ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ 60 ರಾಜತಾಂತ್ರಿಕರನ್ನು ಹೊರದಬ್ಬಿದ ಅಮೆರಿಕ

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಗುಪ್ತಚರ ಅಧಿಕಾರಿಗಳು ಎಂಬ ಆರೋಪದ ಮೇಲೆ ರಷ್ಯಾದ 60 ರಾಜತಾಂತ್ರಿಕರನ್ನು ಅಮೆರಿಕ ಸೋಮವಾರ ಹೊರಹಾಕಿದೆ. ದೇಶ ತೊರೆಯುವಂತೆ ಇವರಿಗೆ ಏಳು ದಿನ ಗಡುವು ವಿಧಿಸಿರುವ ಅಮೆರಿಕ, ಸಿಯಾಟಲ್‌ನಲ್ಲಿರುವ ಕಾನ್ಸಲೇಟ್ ಕಚೇರಿಯನ್ನು ಮುಚ್ಚಲೂ ಆದೇಶಿಸಿದೆ.

ಬ್ರಿಟನ್‌ನಲ್ಲಿರುವ ರಷ್ಯಾದ ಮಾಜಿ ಗೂಢಚಾರ ಸರ್ಗೆ ಸ್ಕ್ರಿಪಾಲ್ ಅವರ ಮೇಲೆ ಭಯಾನಕ ರಾಸಾಯನಿಕ ವಿಷ, ನರ್ವ್ ಏಜೆಂಟ್ ಅನ್ನು ರಷ್ಯಾ ಬಳಕೆ ಮಾಡಿದೆ ಎಂಬುದು ಅಮೆರಿಕದ ಈ ನಿರ್ಧಾರಕ್ಕೆ ಕಾರಣ.

ಐರೋಪ್ಯ ಒಕ್ಕೂಟದ 14 ರಾಷ್ಟ್ರಗಳು, ಕೆನಡಾ ಮತ್ತು ಉಕ್ರೇನ್‌ ಕೂಡ ತಮ್ಮ ರಾಷ್ಟ್ರಗಳಲ್ಲಿರುವ ರಷ್ಯಾದ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ಇದು ಉದ್ದೇಶಪೂರ್ವಕ ಕ್ರಮ. ಈ ಕ್ರಮಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಹೇಳಿದೆ.

ಅಲ್ಲದೆ ಈ ಕ್ರಮವು ಬ್ರಿಟನ್‌ನಲ್ಲಿ ನಡೆದ ದಾಳಿಗೆ ನಿಜವಾಗಿ ಕಾರಣರಾದವರನ್ನು ಪತ್ತೆ ಹಚ್ಚಲು ಅಡ್ಡಿಯಾಗಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.

ಅಮೆರಿಕದಿಂದ ಉಚ್ಚಾಟನೆಗೊಂಡಿರುವವರ ಪೈಕಿ 12 ಮಂದಿ ರಾಜತಾಂತ್ರಿಕರು ಮತ್ತು ವಿಶ್ವಸಂಸ್ಥೆಯಲ್ಲಿ ರಷ್ಯಾದ ಕಾಯಂ ಪ್ರತಿನಿಧಿಗಳಾಗಿದ್ದಾರೆ.

ಅಮೆರಿಕ ಜಲಾಂತರ್ಗಾಮಿ ನೆಲೆಗೆ ಸಮೀಪದಲ್ಲಿರುವ ಸಿಯಾಟಲ್‌ನ ಕಚೇರಿ ಮುಚ್ಚಲು ಡೊನಾಲ್ಡ್ ಟ್ರಂಪ್ ಅವರು ಆದೇಶಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಸರ್ಗೆ ಸ್ಕ್ರಿಪಾಲ್ ಮತ್ತು ಅವರ ಮಗಳು ಯುಲಿಯಾ ಅವರ ಸ್ಥಿತಿ ಗಂಭೀರವಾಗಿದ್ದು ಬ್ರಿಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಷ್ಯಾ ವಿರುದ್ಧ ಪ್ರತೀಕಾರವಾಗಿ ರಾಜತಾಂತ್ರಿಕರನ್ನು ಹೊರದಬ್ಬಲಾಗಿದೆ ಎಂದು ಅಮೆರಿಕ ತಿಳಿಸಿದೆ.

ಆದರೆ ಅಮೆರಿಕದ ಆರೋಪವನ್ನು ರಷ್ಯಾ ತಳ್ಳಿಹಾಕಿದೆ. ತನ್ನ ದೇಶದಲ್ಲಿ ನಿಷೇಧಿತ ವಿಷಾನಿಲವನ್ನು ಬಳಕೆ ಮಾಡಿದ ಆರೋಪದ ಮೇಲೆ ರಷ್ಯಾದ 23 ರಾಜತಾಂತ್ರಿಕರನ್ನು ಬ್ರಿಟನ್ ಈಗಾಗಲೇ ದೇಶದಿಂದ ಹೊರಹಾಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT