ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಚನ್ನಮ್ಮ ಪಡೆ’ ಉದ್ಘಾಟನೆ

ಪೊಲೀಸ್‌ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ
Last Updated 10 ಫೆಬ್ರುವರಿ 2020, 15:48 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಹೆಣ್ಣು ಮಕ್ಕಳಿಗೆ ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು, ಸಹಾಯ ಒದಗಿಸಲು ಹಾಗೂ ರಕ್ಷಣೆ ನೀಡುವ ನಿಟ್ಟಿನಲ್ಲಿ ನಗರ ಪೊಲೀಸ್‌ ಆಯುಕ್ತಾಲಯದಿಂದ ವಿಶೇಷವಾಗಿ ರೂಪಿಸಲಾಗಿರುವ ‘ಚನ್ನಮ್ಮ ಪಡೆ’ಯನ್ನು ಸೋಮವಾರ ಉದ್ಘಾಟನೆಗೊಂಡಿತು.

ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡಿರುವ ಈ ಪಡೆಯನ್ನು, ಕವಾಯತು ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಉತ್ತರ ವಲಯ ಐಜಿ‍ಪಿ ರಾಘವೇಂದ್ರ ಸುಹಾಸ್‌ ಉದ್ಘಾಟಿಸಿದರು. ಈ ಪಡೆಯವರು ತಾವು ಪಡೆದಿರುವ ತರಬೇತಿಯ ಝಲಕ್‌ ಅನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿ ನೆರೆದಿದ್ದವರು ಗಮನಸೆಳೆದರು. ವಿಶೇಷ ಪರಿಣತಿ ಗಳಿಸಿರುವ ಈ ಪಡೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಿಸಲಾಯಿತು.

‘ಸಾಹಸ ಕ್ರೀಡೆ ಹಾಗೂ ಪೊಲೀಸ್ ಕರ್ತವ್ಯ ಒಂದಕ್ಕೊಂದು ಪೂರಕವಾಗಿದೆ. ಸ್ಪರ್ಧೆಯಲ್ಲಿ ಸೋಲು–ಗೆಲುವನ್ನು ಲೆಕ್ಕಿಸದೇ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳಬೇಕು. ಕ್ರೀಡಾ ಮನೋಭಾವ ರೂಪಿಸಿಕೊಳ್ಳಬೇಕು. ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ರೂಪಗೊಳ್ಳುತ್ತದೆ ಎನ್ನುವುದನ್ನು ಮರೆಯಬಾರದು’ ಎಂದು ಐಜಿಪಿ ತಿಳಿಸಿದರು.

‘ಪೊಲೀಸ್ ಇಲಾಖೆಯ ಸಿಬ್ಬಂದಿಯು ಕ್ರೀಡಾಕೂಟದ ಮಾದರಿಯಲ್ಲೇ ಕರ್ತವ್ಯ ನಿರ್ವಹಣೆಯಲ್ಲೂ ಸಂಘಟಿತವಾಗಿ ಕೆಲಸ ಮಾಡಿ,ಸಮಾಜಘಾತುಕ ಚಟುವಟಿಕೆಗಳನ್ನು ತಡೆಯಬೇಕು ಮತ್ತು ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಬೇಕು’ ಎಂದು ಹೇಳಿದರು.

ಇದೇ ವೇಳೆ ಕ್ರೀಡಾಕೂಟದಲ್ಲಿ ವಿಜೇತರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು.

ಚನ್ನಮ್ಮ ಪಡೆಗೆ ₹ 20ಸಾವಿರ ಬಹುಮಾನವನ್ನು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ಘೋಷಿಸಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿಗಳಾದ ಸೀಮಾ ಲಾಟ್ಕರ್‌, ಯಶೋದಾ ವಂಟಗೋಡಿ, ಎಸಿಪಿಗಳಾದ ನಾರಾಯಣ ಭರಮನಿ, ಮಹಾಂತೇಶ ಜಿದ್ದಿ, ಇನ್‌ಸ್ಪೆಕ್ಟರ್‌ಗಳು, ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT