ್ರ ನೈಜ ಕಾರಣಗಳನ್ನು ಪತ್ತೆ ಮಾಡಲು ಸಾಧ್ಯ. ‘ವಿಕ್ರಮ್‌’ ಸ್ಥಿತಿಯನ್ನು ಆ ಸಮಿತಿಯೇ ನಿರ್ಧರಿಸಲಿದೆ. ಬಳಿಕ ಅಧಿಕೃತ ಪ್ರಕಟಣೆ ನೀಡಲಿದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.

‘ವಿಕ್ರಮ್‌’ ಅನ್ನು ದಕ್ಷಿಣ ಧ್ರುವಕ್ಕೆ ಇಳಿಸಿದ ಆರ್ಬಿಟರ್‌ ಚಂದ್ರನ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ. ಇದು ಅತ್ಯಂತ ಸುಸ್ಥಿತಿಯಲ್ಲಿದ್ದು, ಚಂದ್ರಯಾನ–1 ಕಳುಹಿಸಿದ ಚಿತ್ರಗಳಿಗಿಂತ ಹೆಚ್ಚಿನ ರೆಸಲ್ಯುಷನ್‌ ಹೊಂದಿರುವ ಚಿತ್ರಗಳನ್ನು ಕಳುಹಿಸಲಿದೆ. ಅಲ್ಲದೆ, ದಕ್ಷಿಣ ಧ್ರುವದ ಸಾಕಷ್ಟು ವೈಜ್ಞಾನಿಕ ಅಂಶಗಳನ್ನು ಅಧ್ಯಯನ ನಡೆಸಿ ಮಾಹಿತಿ ಕಳಿಸಲಿದೆ. ಈ ಯಾನದ ಒಟ್ಟು ಉದ್ದೇಶದಲ್ಲಿ ಶೇ 5 ರಷ್ಟು ಹಿನ್ನಡೆ ಆಗಿದೆ. ಒಂದು ವೇಳೆ ‘ವಿಕ್ರಮ್‌’ ಮತ್ತು ‘ಪ್ರಜ್ಞಾನ್‌’ ನಷ್ಟಗೊಂಡಿದ್ದರೆ, ಅವುಗಳು ಮಾಡಬೇಕಾಗಿದ್ದ ಕೆಲಸ ಅಪೂರ್ಣ. ಉಳಿದ ಶೇ95ರಷ್ಟು ಕೆಲಸವನ್ನು ಆರ್ಬಿಟರ್‌ ಮಾಡುತ್ತದೆ. ಇದು ಒಂದು ವರ್ಷ ಕಾರ್ಯ ನಿರ್ವಹಿಸುತ್ತದೆ ಎಂದು ಇಸ್ರೊ ಮೂಲಗಳು ಹೇಳಿವೆ.

‘ವಿಕ್ರಮ್‌’ ಮತ್ತೆ ಸಕ್ರಿಯವಾಗಬಲ್ಲದೆ?: ನಿಗದಿತ ಪಥ ಬಿಟ್ಟು ಚಲಿಸಿದ ಬಳಿಕ ‘ವಿಕ್ರಮ್‌’ ಸಂಪರ್ಕ ಕಡಿದುಕೊಂಡಿತು. ಭೂಮಿಯಿಂದ 3,84,400 ಕಿ.ಮೀ ದೂರ ಪ್ರಯಾಣ ಮಾಡಿ ಚಂದ್ರನ ನೆಲದಿಂದ ಕೇವಲ 2.1 ಕಿ.ಮೀ ದೂರದಲ್ಲಿ ಇದ್ದಾಗ ಇದು ಯಾವ ಕಾರಣಕ್ಕೆ ಸಂಪರ್ಕ ಕಡಿತಗೊಂಡಿತು. ‘ವಿಕ್ರಮ್‌’ನಿಂದ ಯಾವುದಾದರೂ ಒಂದು ಸಂದೇಶ ಬರಬಹುದೇ ಎಂಬ ನಿರೀಕ್ಷೆಯಲ್ಲಿ ಇಸ್ರೊ ವಿಜ್ಞಾನಿಗಳಿದ್ದಾರೆ.

ಈ ಹಿಂದೆ ಮಂಗಳಯಾನ–1 ಸಂದರ್ಭವೂ ಬಾಹ್ಯಾಕಾಶ ನೌಕೆ ಮಂಗಳ ಕಕ್ಷೆಗೆ ಸೇರುತ್ತಿದ್ದಂತೆ ಭೂ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡಿತ್ತು. ನೌಕೆ ಬಿದ್ದು ಹೋಗಿರಬಹುದು ಎಂಬ ಸಂಶಯ ಉದ್ಭವಿಸಿತ್ತು. ಆದರೆ, ಎರಡು ದಿನಗಳ ಬಳಿಕ ಸಂಪರ್ಕ ಸಿಕ್ಕಿತು. ‘ವಿಕ್ರಮ್‌’ ವಿಚಾರದಲ್ಲೂ ಆ ರೀತಿ ಆಗಬಹುದೇ ಎಂಬ ಸಣ್ಣ ವಿಶ್ವಾಸ ವಿಜ್ಞಾನಿಗಳಲ್ಲಿ ಇದೆ.

ಈ ಯಾನದ ಸಾಕಷ್ಟು ಪ್ರಕ್ರಿಯೆಗಳಲ್ಲಿ ರೋಬಾಟಿಕ್ಸ್‌, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌(ಎಐ) ಮತ್ತು ಐಓಟಿ(ಇಂಟರ್‌ನೆಟ್‌ ಆಫ್ ಥಿಂಗ್‌) ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಯಾವ ಹಂತದಲ್ಲಿ ಎಡವಟ್ಟಾಗಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆರ್ಬಿಟರ್‌ ತನ್ನ ಒಂದು ವರ್ಷದ ಕಾಲಾವಧಿಯಲ್ಲಿ ಯಾವುದೇ ಸಂದರ್ಭದಲ್ಲಾದರೂ ‘ವಿಕ್ರಮ್‌’ ಚಿತ್ರವನ್ನು ಸೆರೆ ಹಿಡಿಯಲೂಬಹುದು. ಅದರಿಂದಲೂ ‘ವಿಕ್ರಮ್‌’ ಸ್ಥಿತಿ ಗೊತ್ತಾಗಬಹುದು.

ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂದರೆ, ₹978 ಕೋಟಿಯಲ್ಲಿ ಚಂದ್ರಯಾನ–2 ಯೋಜನೆ ಕೈಗೊಳ್ಳಲಾಗಿತ್ತು. ಅಮೆರಿಕ, ರಷ್ಯಾ, ಚೀನಾ, ಯುರೋಪ್, ಜಪಾನ್‌ ದೇಶಗಳಿಗೆ ಹೋಲಿಸಿದರೆ ಇಸ್ರೊ ಕಡಿಮೆ ವೆಚ್ಚದಲ್ಲಿ ಎಲ್ಲ ಯೋಜನೆಗಳನ್ನು ಕೈಗೊಂಡಿದೆ. 

‘ಯಾರೂ ಕೈಹಾಕದ ಸಾಹಸ’

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸುವ ಕಾರ್ಯಕ್ಕೆ ಈವರೆಗೆ ಯಾವ ದೇಶವೂ ಕೈಹಾಕಿರಲಿಲ್ಲ. ಅಲ್ಲಿ ಬಹುತೇಕ ಭಾಗ ಸೂರ್ಯನ ಕಿರಣ ಸ್ಪರ್ಶ ಅತಿ ಕಡಿಮೆ. ಕತ್ತಲಿನ ವಾತಾವರಣ ಇರುತ್ತದೆ. ಇಲ್ಲಿ ಸೌರಮಂಡಲದ ಉಗಮ, ನೀರಿನ ಇರುವಿಕೆ, ರಾಸಾಯನಿಕಗಳ ಅಂಶವನ್ನು ಪತ್ತೆ ಮಾಡುವುದು ಉದ್ದೇಶವಾಗಿತ್ತು. ಈ ಯಾನದ ಮೂಲಕ ನೀರಿನ ಇರುವಿಕೆ ಖಚಿತಪಡಿಸಿದ್ದರೆ, ವಿಶ್ವದಲ್ಲಿ ಭಾರತದ ಸಾಧನೆ ಇತಿಹಾಸ ಸೃಷ್ಟಿಸುತ್ತಿತ್ತು. ನಾಸಾ ಇದೇ ಪ್ರದೇಶದಲ್ಲಿ ಅಧ್ಯಯನಕ್ಕೆ 2024 ರಲ್ಲಿ ಲ್ಯಾಂಡರ್‌ ಕಳುಹಿಸಲಿದೆ. ಈ ಪ್ರದೇಶದಲ್ಲಿ ನೀರು ಸಿಕ್ಕಿದರೆ, ಅಲ್ಲೇ ತಂಗುದಾಣ ನಿರ್ಮಿಸಿ ಅಧ್ಯಯನ ನಡೆಸುವುದು ಮತ್ತು ಸೌರಮಂಡಲದ ಇತರ ಗ್ರಹಗಳಿಗೆ ತೆರಳಲು ಇದನ್ನು ತಾತ್ಕಾಲಿಕ ತಂಗುದಾಣ ಮಾಡಿಕೊಳ್ಳುವ ಉದ್ದೇಶವೂ ಹಲವು ದೇಶಗಳಿಗಿದೆ.

ಇಸ್ರೊ ಜತೆ ನಿಂತ ಭಾರತ

‘ವಿಕ್ರಮ್‌’ ನಿರೀಕ್ಷೆಯಂತೆ ಚಂದ್ರ ನೆಲ ಸ್ಪರ್ಶ ಮಾಡದೇ ಇದ್ದ ಕಾರಣ ಇಸ್ರೊ ವಿಜ್ಞಾನಿಗಳಲ್ಲಿ ಸಹಜವಾಗಿ ನಿರಾಸೆ ಮತ್ತು ದುಃಖ ಆವರಿಸಿತ್ತು. ಆದರೆ, ದೇಶದ ಜನತೆ ಇದು ಸಾಧನೆ ಎಂದೇ ಬೆನ್ನು ತಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿತು.

‘ವಿಕ್ರಮ್’ ಇಳಿಯುವಲ್ಲಿ ಸಣ್ಣ ದೋಷ ಆಗಿರಲೂಬಹುದು. ಆದರೆ, ಇದು ವೈಫಲ್ಯವಲ್ಲ. ಅಲ್ಲಿಯವರೆಗೆ ಲ್ಯಾಂಡರ್‌ ಇಳಿಸಿದ್ದೇ ಬಹು ದೊಡ್ಡ ಸಾಧನೆಯೇ ಸರಿ’ ಎಂದು ಟ್ವಿಟ್ಟರ್‌ ಮತ್ತು ಇತರ ವೇದಿಕೆಗಳ ಮೂಲಕ ಅಭಿನಂದಿಸಿದ್ದಾರೆ. ‘ಮುಂದೆ ಇನ್ನೂ ದೊಡ್ಡ ಸಾಧನೆಗೆ ಇದು ಪ್ರೇರಣೆಯ ಹೆಜ್ಜೆ’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲೂ ಇಸ್ರೊ ಸಾಧನೆಯ ಬಗ್ಗೆ ಮೆಚ್ಚುಗೆಯ ಜತೆ, ಅಧ್ಯಕ್ಷ ಕೆ.ಶಿವನ್ ಭಾವುಕರಾದಾಗ ಪ್ರಧಾನಿ ಮೋದಿ ಅಪ್ಪಿಕೊಂಡು ಸಂತೈಸಿರುವುದ ನಿಜಕ್ಕೂ ಧೈರ್ಯ ತುಂಬಿದ ಕ್ಷಣ ಎಂದೂ ಸಾರ್ವಜನಿಕರು ವ್ಯಾಖ್ಯಾನಿಸಿದರು.

* ಶನಿವಾರ ಮುಂಜಾನೆ 1.57 ಕ್ಕೆ ಸಂಪರ್ಕ ಕಡಿತ

* ಆರ್ಬಿಟರ್‌ ಚಂದ್ರನ ಕಕ್ಷೆಯಲ್ಲಿ 1 ವರ್ಷ ಕಾರ್ಯ ನಿರ್ವಹಣೆ

* ಶೇ 95 ರಷ್ಟು ಯಶಸ್ವಿ ಎಂದು ಜಾಗತಿಕ ಮಾಧ್ಯಮಗಳ ವಿಶ್ಲೇಷಣೆ

ಪ್ರತಿಕ್ರಿಯಿಸಿ (+)