ಕಾರವಾರದ ಬಾಣಸಿಗ ಕಾಬೂಲ್‌ನಲ್ಲಿ ಕೊಲೆ

7
ಕಡವಾಡದ ಕ್ರಿಶ್ಚಿಯನ್‌ ವಾಡಾದಲ್ಲಿರುವ ಕುಟುಂಬ ಸದಸ್ಯರ ರೋದನ

ಕಾರವಾರದ ಬಾಣಸಿಗ ಕಾಬೂಲ್‌ನಲ್ಲಿ ಕೊಲೆ

Published:
Updated:
Deccan Herald

ಕಾರವಾರ: ತಾಲ್ಲೂಕಿನ ಕಡವಾಡ ಸಮೀಪದ ಕ್ರಿಶ್ಚಿಯನ್ ವಾಡಾ ನಿವಾಸಿ ಪ್ಯಾಟ್ಸನ್ ರೋಡ್ರಿಗಸ್ (39) ಅವರನ್ನು ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಗುರುವಾರ ಅಪಹರಿಸಿ ಕೊಲೆ ಮಾಡಲಾಗಿದೆ. ಇದೀಗ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ಪ್ರಸ್ತುತ ಫ್ರಾನ್ಸ್‌ ಮೂಲದ ಸೊಡೆಕ್ಸೊ ಕಂಪನಿಯಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದ ಅವರು, 10 ವರ್ಷಗಳಿಂದ ಕಾಬೂಲ್‌ನಲ್ಲಿ ವಾಸವಿದ್ದರು.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರ ಸೋದರ ಸಂಬಂಧಿ ಅಲೆಕ್ಸ್ ಡಿಸಿಲ್ವಾ, ‘ಅವರು ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ ಕರೆ ಮಾಡಿ ಮನೆಯವರನ್ನು ವಿಚಾರಿಸಿಕೊಳ್ಳುತ್ತಿದ್ದರು. ಅದೇ ರೀತಿ, ಗುರುವಾರ ಬೆಳಿಗ್ಗೆಯೇ ಕರೆ ಮಾಡಿ ಕಚೇರಿಯ ಕಾರಿನಲ್ಲಿ ಕೆಲಸಕ್ಕೆ ಹೋಗಿದ್ದರು. ಬಳಿಕ ಕಾಬೂಲ್‌ನಲ್ಲಿ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಪ್ಯಾಟ್ಸನ್ ಅವರೂ ಸೇರಿದಂತೆ ಮೂವರು ವಿದೇಶಿಯರನ್ನು ಅಪಹರಿಸಿ ಕೊಲೆ ಮಾಡಿದ್ದು ಮಾಧ್ಯಮಗಳ ಮೂಲಕ ತಿಳಿಯಿತು’ ಎಂದು ಹೇಳಿದರು.

ಆರು ವರ್ಷಗಳ ಹಿಂದೆ ಮದುವೆಯಾಗಿರುವ ಅವರ ಪತ್ನಿ ಫ್ರಿಲ್ಲಾ ಗೃಹಿಣಿಯಾಗಿದ್ದು, ಐದು ವರ್ಷದ ಪುತ್ರ ಪ್ರೆಸ್ಲಿ ಎಲ್‌ಕೆಜಿ ತರಗತಿಗಳಿಗೆ ಹೋಗುತ್ತಿದ್ದಾನೆ. ಅವರಿಬ್ಬರೂ ಕಾರವಾರದಲ್ಲಿ ಪ್ಯಾಟ್ಸನ್ ಅವರ ತಂದೆ, ತಾಯಿ ಜತೆ ವಾಸ ಮಾಡುತ್ತಿದ್ದಾರೆ. ಮೇ 15ಕ್ಕೆ ಮನೆಗೆ ಬಂದಿದ್ದ ಅವರು, ಮೇ 27ಕ್ಕೆ ವಿವಾಹ ವಾರ್ಷಿಕೋತ್ಸವ ಆಚರಿಸಿ ಕಾಬೂಲ್‌ಗೆ ತೆರಳಿದ್ದರು. ಆ.13ರಂದು ಪ್ರೆಸ್ಲಿಯ ಜನ್ಮದಿನಾಚರಣೆಯಿತ್ತು.

ಕುಟುಂಬಕ್ಕೆ ಆಧಾರವಾಗಿದ್ದರು: ಪ್ಯಾಟ್ಸನ್ ಅವರ ಅಣ್ಣ ಎಲ್ವಿ ಈ ಮೊದಲು ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿಂದ ಮರಳಿದ ಅವರು ಈಗ ಹೊನ್ನಾವರದಲ್ಲಿ ನೆಲೆಸಿದ್ದಾರೆ. ತಂದೆ ಜೆರೇಮಿ ರೋಡ್ರಿಗಸ್ ಅವರಿಗೆ 75 ವರ್ಷ ಹಾಗೂ ತಾಯಿ ಫಿಲೋ ರೋಡ್ರಿಗಸ್ ಅವರಿಗೆ 68 ವರ್ಷವಾಗಿದೆ. ಹೀಗಾಗಿ ಕುಟುಂಬಕ್ಕೆ ಪ್ಯಾಟ್ಸನ್‌ ಅವರ ಬಾಣಸಿಗ ವೃತ್ತಿಯಲ್ಲಿ ಸಿಗುವ ವೇತನವೇ ಪ್ರಮುಖ ಆದಾಯ ಮೂಲವಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಅವರು ಕಾಬೂಲ್‌ಗೆ ಹೋಗುವ ಮೊದಲು ಕಾರವಾರದಲ್ಲಿ ಮೋಟರ್ ವೈಂಡಿಂಗ್ ಮಾಡುವ ವೃತ್ತಿ ಮಾಡುತ್ತಿದ್ದರು. ಬಳಿಕ ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿ ಗೋವಾದಲ್ಲಿ ಅಧ್ಯಯನ ಮಾಡಿದರು. ಅವರ ಜತೆಗೆ ತಾಲ್ಲೂಕಿನ ಹೊಟೆಗಾಳಿ ಎಂಬ ಗ್ರಾಮದ ಒಂದಿಬ್ಬರು ಕೆಲಸ ಮಾಡುತ್ತಿದ್ದರು ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

‘ಅಧಿಕೃತ ಮಾಹಿತಿ ಬಂದಿಲ್ಲ’: ‘ಕಾರವಾರದ ವ್ಯಕ್ತಿಯೊಬ್ಬರು ಕಾಬೂಲ್‌ನಲ್ಲಿ ಅಪಹರಣವಾಗಿ ಕೊಲೆಯಾಗಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮಾಹಿತಿ ಸಿಕ್ಕಿದ ಕೂಡಲೇ ಮುಂದಿನ ಕ್ರಮಗಳ ಬಗ್ಗೆ ಕುಟುಂಬದ ಸದಸ್ಯರ ಜತೆ ಚರ್ಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !