ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಅರಣ್ಯ ಇಲಾಖೆ ಅನುಮತಿ

ಚಾರ್ಮಾಡಿ ಘಾಟಿ ದುರಸ್ತಿಗೆ ₹ 260 ಕೋಟಿ ವೆಚ್ಚದ ಪ್ರಸ್ತಾವ
Last Updated 24 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಭಾಗವನ್ನು ಬೆಂಗಳೂರಿಗೆ ಸಂಪರ್ಕಿಸುವ ಎರಡು ಪ್ರಮುಖ ಹೆದ್ದಾರಿಗಳು ಸಂಪೂರ್ಣ ಕೆಟ್ಟು ಹೋಗಿವೆ. ಮಳೆಗೆ ಚಾರ್ಮಾಡಿ ಘಾಟಿ ಹಾಳಾಗಿದ್ದರೆ, ಅತಿಯಾದ ವಾಹನ ಸಂಚಾರದಿಂದ ಶಿರಾಡಿ ಘಾಟಿ ರಸ್ತೆಯೂ ಹದಗೆಟ್ಟು ಹೋಗಿದೆ.

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಮಂಗಳೂರು-ಉಜಿರೆ
-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 73ರಲ್ಲಿನ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಭೂಕುಸಿತದಿಂದ ಹಾನಿಗೊಳಗಾಗಿದ್ದ ರಸ್ತೆ ಪುನರ್‌ನಿರ್ಮಾಣಕ್ಕೆ₹ 260 ಕೋಟಿ ವೆಚ್ಚದ ಶಾಶ್ವತ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ. ಆದರೆ, ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ನೀಡುತ್ತಿಲ್ಲ.

ಚಾರ್ಮಾಡಿ ಘಾಟಿ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಇದೇ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ ನೀಡಿತ್ತು. ಈಗಲೂ ಅದೇ ರೀತಿ, ಹಾಲಿ ರಸ್ತೆ ಇರುವಷ್ಟೇ ಜಾಗದಲ್ಲಿ ಕಾಮಗಾರಿ ನಡೆಸುವುದಾದರೆ ಷರತ್ತುಬದ್ಧ ನಿರಾಕ್ಷೇಪಣಾ ಪತ್ರ ನೀಡುವುದಾಗಿ ಅರಣ್ಯ ಇಲಾಖೆ ಹೇಳುತ್ತಿದೆ.

‘ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಷ್ಟೊಂದು ಹಾನಿಯಾಗಿಲ್ಲ. ಚಿಕ್ಕಮಗಳೂರಿನ ಮೂಡಿಗೆರೆ ವ್ಯಾಪ್ತಿಯ 86 ನೇ ಕಿ.ಮೀ.ನಲ್ಲಿ ಹೆಚ್ಚಿನ ಹಾನಿಯಾಗಿದೆ. ಮರು ನಿರ್ಮಾಣ ಕಾಮಗಾರಿಯ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಪಿ.ರಮೇಶ್‌ ತಿಳಿಸಿದ್ದಾರೆ.

ಆದರೆ, ಈಗ ರೂಪಿಸಿರುವ ₹260ಕೋಟಿ ಮೊತ್ತದ ಹೊಸ ಯೋಜನೆಯನ್ವಯ ಚಾರ್ಮಾಡಿ ಘಾಟಿ ಪ್ರದೇಶದ ಅರಣ್ಯ ಭಾಗಕ್ಕೆ ಹಾನಿಯಾಗುತ್ತದೆ. ಭೂರಚನೆಗೂ ತೊಂದರೆಯಾಗುತ್ತದೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಆಧುನಿಕ ಮೈಕ್ರೋಪೈಲ್ಸ್ ಅಳವಡಿಸಿ ಮಣ್ಣಿನ ಆಳಕ್ಕೆ ಪಿಲ್ಲರ್ ಇಳಿಸುವ ಯೋಜನೆಗೆ ತಕ್ಷಣದ ಅನುಮತಿ ನೀಡಲು ಅದು ನಿರಾಕರಿಸಿದ್ದು, ಕಾಲಾವಕಾಶ ಕೇಳಿದೆ. ಆದರೆ, ಇಲಾಖೆಗೆ ಸಮಸ್ಯೆಯನ್ನು ಮನವರಿಕೆ ಮಾಡಿ ಯೋಜನೆಗೆ ಎನ್‌ಒಸಿ ಪಡೆದುಕೊಳ್ಳುವ ವಿಶ್ವಾಸವನ್ನು ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಹೊಸ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತರೂ, ಯೋಜನಾ ವರದಿ ಸಿದ್ಧಪಡಿಸಲು ಮತ್ತು ಟೆಂಡರ್ ಪ್ರಕ್ರಿಯೆಗೆ 6ತಿಂಗಳು ಬೇಕಾಗುತ್ತದೆ. ಆಮೇಲೆ ಮಳೆಗಾಲ ಆರಂಭಗೊಂಡರೆ 2021ರ ವೇಳೆ ಕಾಮಗಾರಿಗೆ ಚಾಲನೆ ಸಿಗಬಹುದು. ಅದುವರೆಗೆ ಚಾರ್ಮಾಡಿ ಘಾಟಿ ಮಾರ್ಗದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದು ಎಂದು ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳು ಹೇಳುತ್ತಾರೆ.

ಚಾರ್ಮಾಡಿ ಘಾಟಿ ದುರಸ್ತಿಗೆ ₹ 260 ಕೋಟಿ ಪ್ರಸ್ತಾವ ಸಿದ್ಧವಿದ್ದು, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಜತೆಗೆ ಸಭೆ ನಡೆಸಿ, ಎಲ್ಲ ಅಡೆತಡೆ ನಿವಾರಿಸಲಾಗುವುದು
-ನಳಿನ್‌ಕುಮಾರ್ ಕಟೀಲ್‌, ಸಂಸದ

ವಾಹನ ಸಂಚಾರಕ್ಕೆ ಶಾಶ್ವತ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ. ತಾಂತ್ರಿಕ ತಂಡದವರು ಎಲ್ಲವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು
-ಸಿ.ಟಿ. ರವಿ, ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT