ಕುಡಿಯುವ ನೀರಿಗೆ ಕ್ರಿಮಿನಾಶಕ

7
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು

ಕುಡಿಯುವ ನೀರಿಗೆ ಕ್ರಿಮಿನಾಶಕ

Published:
Updated:
Prajavani

ಯಾದಗಿರಿ: ಹುಣಸಗಿ ತಾಲ್ಲೂಕಿನ ಮುದನೂರು, ತೆಗ್ಗಳ್ಳಿ, ಶಾಖಾಪುರ ಗ್ರಾಮಗಳಿಗೆ ಪೂರೈಸುವ ಕುಡಿಯುವ ನೀರಿಗೆ ಕಿಡಿಗೇಡಿಗಳು ಕ್ರಿಮಿನಾಶಕ ಸೇರಿಸಿದ್ದು, ಅದೃಷ್ಟವಶಾತ್‌ ಅನಾಹುತ ಬುಧವಾರ ತಪ್ಪಿದೆ.

ಮುದನೂರಲ್ಲಿರುವ ತೆರೆದಬಾವಿಗಳಿಂದ ಮುದನೂರು, ತೆಗ್ಗಳ್ಳಿ, ಶಾಖಾಪುರ ಗ್ರಾಮಗಳ ಜನರಿಗೆ ಕುಡಿಯಲು ನೀರು ಪೂರೈಸಲಾಗುತ್ತಿದೆ. ಈ ನೀರನ್ನು ಮೊದಲು ಶುದ್ಧೀಕರಣ ಘಟಕದಲ್ಲಿ ಸಂಗ್ರಹಿಸಿ ನಂತರ ಪೂರೈಸಲಾಗುತಿತ್ತು. ಆದರೆ, ಶುದ್ಧೀಕರಣ ಘಟಕ ದುರಸ್ತಿಯಲ್ಲಿದೆ. ಹಾಗಾಗಿ, ತೆರೆದಬಾವಿಯಿಂದ ನೇರವಾಗಿ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ.

ಬುಧವಾರ ಕಿಡಿಗೇಡಿಗಳು ನೀರು ಪೂರೈಸುವ ಪೈಪ್‌ಲೈನ್‌ ವಾಲ್ವ್‌ ಮೂಲಕ ಕ್ರಿಮಿನಾಶಕವನ್ನು ನೀರಿಗೆ ಬೆರೆಸಿದ್ದಾರೆ ಎನ್ನಲಾಗಿದೆ.

‘ನಳಗಳಲ್ಲಿ ಪೂರೈಕೆಯಾದ ನೀರು ವಾಸನೆ ಬರುತ್ತಿದ್ದರಿಂದ ಜನ ಅದನ್ನು ಕುಡಿಯಲಿಲ್ಲ. ತಕ್ಷಣವೇ ಇಡೀ ಗ್ರಾಮಕ್ಕೆ ಸುದ್ದಿ ಮುಟ್ಟಿಸಿ ನೀರು ಕುಡಿಯದಂತೆ ತಡೆದರು. ನೀರು ಪೂರೈಕೆ ಸ್ಥಗಿತಗೊಳಿಸಿ ತೆರೆದಬಾವಿ ಪರೀಕ್ಷಿಸಿದ್ದಾರೆ. ವಾಲ್ವ್‌ ಮೂಲಕ ಕ್ರಿಮಿನಾಶಕವನ್ನು ನೀರಿಗೆ ಬೆರೆಸಿರುವುದು ಪತ್ತೆಯಾಗಿದೆ. ಅಲ್ಲೇ ಕ್ರಿಮಿನಾಶಕ ಬಾಟಲಿಯನ್ನು ಬಿಸಾಡಿರುವುದು ಕೂಡ ಕಂಡುಬಂದಿದೆ‘ ಎಂದು ಶಾಖಾಪುರದ ಗಿರೀಶ್ ಪಾಟೀಲ ‘ಪ್ರಜಾವಾಣಿ’ ಗೆ ತಿಳಿಸಿದರು.

‘ನೀರು ಕುಡಿದ ಕೆಲವರಿಗೆ ವಾಂತಿ–ಭೇದಿ ಆಗಿದ್ದು, ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯ ಸಂಭವಿಸಿಲ್ಲ‘ ಎಂದು ಪಿಡಿಒ ಸಿದ್ದರಾಮಪ್ಪ ಅವರು ತಿಳಿಸಿದರು. 

ತನಿಖೆಗೆ ಆದೇಶ: ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಾವಿಯಲ್ಲಿನ ನೀರನ್ನು ಖಾಲಿ ಮಾಡಿಸಿ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನೀರಿಗೆ ಕ್ರಿಮಿನಾಶಕ ಬೆರೆಸಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಬಂಧಿಸಲು ಕ್ರಮಕೈಗೊಳ್ಳುವಂತೆ ಅವರು ಕೆಂಭಾವಿ ಪಿಎಸ್‌ಐ ಅಜಿತ್‌ ಕುಮಾರ್ ಅವರಿಗೆ
ಆದೇಶಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !