ಬುಧವಾರ, ನವೆಂಬರ್ 13, 2019
22 °C

ಆಹ್ವಾನಿಸಲು ಹೋರಾಟ ಬೀಗರೂಟ ಅಲ್ಲ: ಚೆಲುವರಾಯಸ್ವಾಮಿ ವ್ಯಂಗ್ಯ

Published:
Updated:

ಬೆಂಗಳೂರು: ‘ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿರಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇವರಿಗೆ ಆಹ್ವಾನ ನೀಡಲು ಅದೇನು ಬೀಗರೂಟ ಆಗಿರಲಿಲ್ಲ’ ಎಂದು ಕಾಂಗ್ರೆಸ್‌ ನಾಯಕ ಎನ್. ಚೆಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ಎಲ್ಲ ಮುಖಂಡರೂ ಭಾಗವಹಿಸಿದ್ದೆವು. ಆದರೆ, ಮೈತ್ರಿ ಸರ್ಕಾರ ಉಳಿಸಲು ಶ್ರಮಪಟ್ಟ ಶಿವಕುಮಾರ್‌ ಬೆಂಬಲಕ್ಕೆ ಕುಮಾರಸ್ವಾಮಿ ಬರಲೇ ಇಲ್ಲ ಎಂದರು.

‘ಹೋರಾಟಕ್ಕೆ ಬನ್ನಿ ಎಂದು ನನಗೂ ಆಹ್ವಾನ ಬಂದಿರಲಿಲ್ಲ. ಆದರೂ ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ಹೋಗಿದ್ದೆ. ಈ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಸಮುದಾಯ ಏನು ಮಾಡುತ್ತದೆ ನೋಡಬೇಕು. ಆದರೆ, ಕುಮಾರಸ್ವಾಮಿ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ’ ಎಂದು ಹೇಳಿದರು.

‘ಜೆಡಿಎಸ್‌ ತೊರೆಯಲು ಜಿ.ಟಿ.ದೇವೇಗೌಡ, ಶ್ರೀನಿವಾಸ್‌ ಸೇರಿ ಹಲವು ಶಾಸಕರು ತಯಾರಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಜೆಡಿಎಸ್‌ ನಾಯಕರ ವರ್ತನೆಗೆ ಬೇಸತ್ತು ನಾವೂ ಆ ಪಕ್ಷ ಬಿಟ್ಟೆವು. ಪಕ್ಷ ಬಿಟ್ಟವರದೇ ತಪ್ಪು, ತಾವು ಮಾತ್ರ ಸಂಭಾವಿತರು ಎಂಬಂತೆ ನಡೆದುಕೊಳ್ಳುತ್ತಾರೆ. ಇದನ್ನು ಜನಗಮನಿಸುತ್ತಿದ್ದಾರೆ. ಅವರೇ ಉತ್ತರ ಕೊಡುತ್ತಾರೆ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)