ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಗುರುತಿನ ಚೀಟಿ ಸಂಗ್ರಹ: ಶಾಸಕ ಮುನಿರತ್ನ ವಿರುದ್ಧ ಆರೋಪ ಪಟ್ಟಿ !

ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ
Last Updated 26 ಅಕ್ಟೋಬರ್ 2018, 17:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನೇ ಮುಂದೂಡಲು ಕಾರಣವಾಗಿದ್ದ, ಚುನಾವಣಾ ಗುರುತಿನ ಚೀಟಿಗಳ ಅಕ್ರಮ ಸಂಗ್ರಹಿಸಿಟ್ಟಿದ್ದ ಪ್ರಕರಣದಲ್ಲಿ ಶಾಸಕ ಮುನಿರತ್ನ ಸೇರಿದಂತೆ 34 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ಜಾಲಹಳ್ಳಿಯ ‘ಎಸ್‌ಎಲ್‌ವಿ ಪಾರ್ಕ್‌ ವ್ಯೂ’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪ್ಲ್ಯಾಟ್‌ ನಂ. 115ರ ಮೇಲೆ ಮೇ 8ರಂದು ದಾಳಿ ಮಾಡಿದ್ದ ಚುನಾವಣಾ ಅಧಿಕಾರಿಗಳು, 9,746 ಗುರುತಿನ ಚೀಟಿಗಳನ್ನು ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹಚ್ಚಿದ್ದರು. ಆ ಚೀಟಿಗಳು ಹಾಗೂ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದ ಅಂದಿನ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎಂ.ಮಹೇಶ್ವರ ರಾವ್, ಮುನಿರತ್ನ ಹಾಗೂ ಅವರ ಬೆಂಬಲಿಗರ ವಿರುದ್ಧ ಜಾಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಎಸಿಎಂಎಂ ನ್ಯಾಯಾಲಯಕ್ಕೆ ಇತ್ತೀಚೆಗಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸದ್ಯದಲ್ಲೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಮುನಿರತ್ನ, ಮೊದಲ ಆರೋಪಿ: ‘ಪ್ರಕರಣದಲ್ಲಿ ಮುನಿರತ್ನ ಅವರನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಅದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಂ.ಮಹೇಶ್ವರ ರಾವ್ ನೀಡಿದ್ದ ದೂರಿನಡಿ 14 ಮಂದಿ ವಿರುದ್ಧ ಮಾತ್ರ ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ವೇಳೆ ಸಿಕ್ಕ ಪುರಾವೆ ಆಧರಿಸಿ 34 ಮಂದಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಅವರೆಲ್ಲರಿಂದಲೂ ಹೇಳಿಕೆ ಪಡೆಯಲಾಗಿದೆ. ಸಾದಿರ್ ಮೊಮಿನ್, ಚಿನ್ನತಂಬಿ, ಪೊನ್ನಯ್ಯಮ್ಮ, ಚಿನ್ನ ದೊರೈ, ಲಕ್ಷ್ಮಮ್ಮ, ಲಲಿತಮ್ಮ, ಶಾರದ ಸರವಣ, ರೇಖಾ, ಮಂಜುಳಾ ನಂಜಾಮರಿ, ನಟರಾಜ್ ಕೃಷ್ಣಪ್ಪ‍, ಮಂಜುನಾಥ್ ಹಾಗೂ ರಶ್ಮಿ ಎಂಬುವರು ಪ್ರಮುಖ ಆರೋಪಿಗಳಾಗಿದ್ದಾರೆ’ ಎಂದರು.

ಮತದಾರರಿಗೆ ಹಣದ ಆಮಿಷ: ‘ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಲೇ ಮುನಿರತ್ನ, ತಮ್ಮ ಬೆಂಬಲಿಗರ ಮೂಲಕ ಮತದಾರರಿಗೆ ಹಣದ ಆಮಿಷವೊಡ್ಡಿ ಚುನಾವಣಾ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದರು. ಆ ಬಗ್ಗೆ ಕೆಲವು ಮತದಾರರು ಹೇಳಿಕೆ ಕೊಟ್ಟಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸಿಕ್ಕ ಚೀಟಿಗಳೆಲ್ಲವೂ ಅಸಲಿ. ಕೆಲವರನ್ನು ಹೆದರಿಸಿ ಹಾಗೂ ಹಲವರಿಗೆ ಹಣ ನೀಡಿ ಚೀಟಿಗಳನ್ನು ಸಂಗ್ರಹಿಸಲಾಗಿತ್ತು. ಮತದಾನ ದಿನದಂದು ಮತಗಟ್ಟೆ ಬಳಿಯೇ ಅವುಗಳನ್ನು ವಿತರಿಸಿ ಮತ ಹಾಕಿಸಿಕೊಳ್ಳಲು ಆರೋಪಿಗಳು, ಸಿದ್ಧತೆ ಮಾಡಿಕೊಂಡಿದ್ದರು. ಹೀಗಾಗಿ, ಚುನಾವಣೆಗೂ ಮುನ್ನವೇ ಚೀಟಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು’ ಎಂದರು.

‘800ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯಲ್ಲಿ 70ಕ್ಕೂ ಹೆಚ್ಚು ಪುರಾವೆಗಳನ್ನು ಉಲ್ಲೇಖಿಸಲಾಗಿದೆ’ ಎಂದರು.

ನ್ಯಾಯಾಲಯಕ್ಕೆ ಶರಣಾಗಿದ್ದ ಮುನಿರತ್ನ: ‘ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮುನಿರತ್ನ, ಕೆಲವು ದಿನಗಳ ನಂತರ ನ್ಯಾಯಾಲಯಕ್ಕೆ ಶರಣಾಗಿದ್ದರು. ಅಲ್ಲಿಯೇ ಅವರಿಗೆ ಜಾಮೀನು ಸಿಕ್ಕಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT