₹9.6 ಕೋಟಿ ವಂಚನೆ; ಉದ್ಯಮಿ ಚೋಕ್ಸಿ ವಿರುದ್ಧ ದೋಷಾರೋಪ ಪಟ್ಟಿ

6

₹9.6 ಕೋಟಿ ವಂಚನೆ; ಉದ್ಯಮಿ ಚೋಕ್ಸಿ ವಿರುದ್ಧ ದೋಷಾರೋಪ ಪಟ್ಟಿ

Published:
Updated:

ಬೆಂಗಳೂರು: ನಗರದ ಉದ್ಯಮಿಯೊಬ್ಬರಿಂದ ₹9.6 ಕೋಟಿ ಪಡೆದು ವಂಚಿಸಿದ ಪ್ರಕರಣ ಸಂಬಂಧ ಮುಂಬೈನ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಚೋಕ್ಸಿ ವಿರುದ್ಧ ಜೆ.ಪಿ.ನಗರದ ಉದ್ಯಮಿ ಎಸ್‌.ವಿ.ಹರಿಪ್ರಸಾದ್‌ ಎಂಬುವರು ನೀಡಿದ್ದ ದೂರಿನ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಪೊಲೀಸರು, 1ನೇ ಎಸಿಎಂಎಂ ನ್ಯಾಯಾಲಯಕ್ಕೆ 936 ಪುಟಗಳ ಆರೋಪ ಪಟ್ಟಿಯನ್ನು ಇತ್ತೀಚೆಗೆ ನೀಡಿದ್ದಾರೆ.

‘ದೂರುದಾರ ಹರಿಪ್ರಸಾದ್ ಸಹ ವಜ್ರಾಭರಣ ವ್ಯಾಪಾರಿ. ಮೆಹುಲ್ ಚೋಕ್ಸಿ ಜೊತೆ 2015ರ ಫೆಬ್ರುವರಿ 12ರಂದು ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದದ ಪ್ರಕಾರ ಚೋಕ್ಸಿ ಅಧ್ಯಕ್ಷರಾಗಿರುವ ಮುಂಬೈನ ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ ಕಂಪನಿಗೆ 2015ರ ಫೆ.15ರಿಂದ ಅಕ್ಟೋಬರ್ 26ರ ನಡುವಿನ ಅವಧಿಯಲ್ಲಿ ₹9.6 ಕೋಟಿ ಪಾವತಿಸಿದ್ದರು. ಆದರೆ, ಚೋಕ್ಸಿ ಒಪ್ಪಂದದ ಪ್ರಕಾರ ಆಭರಣಗಳನ್ನು ಪೂರೈಕೆ ಮಾಡಿರಲಿಲ್ಲ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಆರೋಪಿಯು ವಂಚನೆ ಮಾಡಿದ್ದಕ್ಕೆ ದಾಖಲೆಗಳು ಸಿಕ್ಕಿವೆ. ಅವುಗಳನ್ನೇ ದೋಷಾರೋಪ ಪಟ್ಟಿಯೊಂದಿಗೆ ಲಗತ್ತಿಸಲಾಗಿದೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದಿವೆ.

ರಾಜ್ಯದಲ್ಲಿ ₹861 ಕೋಟಿ ವಂಚನೆ: ‘ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಫೊರೇಷನ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಿಂದಲೂ ₹861 ಕೋಟಿ ಸಾಲ ಪಡೆದು ವಂಚಿಸಿದ್ದು ಗೊತ್ತಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಲೆ ಹಾಕಲಾಗುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ. 

‘ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪ ಜೋಕ್ಸಿ ಮೇಲಿದೆ. ಆ ಬಗ್ಗೆಯೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !