ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಗಡಿ ಗ್ರಾಮ ಸ್ಥಳಾಂತರ: ಸರ್ಕಾರಕ್ಕೆ ವರದಿ ಸಲ್ಲಿಸಿದ ಅರಣ್ಯ ಇಲಾಖೆ

ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಕುಗ್ರಾಮ
Last Updated 11 ನವೆಂಬರ್ 2019, 19:47 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಕುಗ್ರಾಮವಾದ ಚಂಗಡಿಯನ್ನು ಸ್ಥಳಾಂತರ ಮಾಡುವ ಸಂಬಂಧ ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಮೂಲಸೌಕರ್ಯಗಳಿಂದ ವಂಚಿತವಾಗಿರುವ ಈ ಗ್ರಾಮ, ಹನೂರು ವಿಧಾನಸಭಾ ವ್ಯಾಪ್ತಿಯಲ್ಲಿದೆ. ಗ್ರಾಮ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು 2015ರಿಂದಲೇ ಒತ್ತಾಯಿಸುತ್ತಿದ್ದರು. ಅರಣ್ಯ ಇಲಾಖೆ ರಚಿಸಿದ್ದ ತಜ್ಞರ ಸಮಿತಿಯು ಗ್ರಾಮಸ್ಥರೊಂದಿಗೆ ನಿರಂತರವಾಗಿ ಚರ್ಚಿಸಿ, ಅಧ್ಯಯನ ನಡೆಸಿ ಪುನರ್ವಸತಿ ಬಗ್ಗೆ ವರದಿ ಸಿದ್ಧಪಡಿಸಿದೆ. ಈ ಯೋಜನೆಗೆ ₹ 29.25 ಕೋಟಿ ಬೇಕು ಎಂದು ಹೇಳಲಾಗಿದೆ.

ಪ್ರಸ್ತುತ 226 ಕುಟುಂಬಗಳು ಆಸ್ತಿ ಹೊಂದಿವೆ. ಈ ಪೈಕಿ 65 ಕುಟುಂಬಗಳು ವಲಸೆ ಹೋಗಿವೆ. ವಲಸೆ ಹೋಗಿರುವವರೂಸೇರಿದಂತೆ ಒಟ್ಟು 195 ಕುಟುಂಬಗಳು ಬೇರೆಡೆಗೆ ಸ್ಥಳಾಂತರ‌ಗೊಳ್ಳಲು ಒಪ್ಪಿಗೆ ಸೂಚಿಸಿದ್ದು, 31 ಕುಟುಂಬಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಕಾರಣ ಏನು?: 906.187 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಕೋರ್‌ ವಲಯ ಹಾಗೂ ನಿರ್ಣಾಯಕ ವನ್ಯಜೀವಿ ಆವಾಸದ ವ್ಯಾಪ್ತಿಯಲ್ಲಿ ಚಂಗಡಿ ಗ್ರಾಮ ಇದೆ.

ಕಿರಿಯ ಪ್ರಾಥಮಿಕ ಶಾಲೆ ಬಿಟ್ಟು ಸರ್ಕಾರದ ಬೇರೆ ಯಾವ ಸೌಲಭ್ಯವೂ ಇಲ್ಲಿಗೆ ತಲುಪಿಲ್ಲ. ಗ್ರಾಮವು ಅರಣ್ಯದಲ್ಲಿರುವುದರಿಂದ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷವೂ ಹೆಚ್ಚಾಗಿದೆ.

‘ಮೂಲಸೌಕರ್ಯ ಇಲ್ಲದಿರುವುದಕ್ಕಿಂತ ಬೇರೆ ಕಡೆ ಸ್ಥಳಾಂತರಗೊಳ್ಳುವುದೇ ಸೂಕ್ತ ಎಂಬುದು ನಮ್ಮ ನಿಲುವು. ಹೀಗಾಗಿ, ಹಿಂದಿನ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೆವು. ಜನಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುನರ್‌ವಸತಿ ಯೋಜನೆಗೆ ಸರ್ಕಾರ ಒಪ್ಪಿದರೆ ಸಮಿತಿ ರಚಿಸಲಾಗುವುದು. ಆ ಬಳಿಕ ಉಳಿದ 31 ಕುಟುಂಬಗಳನ್ನೂ ಮನವೊಲಿಸಲಾಗುವುದು. ಅವರೂ ಬೇರೆ ಕಡೆಗೆ ಸ್ಥಳಾಂತರಗೊಳ್ಳಲು ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ’ ಎಂದು ಮಲೆಮಹದೇಶ್ವರ ವನ್ಯಜೀವಿ ಧಾಮದ ಉಪ ಅರಣ್ಯಸಂರಕ್ಷಣಾಧಿಕಾರಿ ವಿ.ಏಡುಕುಂಡಲು ತಿಳಿಸಿದರು.

ಪುನರ್‌ವಸತಿ ಎಲ್ಲಿ?
ಗ್ರಾಮಸ್ಥರ ಪುನರ್‌ವಸತಿಗೆ ಎರಡು ಪ್ಯಾಕೇಜ್‌ಗಳನ್ನು ಗುರುತಿಸಲಾಗಿದೆ. ಒಂದು, ಕುಟುಂಬವೊಂದಕ್ಕೆ ₹ 15 ಲಕ್ಷವನ್ನು ಪರಿಹಾರವಾಗಿ ಕೊಡುವುದು ಹಾಗೂ ಇನ್ನೊಂದು, ಬೇರೆ ಕಡೆಯಲ್ಲಿ 3 ಎಕರೆ ಜಾಗ, 80X50 ನಿವೇಶನದಲ್ಲಿ ಮನೆ ನಿರ್ಮಿಸಿ ಅಗತ್ಯವಾದ ಸೌಕರ್ಯ ಕಲ್ಪಿಸುವುದು. ಪರಿಹಾರವನ್ನು ಅರಣ್ಯ ಇಲಾಖೆಯೇ ನೀಡಲಿದೆ.

ಮೊದಲ ಪ್ಯಾಕೇಜ್‌ಗೆ 38 ಕುಟುಂಬಗಳು ಒಪ್ಪಿದ್ದರೆ, ಎರಡನೇ ಪ್ಯಾಕೇಜ್‌ಗೆ 157 ಕುಟುಂಬಗಳು ಸಮ್ಮತಿಸಿವೆ.

ಹನೂರು ತಾಲ್ಲೂಕಿನ ಚಿಕ್ಕಲ್ಲೂರು ಸರ್ವೇ ನಂಬರ್‌ 326ರಲ್ಲಿ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ 1,600 ಎಕರೆ ಕಂದಾಯ ಭೂಮಿಯನ್ನು ಪುನರ್‌ವಸತಿಗಾಗಿ ಗುರುತಿಸಲಾಗಿದೆ.

*
ತಿಂಗಳ ಹಿಂದೆ ವರದಿ ಸಲ್ಲಿಸಿದ್ದೇವೆ. ಕೆಲ ಸ್ಪಷ್ಟನೆಗಳನ್ನು ಸರ್ಕಾರ ಕೇಳಿದೆ. ಶೀಘ್ರದಲ್ಲಿ ನೀಡುತ್ತೇವೆ. ಪುನರ್‌ವಸತಿಗೆ ಅನುಮತಿ ಸಿಗುವ ವಿಶ್ವಾಸವಿದೆ.
-ವಿ.ಏಡುಕುಂಡಲು,ವನ್ಯಧಾಮದ ಡಿಸಿಎಫ್‌

*
ಮೂಲಸೌಕರ್ಯ ಇಲ್ಲದೆ ಜೀವನ ಕಷ್ಟವಾಗಿದೆ. ಸ್ಥಳಾಂತರಕ್ಕಾಗಿ 2015ರಿಂದಲೇ ಹೋರಾಟ ಮಾಡುತ್ತಿದ್ದೇವೆ. ಪುನರ್‌ವಸತಿಗೆ ನಾವು ಒಪ್ಪಿದ್ದೇವೆ.
-ಚಂಗಡಿ ಕರಿಯಪ್ಪ,ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT