ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಒಕ್ಕಲೆಬ್ಬಿಸಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಕೊಡಗಿಗೆ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ ಭೇಟಿ
Last Updated 17 ಫೆಬ್ರುವರಿ 2020, 13:02 IST
ಅಕ್ಷರ ಗಾತ್ರ

ಮಡಿಕೇರಿ: ಹಿರಿಯ ಹೋರಾಟಗಾರ ದೊರೆಸ್ವಾಮಿ ಅವರು ಫೆ.18ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ಬಾಳುಗೋಡು ನಿರಾಶ್ರಿತರ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಗಮನ ಸೆಳೆಯಲಿದ್ದಾರೆ. ಅಲ್ಲದೇ ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆ.ಮೊಣ್ಣಪ್ಪ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೇಟಿ: ಸರ್ಕಾರಿ ಜಾಗದಲ್ಲಿ ನೆಲೆನಿಂತಿರುವ ಬಡಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಒಕ್ಕಲೆಬ್ಬಿಸುವುದಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಬಹುಜನ ಕಾರ್ಮಿಕರ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ವತಿಯಿಂದ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊಡಗು ಜಿಲ್ಲೆಯ ಬಾಳುಗೋಡು ನಿರಾಶ್ರಿತರು ಸೇರಿದಂತೆ ಇತರ ಬಡವರ್ಗದ ಮಂದಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ ಈ ಭರವಸೆ ಸಿಕ್ಕಿದೆ.

ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಬಡವರನ್ನು ಒಕ್ಕಲೆಬ್ಬಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಮತ್ತೊಂದು ಬಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಭೂಮಿ ಮತ್ತು ವಸತಿ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಶೀಘ್ರ ಉನ್ನತ ಮಟ್ಟದ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಬೇಡಿಕೆಗಳು: ಸರ್ಕಾರಿ ಜಮೀನಿನ ಸಂರಕ್ಷಣೆಯ ಹೆಸರಿನಲ್ಲಿ ಬಡಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ಕೊನೆಗೊಳ್ಳಬೇಕು. ರಾಜ್ಯದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಬಡಜನರು ಹಾಗೂ ಕಾರ್ಮಿಕ ವರ್ಗವನ್ನು ಒಕ್ಕಲೆಬ್ಬಿಸಿ ಬೀದಿಪಾಲು ಮಾಡಬಾರದು. ಅನಿವಾರ್ಯ ಪರಿಸ್ಥಿತಿಗಳಲ್ಲೂ ಪರ್ಯಾಯ ವ್ಯವಸ್ಥೆ ಮಾಡದೇ ಬಡವರನ್ನು ತೆರವುಗೊಳಿಸಬಾರದು ಎಂದು ಪ್ರಮುಖರು ಒತ್ತಾಯಿಸಿದರು.

ಬಡಜನರಿಗೆ ವಸತಿ ಜಾಗವನ್ನು ಹಾಗೂ ಉಳುಮೆ ಭೂಮಿಯನ್ನು ಮಂಜೂರು ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು.

ಫಾರಂ.: 50, 53, 57, 94(ಸಿ), 94 (ಸಿಸಿ) ಹಾಗೂ ಅರಣ್ಯ ಕಾಯ್ದೆ ಅಡಿ ಅರ್ಜಿ ಹಾಕಿರುವ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಬಂಧಿತ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ಸರ್ಕಾರಿ ಭೂಮಿ ಅಥವಾ ಖಾಸಗೀ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಗೇಣಿ ನೀಡುವುದನ್ನು ನಿಲ್ಲಿಸಬೇಕು. ಸರ್ಕಾರಿ ಜಾಗದಲ್ಲಿ ನೆಲೆ ನಿಂತಿರುವ ನಿರಾಶ್ರಿತರಿಗೆ ಸರ್ವೇ ಕಾರ್ಯ ನಡೆಸಿ ಅದೇ ಜಾಗವನ್ನು ಹಂಚಿಕೆ ಮಾಡಬೇಕು ಎಂದು ನಿಯೋಗ ಮುಖ್ಯಮಂತ್ರಿ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT